ಹಾಸನ: ರಾಜ್ಯಪಾಲರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡುತ್ತಿರುವ ವ್ಯಕ್ತಿಗಳು ಹಾಗೂ ಪೂರ್ವ ನಿಯೋಜಿತ ಪ್ರತಿಭಟನೆ ನಡೆಸುತ್ತಿರುವ ಕಾಂಗ್ರೆಸ್ ನಾಯಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಬಿಜೆಪಿ ಜಿಲ್ಲಾ ಘಟಕದ ಸದಸ್ಯರು ಹಾಗೂ ಮುಖಂಡರು ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಬಿಜೆಪಿ ಮುಖಂಡರು, ಸಾಂವಿಧಾನಿಕ ಹುದ್ದೆಯಲ್ಲಿರುವವರನ್ನು ಅತ್ಯಂತ ಹೀನಾಯವಾಗಿ ನಡೆಸಿಕೊಂಡ ಕಾಂಗ್ರೆಸ್ ನಾಯಕರು ಈಗಲೂ ಅದೇ ಚಾಳಿ ಮುಂದುವರಿಸಿದ್ದಾರೆ ಎಂದು ದೂರಿದರು.
ರಾಜ್ಯಪಾಲರ ಹುದ್ದೆಯ ಘನತೆಯನ್ನು ಅರಿಯದ ಕಾಂಗ್ರೆಸ್ ನಾಯಕರು, ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡುತ್ತಿದ್ದಾರೆ. ಹಾದಿ ಬೀದಿಗಳಲ್ಲಿ ಪ್ರತಿಕೃತಿ ದಹಿಸಿ ಅವಮಾನ ಮಾಡುತ್ತಿದ್ದು, ಇದರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ಹಿಂದೆಯೂ ರಾಜ್ಯದ ರಾಜ್ಯಪಾಲರು ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದರು. ಅಂದು ಕಾನೂನಾತ್ಮಕವಾಗಿ ಉತ್ತರ ನೀಡಲಾಗಿತ್ತು. ಕಾಂಗ್ರೆಸ್‌ನವರಂತೆ ರಾಜ್ಯಪಾಲರಿಗೆ ಅವಮಾನವನ್ನು ಮಾಡಿರಲಿಲ್ಲ. ಇಂದು ಕಾಂಗ್ರೆಸ್ ನಾಯಕರ ಇಂತಹ ಕೃತ್ಯಗಳನ್ನು ಪೊಲೀಸರು ತಡೆಯಬೇಕು. ಅದನ್ನು ಬಿಟ್ಟು ನಿರ್ಲಕ್ಷ್ಯ ತೋರುತ್ತಿರುವುದು ಸರಿಯಲ್ಲ ಎಂದರು.
ರಾಜ್ಯಪಾಲರು ಸಂವಿಧಾನಕ್ಕೆ ಹುದ್ದೆಯಲ್ಲಿದ್ದು, ಸಾರ್ವಜನಿಕರ ವೈಯಕ್ತಿಕ ದಾಳಿಯನ್ನು ಎದುರಿಸಲು ಸಾಧ್ಯವಿಲ್ಲ. ವಾಕ್ ಸ್ವಾತಂತ್ರ್ಯದ ನೆಪದಲ್ಲಿ ವ್ಯಕ್ತಿಯ ಪ್ರತಿಷ್ಠೆಗೆ ಧಕ್ಕೆ ತರುವಂಥ ಹಾಗೂ ಮಾನಹಾನಿಕರ ಹೇಳಿಕೆ ನೀಡುವಂತಿಲ್ಲ ಎಂದು ಈ ಹಿಂದೆಯೇ ಕೋಲ್ಕತ್ತ ಹೈಕೋರ್ಟ್ ಆದೇಶಿಸಿದೆ. ಹೀಗಿದ್ದರೂ ರಾಜ್ಯದ ಕಾಂಗ್ರೆಸ್ ಸರ್ಕಾರ ರಾಜ್ಯಪಾಲರ ವಿರುದ್ಧ ಮಾತನಾಡುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಅಧಿಕಾರಕ್ಕಾಗಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಹೆಸರನ್ನು ಬಳಸಿಕೊಳ್ಳುವ ಕಾಂಗ್ರೆಸ್ ನಾಯಕರು, ಆ ಸಮುದಾಯದ ಸಾವಿರಾರು ಮಂದಿಗೆ ಸೇರಬೇಕಾದ ಹಣವನ್ನು ದುರ್ಬಳಕೆ ಮಾಡಿಕೊಂಡಿದೆ. ಇದೀಗ ನಿಯಮದ ಪ್ರಕಾರ ಮುಖ್ಯಮಂತ್ರಿಗಳ ವಿರುದ್ಧ ತನಿಖೆ ನಡೆಸಲು ಅನುಮತಿ ನೀಡಿದ ರಾಜ್ಯಪಾಲರನ್ನು ವೈಯಕ್ತಿಕವಾಗಿ ನಿಂದನೆ ಮಾಡುತ್ತಿರುವುದು ಕೀಳು ಮಟ್ಟದ ರಾಜಕೀಯ. ರಾಜ್ಯಪಾಲರನ್ನು ಬೇಕಾಬಿಟ್ಟಿಯಾಗಿ ನಿಂದಿಸುತ್ತಿರುವ ಕಾಂಗ್ರೆಸ್ ನಾಯಕರು ಹಾಗೂ ಅವರ ಹಿಂಬಾಲಕರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿದರು.
ರೈತ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ನಾರಾಯಣಗೌಡ, ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಅಮಿತ್ ಶೆಟ್ಟಿ, ನಗರ ಘಟಕದ ಅಧ್ಯಕ್ಷ ಮಂಜು, ಮುಖಂಡರಾದ ವೆಂಕಟೇಶ್, ಪ್ರೀತಿವರ್ಧನ್, ವೇದಾವತಿ, ಶೋಭನ್ ಬಾನು, ಹರ್ಷಿತ್ ಇತರರು ಭಾಗವಹಿಸಿದ್ದರು.
ಶೋಷಿತರ ವಿರೋಧಿ ನಡೆ
ರಾಜ್ಯದಲ್ಲಿ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನು ಬೇಕಾಬಿಟ್ಟಿ ವರ್ಗಾವಣೆ ಮಾಡಿರುವುದು ಸಾಬೀತಾಗಿದೆ. ಮುಡಾ ನಿವೇಶನಗಳನ್ನು ತಮ್ಮ ಪತ್ನಿಗೆ ಅಕ್ರಮವಾಗಿ ವರ್ಗಾಯಿಸಿಕೊಳ್ಳುವ ಮೂಲಕ ನಾಡಿನ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನರಿಗೆ ಅನ್ಯಾಯ ಮಾಡಿದ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ನಾಯಕರು ಈಗ ಶೋಷಿತ ವರ್ಗಕ್ಕೆ ಸೇರಿದ ರಾಜ್ಯಪಾಲರ ಮೇಲೆ ಮುಗಿಬಿ ದ್ದಿರುವುದು ಆ ಪಕ್ಷದ ನಾಯಕರು ಶೋಷಿತ ಸಮುದಾಯದ ವಿರುದ್ಧ ಇದ್ದಾರೆ ಎಂಬುದನ್ನು ಸಾಬೀತುಪಡಿಸಿದೆ ಎಂದು ಬಿಜೆಪಿ ಮುಖಂಡರು ಆರೋಪಿಸಿದರು. ರಾಜಭವನದ ಮೇಲೆ ಬಾಂಗ್ಲಾ ಮಾದರಿ ದಾಳಿ ನಡೆಸುವುದಾಗಿ ಹೇಳಿರುವ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಸಚಿವರಾದ ಜಮೀರ್ ಅಹಮದ್ ಖಾನ್ ಕೃಷ್ಣ ಬೈರೇಗೌಡ ದಿನೇಶ್ ಗುಂಡೂರಾವ್ ಶಾಸಕ ನಂಜೇಗೌಡ ಮೊದಲಾದವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.