ಚಾರುಕೀರ್ತಿ ಶ್ರೀಗೆ ಮಹಾವೀರ ಪ್ರಶಸ್ತಿ ಪ್ರದಾನ

7
ಶಾಂತಿ ಸ್ಥಾಪನೆ ಉದ್ದೇಶಕ್ಕೆ ಪ್ರಶಸ್ತಿ ಹಣ ಬಳಕೆ

ಚಾರುಕೀರ್ತಿ ಶ್ರೀಗೆ ಮಹಾವೀರ ಪ್ರಶಸ್ತಿ ಪ್ರದಾನ

Published:
Updated:
Deccan Herald

ಶ್ರವಣಬೆಳಗೊಳ: ಜೈನ ಮಠದ ಪೀಠಾಧಿಪತಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರಿಗೆ 2017ನೇ ಸಾಲಿನ ಭಗವಾನ್‌ ಮಹಾವೀರ ರಾಷ್ಟ್ರೀಯ ಶಾಂತಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಚಾವುಂಡರಾಯ ಸಭಾ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ಸಮಾರಂಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಜಯಮಾಲಾ ಅವರು ಸ್ವಾಮೀಜಿಗೆ ಶಾಲು ಹೊದಿಸಿ ಮಹಾವೀರನ ಮೂರ್ತಿ ನೀಡಿ ಗೌರವಿಸಿದರು. ಪ್ರಶಸ್ತಿಯು ಫಲಕ ಹಾಗೂ ₹ 10 ಲಕ್ಷ ನಗದು ಒಳಗೊಂಡಿದೆ.

‘ಮನುಷ್ಯನಲ್ಲಿರುವ ಅಹಂಕಾರ, ಮಾತ್ಸರ್ಯ ಹೋಗಲಾಡಿಸಿ, ಶಾಂತಿಗಾಗಿ ಹೆಚ್ಚು ಕೆಲಸ ಮಾಡಬೇಕಾಗಿದೆ. ಈ ಪ್ರಶಸ್ತಿ ದೊರಕಿರುವುದರಿಂದ ಜವಾಬ್ದಾರಿ ಹೆಚ್ಚಿದೆ. ನಾನೊಬ್ಬ ಶಾಂತಿಯ ಕನ್ನಡ ಸೇವಕ. ದೇಶದಲ್ಲಿ ಜನಿಸಿದಷ್ಟು ಶಾಂತಿ ಮಹಾಪುರುಷರು ಬೇರೆಯಲ್ಲಿಯೂ ಜನ್ಮ ತಾಳಿಲ್ಲ. ಪ್ರಶಸ್ತಿಯ ₹ 10 ಲಕ್ಷವನ್ನು ಶಾಂತಿ ಸ್ಥಾಪನೆ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗುವುದು’ ಎಂದು ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ತಿಳಿಸಿದರು.

ಜಯಮಾಲಾ ಮಾತನಾಡಿ, ‘ಪ್ರವಾಸಿಗರು, ಯಾತ್ರಿಕರನ್ನು ಆಕರ್ಷಿಸಲು ವಿಂಧ್ಯಗಿರಿ ಬಾಹುಬಲಿ ಬೆಟ್ಟಕ್ಕೆ ರೋಪ್‌ ವೇ ನಿರ್ಮಿಸುವ ಅಗತ್ಯ ಇದೆ. ಇದರಿಂದ ಮಕ್ಕಳು, ಅಶಕ್ತರು, ವೃದ್ಧರು ಭಗವಂತನ ದರ್ಶನ ಪಡೆಯಲು ಅನುಕೂಲವಾಗುತ್ತದೆ’ ಎಂದರು.

ಶಾಸಕ ಸಿ.ಎನ್‌.ಬಾಲಕೃಷ್ಣ ಮಾತನಾಡಿ, ‘ಅಹಿಂಸೆಗೆ ಅಡಿಪಾಯ ಹಾಕಿದ ಶ್ರವಣಬೆಳಗೊಳ ಸ್ವಾರ್ಥರಹಿತ ಕ್ಷೇತ್ರವಾಗಿದೆ. ಮುಂದೆ ಸ್ವಾಮೀಜಿ ಭಾರತ ರತ್ನ ಪ್ರಶಸ್ತಿಗೆ ಪಾತ್ರರಾಗಲಿ’ ಎಂದು ಆಶಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎನ್‌.ಆರ್‌.ವಿಶುಕುಮಾರ್‌ ಪ್ರಾಸ್ತಾವಿಕವಾಗಿ ಮಾತನಾಡಿದರು.

ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ, ವಿಧಾನ ಪರಿಷತ್‌ ಸದಸ್ಯ ಎಂ.ಎ.ಗೋಪಾಲಸ್ವಾಮಿ, ಸಾಹಿತಿ ಹಂಪ ನಾಗರಾಜಯ್ಯ, ಜೈನ ಮಠದ ಸರಿತಾ ಎಂ.ಕೆ.ಜೈನ್‌, ಹಿರಿಯ ಪತ್ರಕರ್ತರಾದ ಪದ್ಮರಾಜ ದಂಡಾವತಿ, ಎಸ್‌.ಎನ್‌.ಅಶೋಕ್‌ಕುಮಾರ್‌ ಇದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !