ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಕಲಗೂಡು: ಪ್ರಜ್ವಲ್ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ

Published 4 ಮೇ 2024, 14:18 IST
Last Updated 4 ಮೇ 2024, 14:18 IST
ಅಕ್ಷರ ಗಾತ್ರ

ಅರಕಲಗೂಡು: ಅಶ್ಲೀಲ ವಿಡಿಯೋ ಪ್ರಕರಣ ಸಂಬಂಧ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ಪಟ್ಟಣದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.

ಅನಕೃ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು ಕೆಲಕಾಲ ರಸ್ತೆ ತಡೆ ನಡೆಸಿದರಲ್ಲದೆ ಪ್ರಜ್ವಲ್ ವಿರುದ್ಧ ಘೋಷಣೆ ಕೂಗಿ, ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಎಸ್. ಪ್ರಸನ್ನ ಮಾತನಾಡಿ, ‘ಪ್ರಜ್ವಲ್ ರೇವಣ್ಣ ನಡೆಸಿರುವ ಕೃತ್ಯ ರಾಜ್ಯವಷ್ಟೆ ಅಲ್ಲದೆ, ದೇಶದಾದ್ಯಂತ ಸದ್ದುಮಾಡುತ್ತಿದೆ. ಕಲೆ, ಸಂಸ್ಕೃತಿ, ಪ್ರಕೃತಿ ಸೊಬಗಿಗೆ ಹೆಸರಾಗಿದ್ದ ಜಿಲ್ಲೆ ಸಂಸದರ ಅಶ್ಲೀಲ ವಿಡಿಯೋ ಪ್ರಕರಣದಿಂದ ಇಲ್ಲಿನ ಜನತೆ ತಲೆತಗ್ಗಿಸುವಂತಾಗಿದೆ. ನೂರಾರು ಹೆಣ್ಣುಮಕ್ಕಳ ಮೇಲೆ ನೀಚ ಕೃತ್ಯ ಎಸಗಿರುವ ಪ್ರಜ್ವಲ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಕೇಂದ್ರ ಸರ್ಕಾರ ಅವರ ರಾಜತಾಂತ್ರಿಕ ಪಾಸ್‌‌‌ಪೋರ್ಟ್ ರದ್ದುಪಡಿಸಿ ಸ್ವದೇಶಕ್ಕೆ ಕರೆತಂದು ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರಕ್ಕೆ ನೆರವಾಗಬೇಕು’ ಎಂದು ಆಗ್ರಹಿಸಿದರು.

‘ಪ್ರಜ್ವಲ್ ರೇವಣ್ಣ ಅವರೇ ಜಿಲ್ಲೆಯ ಮತದಾರರು ಮತ ನೀಡಿ ಸಂಸದರನ್ನಾಗಿ ಮಾಡಿದ್ದು ಈ ನೀಚ ಕೆಲಸ ಮಾಡಲಾ ಎಂದು ಪ್ರಶ್ನಿಸಿ, ನೀವೇ ಬಂದು ಎಸ್ಐಟಿ ಮುಂದೆ ಶರಣಾದರೆ ಅಲ್ಪಸ್ವಲ್ಪ ಗೌರವವಾದರೂ ಉಳಿಯುತ್ತದೆ. ಒಂದು ವೇಳೆ ಕೇಂದ್ರ ಸರ್ಕಾರ ಪ್ರಜ್ವಲ್ ಅವರ ರಾಜ ತಂತ್ರಿಕ ಪಾಸ್ ಪೋರ್ಟ್ ವಜಾಮಾಡದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ಕಾಂಗ್ರೆಸ್ ಕಿಸಾನ್ ವಿಭಾಗದ ಜಿಲ್ಲಾಧ್ಯಕ್ಷ ಸಿ.ಡಿ.ದಿವಾಕರ ಗೌಡ, ಮುಖಂಡರಾದ ಬಿಳುಗುಲಿ ರಾಮೇಗೌಡ, ಗೋವಿಂದರಾಜ್, ಅಕ್ಮಲ್ ಮಾತನಾಡಿ ಪ್ರಜ್ವಲ್ ವಿರುದ್ದ ಕಠಿಣ ಕ್ರಮಕ್ಕೆ ಆಗ್ರಹಿಸಿದರು. ಪಪಂ ಸದಸ್ಯರಾದ ಪ್ರದೀಪ್ ಕುಮಾರ್, ಅನಿಕೇತನ್, ಮಾಜಿ ಅಧ್ಯಕ್ಷ ನಂದಕುಮಾರ್, ಮುಖಂಡರಾದ ಚಿಕ್ಕಹೊನ್ನೇಗೌಡ, ಕಳ್ಳಿಮುದ್ದನಹಳ್ಳಿ ಲೋಕೇಶ್, ಮಧು, ಹರೀಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT