ಗುರುವಾರ , ಆಗಸ್ಟ್ 11, 2022
21 °C
ಎಂಟು ಖರೀದಿ ಕೇಂದ್ರಗಳಲ್ಲಿ ಕ್ವಿಂಟಲ್‍ಗೆ ₹ 3,295 ಬೆಂಬಲ ಬೆಲೆ: ಡಿ.ಸಿ

15ರಿಂದ ರಾಗಿ ಖರೀದಿ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ‘ಜಿಲ್ಲೆಯಲ್ಲಿ ಪ್ರತಿ ಕ್ವಿಂಟಲ್‍ಗೆ ರಾಗಿಯನ್ನು ₹ 3,295 ಬೆಂಬಲ ಬೆಲೆಯಲ್ಲಿ ಖರೀದಿಸಲು ಅಗತ್ಯ ಸಿದ್ಧತೆ ಕೈಗೊಂಡು ಸ್ವೀಕೃತಿ ಕೇಂದ್ರಗಳನ್ನು ತೆರೆಯಬೇಕು’ ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ನಿರ್ದೇಶನ ನೀಡಿದರು.

ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ ಅವರು, ‘2020-21 ನೇ ಸಾಲಿನಲ್ಲಿ ಮುಂಗಾರು ಋತುವಿನಲ್ಲಿ ಕನಿಷ್ಠ ಬೆಂಬಲ ಬೆಲೆಯೊಂದಿಗೆ ರಾಜ್ಯದಲ್ಲಿ 3 ಲಕ್ಷ ಟನ್ ರಾಗಿ ಖರೀದಿಸಲು ಅನುಮತಿ ನೀಡಿದೆ. ಅದರಂತೆ ಜಿಲ್ಲೆಯಲ್ಲಿ ಹಾಸನ, ಬೇಲೂರ, ಹೊಳೆನರಸೀಪುರ, ಬಾಣಾವರ, ಗಂಡಸಿ, ಜೆ.ಸಿ.ಪುರ, ಜಾವಗಲ್ ಹಾಗೂ ಚನ್ನರಾಯಪಟ್ಟಣದಲ್ಲಿ ಖರೀದಿ ಕೇಂದ್ರ ತೆರೆಯಬೇಕು’ ಎಂದು ಸೂಚನೆ ನೀಡಿದರು.

ಉತ್ಪಾದನೆಗೆ ಅನುಗುಣವಾಗಿ ಪ್ರತಿ ರೈತರಿಂದ ಎಕರೆಗೆ 10 ಕ್ವಿಂಟಲ್‌ನಂತೆ ಗರಿಷ್ಠ 50 ಕ್ವಿಂಟಲ್‌ ರಾಗಿಯನ್ನು ಮಾತ್ರ ಖರೀದಿಸಬೇಕು. ಜ. 31ರವರೆಗೆ ರೈತರ ನೋಂದಣಿಗೆ ಅವಕಾಶವಿದ್ದು, ಡಿ. 15ರಿಂದ ಮಾರ್ಚ್ 15ರವರೆಗೆ ಖರೀದಿ ನಡೆಯಲಿದೆ ಎಂದರು.

ಆಹಾರ ಧಾನ್ಯಗಳ ಸಂಗ್ರಹಣೆಗೆ ಕೃಷಿ ಇಲಾಖೆಯಿಂದ ಜಾರಿಗೊಳಿಸಿರುವ ಪ್ರೂಟ್ಸ್ ದತ್ತಾಂಶದಿಂದ ರೈತರ ಮಾಹಿತಿಯನ್ನು ನೇರವಾಗಿ ಪಡೆದು ಕೃಷಿ ಇಲಾಖೆ ಒದಗಿಸಿರುವ ಸರಾಸರಿ ಬೆಳೆ ಮಾಹಿತಿ ಅನ್ವಯ ಹಾಗೂ ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯ ಕನಿಷ್ಠ ಬೆಂಬಲ ಬೆಲೆ ಯೋಜನೆಗಳಡಿ ನೋಂದಣಿ ಆರಂಭಿಸಿ, ಶೀಘ್ರ ರಾಗಿ ಖರೀದಿಸಿ ಎಂದು ಹೇಳಿದರು.

ಜಿಲ್ಲೆಯಲ್ಲಿ ರಾಗಿ ಖರೀದಿಗೆ ರಾಜ್ಯ ಸಹಕಾರ ಮಾರುಕಟ್ಟೆ ಮಹಾಮಂಡಳವನ್ನು ಸಂಗ್ರಹಣಾ ಏಜೆನ್ಸಿಯಾಗಿ ನೇಮಿಸಲಾಗಿದೆ. ಅಧಿಕಾರಿಗಳು ಅಗತ್ಯ ವ್ಯವಸ್ಥೆ ಮಾಡಿಕೊಂಡು ರೈತರಿಗೆ ನೋಂದಣಿ ಕಾರ್ಯ ಪ್ರಾರಂಭಿಸಿ. ಪ್ರತಿ ಖರೀದಿ ಕೇಂದ್ರಕ್ಕೆ ಕೃಷಿ ಇಲಾಖೆಯಿಂದ ಗ್ರೇಡರ್‌ಗಳನ್ನು ನೇಮಿಸಬೇಕು. ರೈತರು ₹ 12ಕ್ಕೆ ಗುಣಮಟ್ಟದ ಗೋಣಿ ಚೀಲವನ್ನು ನ್ಯಾಯಬೆಲೆ ಅಂಗಡಿಗಳ ಮೂಲಕ ಖರೀದಿಸಬಹುದಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಉಪ ನಿರ್ದೇಶಕ ಪುಟ್ಟಸ್ವಾಮಿ, ಜಂಟಿ ಕೃಷಿ ನಿರ್ದೇಶಕ ರವಿ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.