ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚನ್ನಕೇಶವಸ್ವಾಮಿ ವಿಜೃಂಭಣೆ ರಥೋತ್ಸವ

ಸಂಪ್ರದಾಯದಂತೆ ರಥದ ಮುಂದೆ ಕುರಾನ್ ಪಠಣ– ಭಕ್ತರ ಜೈಕಾರ, ಸಂಭ್ರಮ
Last Updated 13 ಏಪ್ರಿಲ್ 2022, 16:06 IST
ಅಕ್ಷರ ಗಾತ್ರ

ಬೇಲೂರು:ಐತಿಹಾಸಿಕಚನ್ನಕೇಶವ ಸ್ವಾಮಿ ದಿವ್ಯಬ್ರಹ್ಮ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಬುಧವಾರ ವಿಜೃಂಭಣೆಯಿಂದ ನೆರವೇರಿತು.

ಬೆಳಿಗ್ಗೆ ದೇಗುಲದಲ್ಲಿ ಪೂಜಾ ವಿಧಿವಿಧಾನಗಳನ್ನು ಪೂರೈಸಿ, ರಥದ ನಾಲ್ಕು ಚಕ್ರಗಳಿಗೆ ಅನ್ನಬಲಿ ನೀಡಿ ನಂತರ ದೇಗುಲದ ಒಳಗೆ ಯಾತ್ರಾದಾನ ಸೇವೆ ನಡೆಯಿತು. ನಂತರ ಸೌಮ್ಯನಾಯಕಿ, ರಂಗನಾಯಕಿ ಸಮೇತ ಶ್ರೀಯವರ ಉತ್ಸವ ಮೂರ್ತಿಯನ್ನು ದೇಗುಲದ ಗೋಪುರದ ಬಾಗಿಲಿನಿಂದ ಹೊರ ತಂದು, ಪ್ರದಕ್ಷಿಣೆ ಹಾಕಿಸಿ, ಕೇಸರಿ ಮಂಟಪದಡಿ ಸೇವೆ ಸಲ್ಲಿಸಿ ರಥದಲ್ಲಿ ಕೂರಿಸಲಾಯಿತು.

ರಥ ನಿರೀಕ್ಷೆ, ಸಂಪ್ರೋಕ್ಷಣೆ, ಮಂಗಳಾರತಿ ನಡೆಸಿ, ರಥ ಮುಂಭಾಗ ಇರಿಸಿದ್ದ ಬಾಳೆಕಂದನ್ನು ಕತ್ತರಿಸಿ ರಥಕ್ಕೆ ಬಲಿ ಕೊಡಲಾಯಿತು. ಸಂಪ್ರದಾಯದಂತೆ ದೊಡ್ಡಮೇದೂರಿನ ಮೌಲ್ವಿ ಸೈಯದ್ ಸಜ್ಜಾದ್ ಬಾಷಾ ರಥದ ಮುಂದೆ ಕುರಾನ್ ಪಠಣ ಮಾಡಿದ ಬಳಿಕ ರಥವನ್ನು ಮೂಲಸ್ಥಾನದಿಂದ ಎಳೆದು ಗೋಪುರದ ಆಗ್ನೇಯ ದಿಕ್ಕಿನಲ್ಲಿರುವ ಬಯಲು ರಂಗಮಂದಿರದ ಬಳಿ ತಂದು ನಿಲ್ಲಿಸಲಾಯಿತು.

ರಥ ಎಳೆಯುವ ಸಂದರ್ಭದಲ್ಲಿ ಭಕ್ತರು ದೇವರಿಗೆ ಬಾಳೆಹಣ್ಣು, ವನವನ್ನು ಎಸೆದು ಭಕ್ತಿಸರ್ಮಪಿಸಿದರು. ದೇವಸ್ಥಾನ ಆಡಳಿತ ಮಂಡಳಿ,ಸಂಘ ಸಂಸ್ಥೆ ಹಾಗೂ ಸಾಮಾಜಿಕ ಕಾರ್ಯಕರ್ತರುಮಜ್ಜಿಗೆ, ಪಾನಕ, ಉಪಾಹರ ವ್ಯವಸ್ಥೆ ಮಾಡಿದ್ದರು. ಬಿಗಿ ಪೊಲೀಸ್‌ ಬಂದೋ ಬಸ್ತ್ ಮಾಡಲಾಗಿತ್ತು.

ಕೋವಿಡ್ ಕಾರಣದಿಂದ ಎರಡು ವರ್ಷ ರಥೋತ್ಸವ ನಡೆದಿರಲಿಲ್ಲ. ಹೊರ ಜಿಲ್ಲೆ, ರಾಜ್ಯಗಳಿಂದಲೂ ಬಂದಿದ್ದ ಭಕ್ತರು ರಥೋತ್ಸವ ಕಣ್ತುಂಬಿಕೊಂಡರು.

ರಥೋತ್ಸವದಲ್ಲಿ ಶಾಸಕ ಕೆ.ಎಸ್.ಲಿಂಗೇಶ್, ಹೊಳೇನರಸೀಪುರದ ಶಾಸಕ ಎಚ್.ಡಿ.ರೇವಣ್ಣ, ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ, ಹೆಚ್ಚುವರಿಜಿಲ್ಲಾಧಿಕಾರಿ ಕವಿತಾರಾಜರಾಮ್, ದೇಗುಲದ ಕಾರ್ಯನಿರ್ವಹಣಾಧಿಕಾರಿ ವಿದ್ಯುಲ್ಲತಾ,ಡಿವೈಎಸ್‌ಪಿಅಶೋಕ್, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ತೊ.ಚ.ಅನಂತಸುಬ್ಬರಾಯ, ಪುರಸಭಾ ಸದಸ್ಯರಾದ ರತ್ನಮ್ಮ, ಶೈಲೇಶ್, ಮುಖಂಡರಾದ ವಿಜಯಲಕ್ಷ್ಮಿ, ತೀರ್ಥಂಕರ್ ಭಾಗಿಯಾಗಿದ್ದರು.

ರಥೋತ್ಸವದಲ್ಲಿ ಎಲ್ಲಾ ಧರ್ಮದವರಿಗೂ ವ್ಯಾಪಾರ ನಡೆಸಲು ಅವಕಾಶ ನೀಡಲಾಗಿತ್ತು. ಹದಿನೈದಕ್ಕಿಂತ ಹೆಚ್ಚು ಹಿಂದೂಯೇತರರು ಅಂಗಡಿ ತೆರೆವು ವ್ಯಾಪಾರ ನಡೆಸಿದರು.

ಹೆಬ್ಬಾರಮ್ಮ ದೇವಿ ಮೊದಲ ದರ್ಶನ

ಹಿರೀಸಾವೆ: ಇಲ್ಲಿನ ಗ್ರಾಮ ದೇವತೆಯಾದ ಚೌಡೇಶ್ವರಿಯ ದೇವಿಯ ‘ನಮ್ಮೂರ ಹಬ್ಬ’ವು ಆರಂಭವಾಗಿದ್ದು, ಬುಧವಾರ ಬೆಳಗಿನ ಜಾವ ಭಕ್ತರು ಹೆಬ್ಬಾರಮ್ಮ ದೇವಿಯ ವರ್ಷದ ಮೊದಲ ದರ್ಶನ ಪಡೆದರು.

ಮಂಗಳವಾರ ರಾತ್ರಿ ಗ್ರಾಮದ ಮಧ್ಯ ಭಾಗದಲ್ಲಿರುವ ಉಯ್ಯಾಲೆ ಕಂಬ, ರಂಗಮಂಟಪ ಮತ್ತು ಚೌಡೇಶ್ವರಿ, ಹೆಬ್ಬಾರಮ್ಮ ದೇವಸ್ಥಾನಗಳಿಗೆ ಬಾಳೆಕಂಬ ಮತ್ತು ಮಾವಿನ ಸೊಪ್ಪು ಕಟ್ಟಿ, ದೇವಿಯ ದರ್ಶನಕ್ಕೆ ಗ್ರಾಮಸ್ಥರು ಸಿದ್ಧತೆ ಮಾಡಿದರು. ಬುಧವಾರ ಬೆಳಗಿನ ಜಾವ ಹೆಬ್ಬಾರಮ್ಮನ ದೇವಿಯ ಮೆರವಣಿಗೆಯು ದೇವಸ್ಥಾನದಿಂದ ಆರಂಭವಾಗಿ, ಕೆರೆ ಬೀದಿ, ಉಯ್ಯಾಲೆ ಕಂಬ, ದೊಡ್ಡ ಬೀದಿಯಲ್ಲಿ ಸಾಗಿ, ಗ್ರಾಮದ ಒಳಗೆ ಇರುವ ಚೌಡೇಶ್ವರಿ ದೇವಸ್ಥಾನವನ್ನು ತಲುಪಿತು. ನಂತರ ಅಲ್ಲಿಂದ ಸಹೋದರಿ ದೇವಿಯರನ್ನು ಕರೆದುಕೊಂಡು ಕೆರೆಯ ಏರಿ ಬಳಿ ಇರುವ ಚೌಡೇಶ್ವರಿಯ ಮೂಲ ದೇವಸ್ಥಾನದ ಬಳಿಗೆ ತೆರಳಿ, ವಿಶೇಷ ಪೂಜೆ ಸಲ್ಲಿಸಿದರು. ಕೋವಿಡ್‌ನಿಂದಾಗಿ ಕಳೆದ ಎರಡು ವರ್ಷದಿಂದ ಭಕ್ತರಿಗೆ ದೇವಿಯ ದರ್ಶನ ದೊರೆತಿರಲಿಲ್ಲ.

ಹಿರೀಸಾವೆ ಮತ್ತು ದೇವಿಯರು ತವರು ಮನೆಯಾದ ಹೋಬಳಿಯ ಹೊನ್ನೇನಹಳ್ಳಿಯಲ್ಲಿ ಇಂದಿನಿಂದ 23ರವರೆಗೆ (ಹನ್ನೊಂದು ದಿನಗಳು) ಭಯ ಭಕ್ತಿಯಿಂದ ಹಬ್ಬವನ್ನು ಆಚರಿಸುತ್ತಾರೆ. ಹೆಬ್ಬಾರಮ್ಮ ದೇವಿಯ ದರ್ಶನವೂ ಭಕ್ತರಿಗೆ ವರ್ಷದಲ್ಲಿ ನಾಲ್ಕು ದಿನ ಮಾತ್ರ ಸಿಗುತ್ತದೆ. ಏ 19ರ ರಾತ್ರಿ ಮಡೆ ಹಬ್ಬ, 20ರಂದು ಚೌಡೇಶ್ವರಿ ದೇವಿಯ ರಥೋತ್ಸವ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT