ಸೋಮವಾರ, ಡಿಸೆಂಬರ್ 6, 2021
27 °C

ಹಕ್ಕಿಪಿಕ್ಕಿಗಳಿಗೆ ವಿದೇಶದಲ್ಲಿ ಮಣೆ

ಕೆ.ಎಸ್‌.ಸುನಿಲ್‌‌ Updated:

ಅಕ್ಷರ ಗಾತ್ರ : | |

Prajavani

ಹಾಸನ: ಔಷಧ ಗಿಡ ಮೂಲಿಕೆಗಳ ಮಾರಾಟ, ಬಾಡಿ ಮಸಾಜ್‌ ಕಾಯಕದ ಮೂಲಕ ಬೇಲೂರು ತಾಲ್ಲೂಕಿನ ಅಂಗಡಿಹಳ್ಳಿ ಗ್ರಾಮದ ಹಕ್ಕಿಪಿಕ್ಕಿ ಸಮುದಾಯದ ಕುಟುಂಬಗಳು ಬದುಕು ಕಟ್ಟಿಕೊಂಡಿವೆ. ಸಮುದಾಯದ 300ಕ್ಕೂ ಅಧಿಕ ಕುಟುಂಬಗಳು ವಾಸಿಸುತ್ತಿದ್ದು, 30 ಮಂದಿ ಪಾಸ್‌ಪೋರ್ಟ್‌ ಹೊಂದಿದ್ದಾರೆ.

ವರ್ಷದಲ್ಲಿ ಎರಡು ಬಾರಿ ಏಜೆನ್ಸಿ ಮೂಲಕ ಕುಟುಂಬದ ಒಬ್ಬರು ಅಥವಾ ಇಬ್ಬರು 4–5 ತಿಂಗಳಿಗೆ ವೀಸಾ ಪಡೆದು
ಸಿಂಗಾಪುರ, ಮಲೇಷಿಯಾ, ದುಬೈ, ಕುವೈತ್, ಉಗಾಂಡ, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ರಷ್ಯಾ ಹಾಗೂ ಇತರೆ ದೇಶಗಳಿಗೆ ತೆರಳಿ, ತಾವೇ ಸಿದ್ಧಪಡಿಸಿದ ಗಿಡಮೂಲಿಕೆಗಳ ಔಷಧದಿಂದ ಮಸಾಜ್‌ ಮಾಡಿ ಹಣ ಸಂಪಾದನೆ ಮಾಡುತ್ತಿದ್ದಾರೆ.

ಉಳಿದವರು ಸ್ಥಳೀಯ ಮಟ್ಟದಲ್ಲಿ ಔಷಧ ಸಾಮಗ್ರಿ ಮಾರಾಟ ಮಾಡಿಕೊಂಡು ಬದುಕಿನ ಬಂಡಿ ಸಾಗಿಸುತ್ತಿದ್ದಾರೆ.
ಪಾರ್ಸ್‌ಪೂರ್ಟ್‌ ಹೊಂದಿದ್ದರೂ ಆರ್ಥಿಕ ಸಮಸ್ಯೆಯಿಂದ ಹಲವರ ವಿದೇಶ ಪ್ರಯಾಣದ ಕನಸು ಇನ್ನು ನನಸಾಗಿಲ್ಲ.

ಹಕ್ಕಿಪಿಕ್ಕಿ ಸಮುದಾಯದಲ್ಲಿ 46 ಒಳಪಂಗಡಗಳಿದ್ದು, ಮಾತೃಭಾಷೆಯನ್ನು ವಾಗರಿ ಎಂದು ಕರೆಯುತ್ತಾರೆ. ಕನ್ನಡ, ತಮಿಳು, ತೆಲಗು, ಮಳೆಯಾಳಿ, ತುಳು ಭಾಷೆಯನ್ನು ಸುಲಲಿತವಾಗಿ ಮಾತನಾಡುತ್ತಾರೆ. ಅಲ್ಪಸ್ವಲ್ಪ ಇಂಗ್ಲಿಷ್‌ ಸಹ
ಮಾತನಾಡುತ್ತಾರೆ.

ಗ್ರಾಮದಲ್ಲಿ ಸುತ್ತು ಹಾಕಿದರೆ ನರಕ ದರ್ಶನವಾಗುತ್ತದೆ. ಹದಗೆಟ್ಟ ರಸ್ತೆ, ರಸ್ತೆ ಮೇಲೆ ಹರಿಯುವ ಚರಂಡಿ ನೀರು, ಬಯಲು ಬಹಿರ್ದೆಸೆ, ಮನೆ ಮುಂದೆಯೇ ಮಕ್ಕಳಿಗೆ ಸ್ನಾನ ಮಾಡಿಸುವುದು, ಬಟ್ಟೆ, ಪಾತ್ರೆ ತೊಳೆಯುವುದು, ಹೆಂಚು, ಶೀಟ್‌ ಮನೆಗಳು, ಗುಡಿಸಲುಗಳ ದರ್ಶನವಾಗುತ್ತದೆ. ಅವ್ಯವಸ್ಥೆ ನಡುವೆಯೂ ಇಪ್ಪತ್ತಕ್ಕೂ ಹೆಚ್ಚು ಬಹುಮಹಡಿ ಮನೆಗಳು, ಹೊಂಡಾ ಎಕ್ಸ್‌ಯುವಿ, ಡಸ್ಟರ್‌ ಕಾರುಗಳು, ರಸ್ತೆ ಬದಿಯ ಸೂಪರ್‌ ಮಾರುಕಟ್ಟೆ ಆಕರ್ಷಿಸುತ್ತದೆ.

ಗ್ರಾಮದಲ್ಲಿ ಶಿಳ್ಳೆಕ್ಯಾತ, ಈಡಿಗ ಸಮುದಾಯದವರು ಇದ್ದಾರೆ. ಆದರೆ ಇವರು ಅವರಿಂದ ಅಂತರ ಕಾಪಾಡಿಕೊಂಡಿದ್ದಾರೆ.

‘ನಮ್ಮವರು ಶುಚಿತ್ವ ಕಾಪಾಡುವುದಿಲ್ಲ ಅಂತ ಬೇರೆ ಸಮುದಾಯದವರು ದೂರು ನಿಂತು ಮಾತನಾಡಿಸುತ್ತಾರೆ. ವಿದೇಶಕ್ಕೆ ಹೋಗಿ ಬಂದವರು ಅಂತಾರೆ. ಆದರೆ, ಗ್ರಾಮದಲ್ಲಿ ಸಾಕಷ್ಟು ಸಮಸ್ಯೆ ಇದೆ. ಅನಾರೋಗ್ಯಕ್ಕೆ ತುತ್ತಾದರೆ ಹಗರೆಗೆ ಹೋಗಬೇಕು. ಶೀಟ್‌ ಮನೆ, ಗುಡಿಸಲಿನಲ್ಲಿಯೇ ವಾಸ ಮಾಡುವವರು ಎಷ್ಟೋ ಮಂದಿ ಇದ್ದಾರೆ. ಸತ್ತವರ ಮಣ್ಣು ಮಾಡಲು ಜಾಗವಿಲ್ಲ. ಕೃಷಿ ಮಾಡಲೂ ಜಮೀನು ಇಲ್ಲ’ಎಂದು ಉದಯ ಕುಮಾರ್‌ ಅಳಲು ತೋಡಿಕೊಂಡರು.

ವಿದೇಶ ಪಯಣ ಮಾಡಿದವರು, ವಿದೇಶ ಪಯಣದ ಕನಸು ಕಾಣುತ್ತಿರುವ ಯುವಕರು, ಮಹಿಳೆಯರು ಹಾಗೂ ವೃದ್ಧರು
ಮೊಬೈಲ್‌ ಸ್ಮಾರ್ಟ್‌ಫೋನ್‌ ಬಳಸುತ್ತಿದ್ದಾರೆ. ಎಸ್ಸೆಸ್ಸೆಲ್ಸಿ, ಪಿಯುಸಿ ಪಾಸಾದವರು, ಫೇಲಾದವರೇ ಹೆಚ್ಚು. ಬೆರಳಣಿಕೆಯಷ್ಟು ಪದವೀಧರರು ಇದ್ದಾರೆ. ಒಬ್ಬರಿಗೂ ಸರ್ಕಾರಿ ಉದ್ಯೋಗ ದೊರೆತಿಲ್ಲ ಎಂಬ ಕೊರಗು ಈ ಸಮುದಾಯವನ್ನು ಕಾಡುತ್ತಿದೆ.

‘ಸರ್ಕಾರಿ ಉದ್ಯೋಗ ಸಿಗುವುದಿಲ್ಲ ಎಂಬ ಕಾರಣಕ್ಕೆ ಮಕ್ಕಳ ವಿದ್ಯಾಭ್ಯಾಸ ಅರ್ಧಕ್ಕೆ ಮೊಟಕುಗೊಳಿಸಿ ಪೋಷಕರ ಜತೆ
ಇದೇ ಕೆಲಸದಲ್ಲಿ ತೊಡಗಿಸಿಕೊಳ್ಳಲಾಗುತ್ತಿದೆ. ಜತೆಗೆ ವಿದ್ಯಾಭ್ಯಾಸಕ್ಕೆ ಆರ್ಥಿಕ ಸಮಸ್ಯೆಯೂ ಕಾರಣ’ ಎನ್ನುತ್ತಾರೆ ಗ್ರಾಮದ ಹಿರಿಯರು.

ಮೈಸೂರಿನ ಜಿಲ್ಲೆಯ ಹುಣಸೂರು, ಎಚ್‌.ಡಿ.ಕೋಟೆ, ಕೇರಳದ ಪಾಲಕ್ಕಾಡ್, ಅಟ್ಟಾಪಾಡ್‌ನಿಂದ ಗಿಡಮೂಲಿಕೆಗಳನ್ನು
ತರಲಾಗುತ್ತದೆ.‌ ಡಯಾಬಿಟಿಸ್, ರಕ್ತದೊತ್ತಡ, ಗ್ಯಾಸ್ಟ್ರಿಕ್ಟ್, ತಲೆನೋವು, ಮೈಕೈ ನೋವು, ಕೂದಲು ಉದುರುವುದು ಸೇರಿ ಬಾಡಿ ಮಸಾಜ್‌ಗೆ ಬೇಕಾದ ಎಣ್ಣೆ ಸಹ ಪೂರೈಕೆ ಮಾಡುತ್ತಾರೆ.

‘ ’ಸಿಕ್ಕಿದ್ರೆ ಶಿಕಾರಿ, ಬಿಟ್ಟರೆ ಬಿಕಾರಿ’ ಅಂತ ಹಿರಿಯರು ಯಾವಾಗಾಲೂ ಹೇಳುತ್ತಿರುತ್ತಾರೆ. ಓದಿರುವುದು ಏಳನೇ
ತರಗತಿಯಾದರೂ ಹತ್ತು ದೇಶ ಸುತ್ತಾಡಿದ್ದೇನೆ. ವಿದೇಶಗಳಲ್ಲಿ ದುಡಿದರೂ ಖರ್ಚೆಲ್ಲಾ ಕಳೆದು ವರ್ಷಕ್ಕೆ ₹1 ರಿಂದ ₹ 2
ಲಕ್ಷ ಉಳಿತಾಯವಾಗಬಹುದು. ಒಂದೊಂದು ದೇಶದಲ್ಲೂ ಬೇರೆ ಬೇರೆ ರೂಪಾಯಿ ಮೌಲ್ಯ ಇರುವುದರಿಂದ ನಿರ್ದಿಷ್ಟ
ಆದಾಯ ನಿರೀಕ್ಷೆ ಮಾಡಲು ಸಾಧ್ಯವಿಲ್ಲ’ ಎನ್ನುತ್ತಾರೆ ಅಂಗಡಿಹಳ್ಳಿ ನಿವಾಸಿ ಖುನಿಷಾ .

***

ಹತ್ತ ವರ್ಷಗಳ ಹಿಂದೆ ದುಬೈ, ಕತಾರ್, ಕುವೈತ್‌ ದೇಶಗಳಿಗೆ ಭೇಟಿ ನೀಡಿ ಔಷಧ ಮಾರಾಟ, ಮಸಾಜ್‌ನಿಂದ ಹಣ
ಸಂಪಾದಿಸುತ್ತಿದೆ. ಈಗ ವಿದೇಶಕ್ಕೆ ಹೋಗಲು ಹಣವಿಲ್ಲ. ಮನೆ, ಮಕ್ಕಳ ಮದುವೆಗೆ ಮಾಡಿದ ಸಾಲ ಇನ್ನೂ ತೀರಿಸಲು
ಆಗಿಲ್ಲ. 
–ಅಮಾವಾಸೆ, ಅಂಗಡಿಹಳ್ಳಿ ನಿವಾಸಿ

ಪ್ರತಿ ಕುಟುಂಬಕ್ಕೆ ಇಂತಿಷ್ಟು ಜಮೀನು ನೀಡಿದರೆ ಅಲ್ಲಿಯೇ ಗಿಡಮೂಲಿಕೆಗಳನ್ನು ಬೆಳೆದು ವ್ಯಾಪಾರ ವೃದ್ಧಿಸಿಕೊಳ್ಳಬಹುದು. ಜಿಲ್ಲಾಡಳಿತ, ಜನಪ್ರತಿನಿಧಿಗಳಿಗೆ ಮಾಡಿದರೂ ಗಮನ ಹರಿಸುತ್ತಿಲ್ಲ.
–ಉದಯ್ ಕುಮಾರ್‌, ಅಂಗಡಿಹಳ್ಳಿ ನಿವಾಸಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.