ಶುಕ್ರವಾರ, ಜುಲೈ 30, 2021
22 °C
ಟೊಮೆಟೊ, ತರಕಾರಿ ಕೇಳುವವರೇ ಇಲ್ಲ

ಲಾಕ್‌ಡೌನ್ ಪರಿಣಾಮ: ಹೊಲದಲ್ಲೇ ಕೊಳೆತು ಹೋದ ಎಲೆಕೋಸು

ಎಚ್.ಎಸ್.ಅನಿಲ್‌ಕುಮಾರ್‌ Updated:

ಅಕ್ಷರ ಗಾತ್ರ : | |

Prajavani

ಹಳೇಬೀಡು: ತರಕಾರಿ ಬೆಳೆದ ಹೆಸರಾದ ಹಳೇಬೀಡು ಭಾಗದ ರೈತರು ಲಾಕ್‌ಡೌನ್ ಪರಿಣಾಮದಿಂದ ಟೊಮೆಟೊ, ಎಲೆಕೋಸು ಬೆಳೆದು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೇಳುವವರೇ ಇಲ್ಲದೆ ತರಕಾರಿ ಹೊಲದಲ್ಲಿಯೇ ಕೊಳೆತು ಹೋಗುತ್ತಿವೆ. ಎರಡೂ ಬೆಳೆಗಳು ಹೊಲಕ್ಕೆ ಹೊರೆಯಾಗಿದ್ದು ರೈತರನ್ನು ಚಿಂತಕ್ರಾಂತರನ್ನಾಗಿ ಮಾಡಿವೆ.

ಜೇಬು ತುಂಬಿಸಬೇಕಾಗಿದ್ದ ಬೆಳೆಗಳು ರೈತರಿಗೆ ಸಮಸ್ಯೆಯಾಗಿ ಕಾಡುತ್ತಿವೆ. ಬಂಡವಾಳ ಹಾಕಿ ಬೆಳೆದ ರೈತರಿಗೆ ಫಸಲು ಕೈಗೆ ಬಂದಾಗ ಸೂಕ್ತ ಬೆಲೆ ಇಲ್ಲದಂತಾಗಿದೆ. ಸಿಕ್ಕಿದಷ್ಟು ಬೆಲೆಗೆ ಕೊಟ್ಟು ಕೈತೊಳೆದು ಕೊಳ್ಳೋಣ ಎಂದರೂ ಕೇಳುವವರೇ ಇಲ್ಲದಂತಾಗಿದೆ.

‘ಪಂಪ್‌ಸೆಟ್‌ಗಳಿಗೆ ರಾತ್ರಿ ವಿದ್ಯುತ್ ಸರಬರಾಜು ಆಗುತ್ತಿರುವುದರಿಂದ ನಿದ್ದೆ ಇಲ್ಲದೆ ಬೆಳೆಗೆ ನೀರುಣಿಸಬೇಕು. ರಸಗೊಬ್ಬರ ಬೆಲೆ ಈಗ ಗಗನಕ್ಕೇರಿದೆ. ಕ್ರಿಮಿನಾಶಕ ಬಳಸದೆ ತರಕಾರಿ ಬೆಳೆಯಲು ಸಾಧ್ಯವಾಗುತ್ತಿಲ್ಲ. ಕೂಲಿ ಕಾರ್ಮಿಕರಿಗೆ ಕೆಲಸ ಮುಗಿದಾಕ್ಷಣ ಸಾಲ ಮಾಡಿಯಾದರೂ ಹಣ ಕೊಡಬೇಕು. ಬಿಸಿಲು ಬಾರದೆ ಮೋಡದ ವಾತಾವರಣಕ್ಕೆ ಮುರುಟುತ್ತಿದ್ದ ಬೆಳೆಯನ್ನು ಕಾಪಾಡಿದರೂ ಪ್ರತಿಫಲ ಇಲ್ಲದಂತಾಯಿತು’ ಎಂದು ಸೊಪ್ಪಿನಹಳ್ಳಿ ಕೋಸು ಬೆಳೆಗಾರ ಪರ್ವತೇಗೌಡ ಅಳಲು ತೋಡಿಕೊಂಡರು.

‘ಲಾಭದ ನಿರೀಕ್ಷೆಯಲ್ಲಿ 1.5 ಎಕರೆ ಕೋಸು ಬೆಳೆಯಲು ₹ 75 ಸಾವಿರ ಬಂಡವಾಳ ಹಾಕಿದ್ದೆ. ಉತ್ತಮ ಫಸಲು ಬಂದಿದೆ ಕೇಳುವವರೇ ಇಲ್ಲ.  ₹ 10 ಸಾವಿರಕ್ಕೆ ಕೇಳಿದ ವರ್ತಕರು ಖರೀದಿ ಮಾಡಲೇ ಇಲ್ಲ. ಈಗ ರೋಟರ್ ಹೊಡೆಸಿ ಬೆಳೆ ನಾಶ ಮಾಡಿದ್ದೇವೆ. ಇದರಿಂದ ಹೆಚ್ಚುವರಿ ₹ 5000 ಖರ್ಚು ತಲೆ ಮೇಲೆ ಬಂತು. ಕೊರೊನಾ ನಿಯಂತ್ರಣ ಆಗದಿದ್ದರೆ ರೈತರು ಬದುಕು ಕಷ್ಟವಾಗುತ್ತದೆ’ ಎಂದು ಪರ್ವತೇಗೌಡ ಹೇಳಿದರು.

‘ಒಂದು ಎಕರೆ ಟೊಮೊಟೊ ಬೆಳೆಯಲು ₹ 70 ಸಾವಿರ ಖರ್ಚು ಬರುತ್ತದೆ. ಉತ್ತಮ ಫಸಲಿನ ನಿರೀಕ್ಷೆಯಲ್ಲಿ ₹ 5000 ಹೆಚ್ಚುವರಿ ಬಂಡವಾಳ ಹಾಕಿ ಕೈ ಸುಟ್ಟು ಕೊಂಡೆ. ಉಚಿತವಾಗಿ ಕೊಡುತ್ತೇನೆ ಎಂದರೂ ಜಮೀನಿನತ್ತ ಯಾರು ಸುಳಿಯಲಿಲ್ಲ. ಗುಣಮಟ್ಟದ ಟೊಮೆಟೊ ನೆಲಕ್ಕೆ ಉದುರಿ ಕೊಳೆಯುತ್ತಿದೆ’ ಎಂದು ರೈತ ಮಧು ಬೇಸರ ವ್ಯಕ್ತಪಡಿಸಿದರು.

‘ಹಳೇಬೀಡು ಭಾಗದ ತರಕಾರಿಗೆ ಉಡುಪಿ, ಮಂಗಳೂರು ಜಿಲ್ಲೆಗಳಲ್ಲಿ ಭಾರಿ ಬೇಡಿಕೆ. ಈ ಭಾಗದ ತರಕಾರಿ ಕೇರಳ ರಾಜ್ಯಕ್ಕೂ ಹೋಗುತ್ತದೆ. ದೂರದ ಊರುಗಳಿಂದ ವರ್ತಕರು ಬರುವುದು ತೀರಾ ಕಡಿಮೆಯಾಗಿದೆ ಹೀಗಾಗಿ ತರಕಾರಿಗಳಿಗೆ ಬೇಡಿಕೆ ಕಡಿಮೆಯಾಗಿದೆ’ ಎನ್ನುತ್ತಾರೆ ವರ್ತಕ ಈಶ್ವರ್.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು