ಮಂಗಳವಾರ, ಏಪ್ರಿಲ್ 20, 2021
28 °C
ಆಂಜನೇಯ ಸ್ವಾಮಿ ದೇವಾಲಯಕ್ಕೆ ರಾಜ್ಯಸಭಾ ಸದಸ್ಯ ದೇವೇಗೌಡ ಭೇಟಿ

ಉಪ್ಪಳ್ಳಿ ಗ್ರಾಮದ ಅಭಿವೃದ್ಧಿಗೆ ಬದ್ಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ತಾಲ್ಲೂಕಿನ ಉಪ್ಪಳ್ಳಿ ಗ್ರಾಮದ ಅಭಿವೃದ್ಧಿಗೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ರಾಜ್ಯಸಭಾ ಸದಸ್ಯ ಎಚ್‌.ಡಿ.ದೇವೇಗೌಡ ಹೇಳಿದರು.

ಕಟ್ಟಾಯ ಹೋಬಳಿಯ ಉಪ್ಪಳ್ಳಿ ಗ್ರಾಮದಲ್ಲಿ ಭಾನುವಾರ ಆಂಜನೇಯ ಸ್ವಾಮಿ ದೇವರ ದರ್ಶನ ಪಡೆದ ಬಳಿಕ ನಡೆದ
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಂಡಿ ನೋವಿನ ಕಾರಣ ಜೀರ್ಣೋದ್ಧಾರಗೊಂಡ ದೇವಾಲಯ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಲಿಲ್ಲ. ಜನರ ಸಹಕಾರದಿಂದ ರಾಜಕೀಯದಲ್ಲಿ ಎತ್ತರಕ್ಕೆ ಬೆಳೆದಿದ್ದೇನೆ. ಸಾಮಾನ್ಯ ರೈತನ ಮಗನಾಗಿ ಹುಟ್ಟಿರುವುದರಿಂದ ಹಳ್ಳಿಯ ಜನರ ಸಂಕಷ್ಟ ಅರ್ಥವಾಗುತ್ತದೆ. ಹಾಗಾಗಿ ರಾಜ್ಯಸಭಾ ಅನುದಾನ ಹಾಗೂ ಕೇಂದ್ರದ ಅನುದಾನದೊಂದಿಗೆ ಗ್ರಾಮಕ್ಕೆ ಮೂಲಸೌಲಭ್ಯ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.

ದೇಶದ ಪ್ರಧಾನಿಯಾಗಿದ್ದಾಗ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಹಲವು ರಾಜ್ಯಗಳಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಬಗಹರಿಸಿದೆ. ದಿನಕ್ಕೆ 20 ತಾಸು ಕೆಲಸ ಮಾಡುತ್ತಿದೆ. ದೆಹಲಿಯಲ್ಲಿ ರೈತರು ಪ್ರತಿಭಟನೆ ಮುಂದುವರೆಸಲು ಅವಕಾಶ ನೀಡದೆ, ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸುವಂತೆ ಪ್ರಧಾನಿಗೆ ಸಲಹೆ ನೀಡಿದ್ದೇನೆ. ಯಾವುದೇ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ಮೊದಲು ಅದರ ಲೋಪ ದೋಷಗಳನ್ನು ಸರಿಪಡಿಸಬೇಕು ಎಂದು ಸಲಹೆ ನೀಡಿದರು.

ದೇಶದ ರೈತರ ಪರಿಸ್ಥಿತಿ ಈಗಲೂ ಸುಧಾರಿಸಿಲ್ಲ. ನೀರಾವರಿ ಇದ್ದವರು ಸ್ವಲ್ಪ ಉತ್ತಮವಾಗಿದ್ದಾರೆ. ಆದರೆ ಬೆಳೆಗಳಿಗೆ ಸೂಕ್ತ ಬೆಲೆ ಸಿಗದೆ ಪರದಾಡುತ್ತಿದ್ದಾರೆ. ಹಾಸನ ಜಿಲ್ಲೆಯಲ್ಲಿ ಹೆಚ್ಚು ಆಲೂಗಡ್ಡೆ ಬೆಳೆಯಲಾಗುತ್ತಿತ್ತು. ಆದರೆ ಇಂದು  ದರ ಕುಸಿತದಿಂದ  ಬೆಳೆಗಾರರು ಸಂಕಷ್ಟದಲ್ಲಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ದೇಶದ ಆರ್ಥಿಕ ಪರಿಸ್ಥಿತಿ ಸರಿಯಲ್ಲದ ಕಾರಣ ಎರಡು ವರ್ಷ ಸಂಸದರ ಅನುದಾನ ನಿಲ್ಲಿಸಲಾಗಿದೆ. ಮುಂದಿನ ವರ್ಷ
ನೀಡುವ ಅನುದಾನದಲ್ಲಿ ಗ್ರಾಮದ ಅಭಿವೃದ್ಧಿಗೆ ಹೆಚ್ಚು ವಿನಿಯೋಗಿಸಲಾಗುವುದು. ಗ್ರಾಮಕ್ಕೆ ಆಗಬೇಕಾಗಿರುವ ಕೆಲಸಗಳ ಬಗ್ಗೆ ಮುಖಂಡರು ಮಾಹಿತಿ ನೀಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಕಾರ್ಯಕ್ರಮಕ್ಕೂ ಮುನ್ನ ಗ್ರಾಮದ ಯುವಕರು ಬೈಕ್‌ ರ್‍ಯಾಲಿ ನಡೆಸಿ, ದೇವೇಗೌಡರಿಗೆ ಸ್ವಾಗತ ಕೋರಿದರು. ಮಹಿಳೆಯರು ಪುಷ್ಪವೃಷ್ಟಿ ಮಾಡಿದರು. ವೇದಿಕೆಯಲ್ಲಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಎಚ್‌.ಪಿ.ಸ್ವರೂಪ್, ದೈಹಿಕ ಶಿಕ್ಷಣ ಶಿಕ್ಷಕ ಲಕ್ಷ್ಮಣ್‌, ಜೆಡಿಎಸ್‌ ಮುಖಂಡ ಸತ್ಯನಾರಾಯಣ ಇದ್ದರು. ‌

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.