ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲುಬಾಯಿ ಜ್ವರ: ಜಾನುವಾರಿಗೆ ಲಸಿಕೆ ನೀಡಿ

ಪಶುಸಂಗೋಪನಾ ಸಚಿವರನ್ನು ಹುಡುಕಿಕೊಡಿ: ಪೊಲೀಸರಿಗೆ ರೇವಣ್ಣ ಮನವಿ
Last Updated 29 ಅಕ್ಟೋಬರ್ 2021, 16:03 IST
ಅಕ್ಷರ ಗಾತ್ರ

ಹಾಸನ: ಜಿಲ್ಲೆಯಲ್ಲಿ ಕಾಲುಬಾಯಿ ಜ್ವರ ಮತ್ತು ಚಪ್ಪೆ ರೋಗದಿಂದ ಜಾನುವಾರುಗಳು ಸಾಯುತ್ತಿದ್ದರೂ ಪಶುಸಂಗೋಪನಾ ಸಚಿವರು ಗಮನ ಹರಿಸಿಲ್ಲ. ಕಾಣೆಯಾಗಿರುವ ಸಚಿವರನ್ನು ಹುಡುಕಿ ಕೊಡಿ ಎಂದು ಪೊಲೀಸ್‌ ಇಲಾಖೆಗೆ ದೂರು ನೀಡಲಾಗುವುದು ಎಂದು ಶಾಸಕ ಎಚ್‌.ಡಿ. ರೇವಣ್ಣ ಹೇಳಿದರು.

ಪಶುಸಂಗೋಪನೆ ಸಚಿವರು ರಾಜ್ಯದಲ್ಲಿ ಇದ್ದಾರೋ ಅಥವಾ ಹೊರ ರಾಜ್ಯದಲ್ಲಿ ಇದ್ದಾರೋ ಗೊತ್ತಿಲ್ಲ. ಅವರನ್ನು ಹುಡುಕಿಕೊಡುವಂತೆ ರಾಜ್ಯದ ಡಿಜಿಪಿಗೆ ದೂರು ನೀಡಲಾಗುವುದು. ಎರಡು ವರ್ಷದಿಂದ ಜಿಲ್ಲೆಯ ಜಾನುವಾರುಗಳಿಗೆ ಕಾಲು ಬಾಯಿ ಜ್ವರಕ್ಕೆ ಲಸಿಕೆ ನೀಡಿಲ್ಲ. ಇದರಲ್ಲಿಯೂ ಹಣ ಹೊಡೆಯುಲು ಸಂಚು ಮಾಡಿದರೆ ಬಿಜೆಪಿ ನಾಯಕರಿಗೆ ಗೋ ಮಾತೆ ಶಾಪ ತಟ್ಟದೇ ಇರುವುದಿಲ್ಲ. ಸರ್ಕಾರ ಇದೆಯೋ ಅಥವಾ ಇಲ್ಲವೋ ತಿಳಿದಿಲ್ಲ. ಚುನಾವಣೆ ನಡೆಸುವುದನ್ನು ಬಿಟ್ಟು ರೈತರ ಕಡೆ ಗಮನ ಕೊಡಿ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಒಟ್ಟು 6.56 ಲಕ್ಷ ಜಾನುವಾರುಗಳಿವೆ. ಈ ಪೈಕಿ ಜಿಲ್ಲಾ ಪಂಚಾಯಿತಿ ಮತ್ತು ಕೆಎಂಎಫ್‌ ವತಿಯಿಂದ 1.28 ಲಕ್ಷ ಜಾನುವರುಗಳಿಗೆ ಮಾತ್ರ ಲಸಿಕೆ ನೀಡಲಾಗಿದೆ. 5.77 ಲಕ್ಷ ಜಾನುವಾರುಗಳಿಗೆ ಇನ್ನೂ ಲಸಿಕೆ ನೀಡಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಲಸಿಕೆಗೆ ಒಂದು ಬಿಡಿಗಾಸು ನೀಡಿಲ್ಲ. ಚಪ್ಪೆ ರೋಗ ಮತ್ತು ಕಾಲು ಬಾಯಿ ಜ್ವರದಿಂದ ಹಸುಗಳು ಸಾಯುತ್ತಿವೆ. ಸಾಂಕ್ರಾಮಿಕ ರೋಗವಾಗಿರುವುದರಿಂದ ಇತರೆ ಜಾನುವಾರುಗಳಿಗೂ ಹರಡುವ ಭೀತಿ ಇದೆ. ಇಂತಹ ಸ್ಥಿತಿ ಇದ್ದರೂ ಇಲಾಖೆ ಸಚಿವರೂ ಗಮನ ಹರಿಸಿಲ್ಲ ಎಂದು ರೇವಣ್ಣ ಆರೋಪಿಸಿದರು.

ರಾಜ್ಯದಲ್ಲಿರುವುದು ಮಧ್ಯವರ್ತಿಗಳ ಪರವಾದ ಸರ್ಕಾರ. ರಾಜ್ಯದಲ್ಲಿ ಈಗ ಜೋಳದ ಸುಗ್ಗಿ. ಮಧ್ಯವರ್ತಿಗಳು ರೈತರಿಂದ ಕ್ವಿಂಟಲ್‌ ಗೆ ₹ 1,200ಕ್ಕೆ ಜೋಳ ಖರೀದಿಸಿ ಕೆ.ಎಂ.ಎಫ್‌ ಗೆ ₹1,700ಕ್ಕೆ ಮಾರಾಟ ಮಾಡುತ್ತಿದ್ದಾರೆ. ಕೂಡಲೇ ಸರ್ಕಾರ ಈ ಬಗ್ಗೆ ಗಮನಹರಿಸಿ ಕೆಎಂಎಫ್‌ ಅವರು ನೇರವಾಗಿ ರೈತರಿಂದಲೇ ಬೆಂಬಲ ಬೆಲೆಗೆ ಜೋಳ ಖರಿದಿಸಲು ಆದೇಶಿಸಬೇಕು ಎಂದು ಆಗ್ರಹಿಸಿದರು.

ಇನ್ನೊಂದು ವರ್ಷದಲ್ಲಿ ಬಿಜೆಪಿ ಸರ್ಕಾರವನ್ನು ರಾಜ್ಯದ ಜನರು ಮನೆಗೆ ಕಳುಹಿಸಲಿದ್ದಾರೆ. ಕಾಲು ಬಾಯಿ ಜ್ವರದ ಲಸಿಕೆ ಖರೀದಿಗೂ ಇವರ ಬಳಿ ಹಣ ಇಲ್ಲ. ಪಶುಸಂಗೋಪನೆ ಇಲಾಖೆಯ ಆಸ್ಪತ್ರೆ ಬಾಗಿಲನ್ನು ತೆಗೆಯುವವರೇ ಇಲ್ಲ. ಬಹುತೇಕ ಕಡೆ ಪಶುವೈದ್ಯರೇ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

‘ಜೆಡಿಎಸ್‌ ಬಗ್ಗೆ ಲಘುವಾಗಿ ಮಾತನಾಡಿರುವ ಜಮೀರ್ ಅಹಮದ್ ಅವರನ್ನು ಲೆಕ್ಕಕ್ಕೆ ಇಟ್ಟಿಲ್ಲ. ಅವರ ಬಗ್ಗೆ ಮಾತನಾಡಿ ಪೊಳ್ಳಾಗಲಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸತ್ತು ಹೋಗಿದೆ. ಬುಡುಬುಡುಕೆ ಹೇಳಲು ಜಮೀರ್ ಅಹಮ್ಮದ್ ಅಂತವರನ್ನು ಇಟ್ಟುಕೊಂಡಿದ್ದಾರೆ. ಬುಡಬುಡುಕೆ ಅಂಥವರನ್ನು ದೂರವಿಡಲಿ ಎಂದು ಸಲಹೆ ನೀಡುತ್ತೇನೆ. ಕುಮಾರಸ್ವಾಮಿ ಸರ್ಕಾರ ತೆಗೆದಿದ್ದು ಕಾಂಗ್ರೆಸ್. ಅಧಿಕಾರ ಬಂದರೆ ರೈತರ ಪರ ಕೆಲಸ ಮಾಡುತ್ತೇವೆ. ಇಲ್ಲವಾದರೆ ವಿರೋಧ ಪಕ್ಷದಲ್ಲಿರುತ್ತೇವೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್‌ ಮತ್ತು ಬಿಜೆಪಿ ಜೊತೆ ಕೈಜೋಡಿಸುವುದಿಲ್ಲ. ಉತ್ತರ ಭಾರತದಲ್ಲಿ ಕಾಂಗ್ರೆಸ್ ಕತೆ ಮುಗಿದಿದೆ. ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಕತೆ ಕೊನೆಯಾಗುತ್ತದೆ’ ಎಂದು ರೇವಣ್ಣ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT