ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರೀಸಾವೆ | ₹70 ಲಕ್ಷದ ತೇರು ಸಮರ್ಪಣೆ 29ರಂದು

ಹಿರೀಸಾವೆ ಚೌಡೇಶ್ವರಿ ದೇವಿಗೆ ನೂತನ ರಥ
Published 27 ಏಪ್ರಿಲ್ 2024, 6:44 IST
Last Updated 27 ಏಪ್ರಿಲ್ 2024, 6:44 IST
ಅಕ್ಷರ ಗಾತ್ರ

ಹಿರೀಸಾವೆ: ಇಲ್ಲಿನ ಗ್ರಾಮ ದೇವತೆಯಾದ ಚೌಡೇಶ್ವರಿ ಅಮ್ಮನವರಿಗೆ ಗ್ರಾಮಸ್ಥರು, ಭಕ್ತರ ಸಹಕಾರದಿಂದ ನೂತನ ರಥವನ್ನು ನಿರ್ಮಾಣ ಮಾಡಿದ್ದು, ಏ.29 ರಂದು ಲೋಕಾರ್ಪಣೆ ನಡೆಯಲಿದೆ.

ಪ್ರತಿ ವರ್ಷವು ಏಪ್ರಿಲ್ ತಿಂಗಳಲ್ಲಿ ‘ನಮ್ಮೂರ ಹಬ್ಬದಲ್ಲಿ’ ದೇವಿಯ ಬ್ರಹ್ಮ ರಥೋತ್ಸವ ಜರುಗುತ್ತದೆ. 55 ವರ್ಷಗಳ ಹಿಂದೆ ನಿರ್ಮಾಣ ಮಾಡಿದ್ದ ರಥವು ಶಿಥಿಲವಾಗಿತ್ತು. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಕಳೆದ ವರ್ಷದ ಜಾತ್ರೆಯ ನಂತರ ನೂತನ ತೇರು ಮಾಡಲು ತೀರ್ಮಾನಿಸಿದ್ದರು. ದೇವಿಯ ಒಕ್ಕಲು, ಸುತ್ತಲಿನ ಗ್ರಾಮಸ್ಥರು ಮತ್ತು ಭಕ್ತರ ಸಹಕಾರ ಪಡೆದು, ಸುಮಾರು ₹ 70 ಲಕ್ಷ ವೆಚ್ಚದಲ್ಲಿ ಮರದ ರಥವನ್ನು ಆರು ತಿಂಗಳಲ್ಲಿ ಸಿದ್ಧಗೊಳಿಸಿದ್ದಾರೆ.

ಕಳಸ ಸೇರಿದಂತೆ 34 ಅಡಿ ಎತ್ತರ, 13 ಅಡಿ ಅಗಲದ 4 ಮೂಲೆ ಭುಜದ ರಥಕ್ಕೆ ತೇಗ, ಹೊನ್ನೆ, ಮತ್ತಿ ಮತ್ತು ಬೇವು ಸೇರಿದಂತೆ ಹಲವು ಬೆಲೆ ಬಾಳುವ ಮರವನ್ನು ಬಳಸಲಾಗಿದೆ. ರಥದ ಮೊದಲ ಹಂತದಲ್ಲಿ ಅಷ್ಟ ಲಕ್ಷ್ಮೀಯರ ಚಿತ್ರಗಳು,  ಎರಡನೇ ಹಂತದಲ್ಲಿ ಶೈಲಪುತ್ರಿ, ಬ್ರಹ್ಮಚಾರಿಣಿ, ಕಾಲರಾತ್ರಿ, ಕಾತ್ಯಾಯಿನಿ, ಮಹಾಗೌರಿ, ಸಿದ್ಧಿದಾತ್ರಿ, ಚಂದ್ರಘಂಟಾ ದೇವಿಯರು ಸೇರಿದಂತೆ ನವದುರ್ಗೆಯರು, ಗಣೇಶ, ಪರಮೇಶ್ವರ ಸುಬ್ರಹ್ಮಣ್ಯ ಸೇರಿದಂತೆ ದೇವರು, ವಾಹನಗಳಾದ ಆನೆ, ಸಿಂಹ, ಹಂಸ ಸೇರಿದಂತೆ ಹಲವು ಪ್ರಾಣಿಗಳ ಚಿತ್ರಗಳನ್ನು ಶಿವಮೊಗ್ಗದ ಶಿಲ್ಪಿಗಳಾದ ಸಂತೋಷ್ ಮತ್ತು ನಿಖಿಲ್ ತಂಡದವರು ತೇರಿನ ಸುತ್ತ ಕೆತ್ತಿದ್ದಾರೆ.

ರಥದ ಕೆತ್ತನೆ ಕಾರ್ಯ ಮತ್ತು ಜೋಡನೆ ಪೂರ್ಣಗೊಂಡ ಹಿನ್ನೆಲೆಯಲ್ಲಿ ಲೋಕಾರ್ಪಣೆ ಕಾರ್ಯಕ್ರಮವನ್ನು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಏರ್ಪಡಿಸಿರುವುದಾಗಿ ಗ್ರಾಮದ ಎಚ್.ಎಸ್. ಕುಮಾರ್, ಎಚ್.ಜಿ. ಮಂಜುನಾಥ್, ಎಚ್.ಸಿ. ಮಂಜುನಾಥ್ ಹೇಳಿದರು.

ಏ.28ರಂದು ಸಂಜೆ ಗೋದೂಳಿ ಲಗ್ನದಲ್ಲಿ ದೇವತಾ ಪ್ರಾರ್ಥನೆ, ಗಣಪತಿ ಪೂಜೆ, ರಥ ಶುದ್ಧಿ, ರಾಕ್ಷೋಘ್ನ, ಅಘೋರಾಸ್ತ್ರ, ವಾಸ್ತು, ರಥಾಧಿವಾಸ ಹೋಮಗಳು ಮತ್ತು ದಿಗ್ಬಲಿ ಸೇರಿದಂತೆ ಪೂಜೆಗಳು ನಡೆಯಲಿವೆ. ಏ.29ರಂದು ಬೆಳಿಗ್ಗೆ 9 ಗಂಟೆಗೆ ರಥ ಪ್ರತಿಷ್ಠಾಂಗ, ಕಲಾ ಹೋಮಗಳು, ಪ್ರಾಣಪ್ರತಿಷ್ಠೆ, ಪೂರ್ಣಾಹುತಿ, ರಥ ಪೂಜೆ, ಕುಂಭಾಭಿಷೇಕ ಮತ್ತು ವಿವಿಧ ಪೂಜೆಗಳು ನಡೆಯಲಿವೆ.

ಆದಿಚುಂಚನಗಿರಿ ಮಠದ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಮಧ್ಯಾಹ್ನ 12 ಗಂಟೆಗೆ ನೂತನ ತೇರನ್ನು ಲೋಕಾರ್ಪಣೆ ಮಾಡಲಿದ್ದಾರೆ. ಶಾಸಕ ಸಿ.ಎನ್. ಬಾಲಕೃಷ್ಣ, ರಾಜ್ಯ ಕವಿಕಾ ಅಧ್ಯಕ್ಷ ಎಚ್.ಸಿ. ಲಲಿತರಾಘವ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಬೋರಣ್ಣ ಸೇರಿದಂತೆ ಹಲವು ಜನಪ್ರತಿನಿಧಿಗಳು, ದಾನಿಗಳು ಭಾಗವಹಿಸಲಿದ್ದಾರೆ ಎಂದು ರಥ ನಿರ್ಮಾಣ ಸಮಿತಿಯ ಎಚ್.ಆರ್. ಬಾಲಕೃಷ್ಣ ಮತ್ತು ಎಚ್.ಜಿ. ರಾಮಕಷ್ಣ ತಿಳಿಸಿದರು.  

ಹಿರೀಸಾವೆ ಚೌಡೇಶ್ವರಿ ದೇವಸ್ಥಾನಕ್ಕೆ ನೂರಾರು ವರ್ಷಗಳ ಇತಿಹಾಸವಿದ್ದು, ದೇವರ ತವರು ಮನೆಯಾದ ಹೊನ್ನೇನಹಳ್ಳಿಯಲ್ಲಿ ಭಕ್ತಿ ಭಾವದಿಂದ ಹಬ್ಬವನ್ನು ಆಚರಣೆ ಮಾಡುತ್ತಾರೆ.

ಹಿರೀಸಾವೆ  ನೂತನ ರಥ ಸುತ್ತ ದೇವರುಗಳ ಚಿತ್ರಗಳ ಕೆತ್ತನೆ ಮಾಡಿರುವುದು.
ಹಿರೀಸಾವೆ  ನೂತನ ರಥ ಸುತ್ತ ದೇವರುಗಳ ಚಿತ್ರಗಳ ಕೆತ್ತನೆ ಮಾಡಿರುವುದು.
ಹಿರೀಸಾವೆ ಚೌಡೇಶ್ವರಿ ಅಮ್ಮನವರ ತೇರಿನ ನಾಮಫಲಕ ಸಿದ್ದಪಡಿಸುತ್ತಿರುವ ಶಿಲ್ಪಗಳು.
ಹಿರೀಸಾವೆ ಚೌಡೇಶ್ವರಿ ಅಮ್ಮನವರ ತೇರಿನ ನಾಮಫಲಕ ಸಿದ್ದಪಡಿಸುತ್ತಿರುವ ಶಿಲ್ಪಗಳು.

ಚಿತ್ರಗಳ ಕೆತ್ತನೆಗೆ ತೇಗ ಹೊನ್ನೆ ಮರವನ್ನು ಚಕ್ರ ದೂರಿ ಮತ್ತ ರಥದ ಭಾರ ಹೊರಲು ಅಡಿ ಭಾಗಕ್ಕೆ ಮತ್ತಿ ಮತ್ತು ಬೇವಿನ ಮರವನ್ನು ಬಳಸಲಾಗಿದೆ. ಇದು ನಮ್ಮ ತಂಡದಿಂದ ನಿರ್ಮಾಣ ಮಾಡುತ್ತಿರುವ 35 ನೇ ರಥ.

-ಸಂತೋಷ್ ತೇರಿನ ಶಿಲ್ಪಿ ಶಿವಮೊಗ್ಗ

ನೂತನ ರಥಕ್ಕೆ ಸ್ಟೇರಿಂಗ್ ಮತ್ತು ಬಾಲ್ ಬೇರಿಂಗ್ ಅಳವಡಿಸಲಾಗಿದೆ. ಇದರಿಂದ ತೇರನ್ನು ಸುಲಭವಾಗಿ ತಿರುಗಿಸಲು ಎಳೆಯಲು ಸಹಕಾರಿಯಾಗುತ್ತದೆ. ರಥ ಸುತ್ತ 101 ಗಂಟೆ ಕಂಬಗಳನ್ನು ಹಾಕಲಾಗಿದೆ.

-ನಿಖಿಲ್. ರಥದ ಶಿಲ್ಪಿ ಶಿವಮೊಗ್ಗ

ರಥ ನಿರ್ಮಾಣ ಮಾಡಲು ದೇವಿಯ ಭಕ್ತರು ಹೆಚ್ಚಿನ ಸಹಕಾರ ನೀಡಿದ್ದಾರೆ. ಸುಮಾರು ₹ 6 ಲಕ್ಷ ವೆಚ್ಚದಲ್ಲಿ ತೇರಿನ ಮನೆ ನವೀಕರಣವನ್ನು ಮಾಜಿ ಸಚಿವ ದಿ. ಶ್ರೀಕಂಠಯ್ಯ ಅವರ ಕುಟುಂಬದವರು ಮಾಡಿಸಿದ್ದಾರೆ.

-ಎಚ್.ಬಿ. ಶಿವಕುಮಾರ್ ಕಾರ್ಯದರ್ಶಿ ರಥ ನಿರ್ಮಾಣ ಸಮಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT