ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚನ್ನರಾಯಪಟ್ಟಣ | ಕೊಬ್ಬರಿ ನೋಂದಣಿ: ರೈತರ ಸರದಿ ಶುರು

ಖರೀದಿ ಕೇಂದ್ರದ ಎದುರು ಕಲ್ಲುಗಳನ್ನು ಇಟ್ಟು ಸ್ಥಳ ಕಾದಿರಿಸಿದ ಬೆಳೆಗಾರರು
Published 4 ಮಾರ್ಚ್ 2024, 0:30 IST
Last Updated 4 ಮಾರ್ಚ್ 2024, 0:30 IST
ಅಕ್ಷರ ಗಾತ್ರ

ಚನ್ನರಾಯಪಟ್ಟಣ: ಇಲ್ಲಿನ ಕೊಬ್ಬರಿ ಖರೀದಿ ಕೇಂದ್ರದಲ್ಲಿ ರೈತರು ಹೆಸರು ನೋಂದಣಿ ಮಾಡಿಕೊಳ್ಳಲು ಸರದಿ ಸಾಲಿನಲ್ಲಿ ಕಲ್ಲುಗಳನ್ನು ಇಟ್ಟು, ಅವುಗಳಿಗೆ ನಂಬರ್ ಬರೆದು ಸ್ಥಳ ಕಾಯ್ದಿರಿಸುತ್ತಿದ್ದ ದೃಶ್ಯ ಭಾನುವಾರ ಕಂಡು ಬಂತು.

ಸೋಮವಾರದಿಂದ ಕೊಬ್ಬರಿ ಖರೀದಿಗಾಗಿ ನೋಂದಣಿ ಆರಂಭವಾಗುವ ವಿಷಯ ತಿಳಿದ ರೈತರು, ಪಟ್ಟಣದಲ್ಲಿರುವ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಕೇಂದ್ರದ ಬಳಿ ಸಾಲಾಗಿ ಕಲ್ಲುಗಳನ್ನಿಟ್ಟು, ಅವುಗಳಿಗೆ ನಂಬರ್ ಬರೆದರು. ಇದರ ಸಾಲು ಉದ್ದವಾಗಿತ್ತು.

ವಿಷಯ ತಿಳಿಯುತ್ತಿದ್ದಂತೆ ಇನ್ನಷ್ಟು ರೈತರು ಸ್ಥಳಕ್ಕೆ ಬಂದು, ಆವರಣದ ಸುತ್ತಲಿದ್ದ ಕಲ್ಲುಗಳನ್ನು ಎತ್ತಿಕೊಂಡು ಬಂದು, ಸರದಿ ಸಾಲಿನಲ್ಲಿ ಇಡುತ್ತಿದ್ದ ದೃಶ್ಯ ಕಂಡು ಬಂತು. ಸಂಜೆ ವೇಳೆಗೆ 400 ಕ್ಕೂ ಹೆಚ್ಚು ಕಲ್ಲುಗಳನ್ನು ಇಟ್ಟಿದ್ದರು. ಕಲ್ಲುಗಳ ಪಕ್ಕದಲ್ಲಿಯೇ ರೈತರು ಕುಳಿತಿದ್ದರು.

ರಾಜ್ಯಸಹಕಾರ ಮಾರಾಟ ಮಹಾಮಂಡಳದ ಪ್ರಭಾರ ವ್ಯವಸ್ಥಾಪಕಿ ಕಾವ್ಯಾ ಮಾತನಾಡಿ, ‘ನೋಂದಣಿ ಕೇಂದ್ರದಲ್ಲಿ ಕುಡಿಯುವ ನೀರಿನ ಸೌಲಭ್ಯ ಒದಗಿಸಲಾಗುವುದು. ಕೇಂದ್ರದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ’ ಎಂದರು.

ಭಾನುವಾರವೇ ರೈತರ ಸರದಿ

ಹಿರೀಸಾವೆ ವರದಿ: ನಾಫೆಡ್‌ಗೆ ಬೆಂಬಲ ಬೆಲೆಯಲ್ಲಿ ಉಂಡೆ ಕೊಬ್ಬರಿ ಮಾರಾಟಕ್ಕೆ ಸೋಮವಾರ ಹೆಸರು ನೋಂದಾಯಿಸಲು ಭಾನುವಾರ ಮಧ್ಯಾಹ್ನದಿಂದ ನೂರಾರು ರೈತರು ಇಲ್ಲಿನ ಕೃಷಿ ಪತ್ತಿನ ಸಹಕಾರ ಸಂಘದ ಮಂದೆ ತಮ್ಮ ಸರದಿಗಾಗಿ ಕಾದು ಕುಳಿತಿದ್ದರು.

ಕಳೆದ ತಿಂಗಳು ನೋಂದಣಿ ಮಾಡಿದ್ದನ್ನು ಸರ್ಕಾರ ರದ್ದುಪಡಿಸಿದ್ದು, ಹೊಸದಾಗಿ ಹೆಸರನ್ನು ಸೋಮವಾರದಿಂದ ನೋಂದಾಯಿಸಿಕೊಳ್ಳುತ್ತದೆ ಎಂಬ ಸುದ್ದಿ ತಿಳಿದ ರೈತರು, ಸೋಮವಾರ ಬೆಳಿಗ್ಗೆ ಆರಂಭವಾಗುವ ನೋಂದಣಿಗೆ ಭಾನುವಾರವೇ ಸರದಿ ಆರಂಭಿಸಿದರು. ಕೃಷಿ ಪತ್ತಿನ ಸಹಕಾರ ಸಂಘದ ಬಳಿ ವೃದ್ಧರು, ಮಹಿಳೆಯರ ಸೇರಿದಂತೆ ನೂರಾರು ಜನರು ಸರತಿಯಲ್ಲಿದ್ದರು. ರಾತ್ರಿ ಇಲ್ಲಿಯೇ ಮಲಗುವುದಾಗಿ ರೈತ ನಂಜೇಗೌಡ ಹೇಳಿದರು.

ಸರ್ಕಾರದ ಆದೇಶದಂತೆ ನೋಂದಣಿ ಕೇಂದ್ರದ ಬಳಿ ಭಾನುವಾರ ಸಿಸಿಟಿವಿ ಕ್ಯಾಮೆರಾಗಳನ್ನು ಎಪಿಎಂಸಿ ಅಧಿಕಾರಿಗಳು ಅಳವಡಿಸಿದರು.

ನಿತ್ಯ 100–150 ಹೆಸರು ನೋಂದಣಿ: ‘ಒಂದು ಕೇಂದ್ರದಲ್ಲಿ ಒಬ್ಬರೇ ಸಿಬ್ಬಂದಿ, ರೈತರ ಹೆಸರನ್ನು ನೋಂದಾಯಿಸಿಕೊಳ್ಳುತ್ತಾರೆ. ಪ್ರತಿ ಕೇಂದ್ರದ ಕಾರ್ಯಚಟುವಟಿಕೆಯ ಮೇಲೆ ಸಿಸಿಟಿವಿ ಕ್ಯಾಮೆರಾ, ಜಿಪಿಆರ್‌ಎಸ್ ಮೂಲಕ ಜಿಲ್ಲಾಧಿಕಾರಿ ನಿಗಾ ವಹಿಸಲಿದ್ದಾರೆ. ತಾಂತ್ರಿಕ ತೊಂದರೆಗಳು ಆಗದಿದ್ದರೆ ನಿತ್ಯ ಒಂದು ಕೇಂದ್ರದಲ್ಲಿ 100 ರಿಂದ 150 ರೈತರ ಹೆಸರು ನೋಂದಾಯಿಸಬಹುದು’ ಎಂದು ರಾಜ್ಯ ಸಹಕಾರ ಮಾರಾಟ ಮಹಾಮಂಡಲದ ನಿರ್ದೇಶಕ ಸಿ.ಎನ್‌. ಪುಟ್ಟಸ್ವಾಮಿಗೌಡ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಯಾರಿಗೂ ಟೋಕನ್ ನೀಡುವುದಿಲ್ಲ. ಈ ಹಿಂದೆ ಹೆಚ್ಚು ಉಪಕರಣಗಳನ್ನು ಬಳಸಿಕೊಂಡು, ಅಂತರ ಜಿಲ್ಲೆಯವರ ಹೆಸರನ್ನು ನೋಂದಾಯಿಸಿರುವ ಬಗ್ಗೆ ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಹೊಸ ತಂತ್ರಾಂಶವನ್ನು ಸಿದ್ಧಪಡಿಸಿ, ಆಯಾ ಜಿಲ್ಲೆಯವರು, ನಿಗದಿಪಡಿಸಿರುವ ಸ್ಥಳಗಳಲ್ಲಿ ನೋಂದಣಿ ಮಾಡಿಸುವಂತೆ ತಂತ್ರಾಂಶವನ್ನು ರೂಪಿಸಲಾಗಿದೆ’ ಎಂದು ತಿಳಿಸಿದರು.

ಹಿರೀಸಾವೆಯ ಕೃಷಿ ಪತ್ತಿನ ಸಹಕಾರ ಸಂಘದ ಮುಂದೆ ಹೆಸರು ನೋಂದಾಯಿಸಲು ಭಾನುವಾರವೇ ಸರದಿ ಸಾಲಿನಲ್ಲಿ ಕಾಯುತ್ತ ಕುಳಿತಿದ್ದ ರೈತರು
ಹಿರೀಸಾವೆಯ ಕೃಷಿ ಪತ್ತಿನ ಸಹಕಾರ ಸಂಘದ ಮುಂದೆ ಹೆಸರು ನೋಂದಾಯಿಸಲು ಭಾನುವಾರವೇ ಸರದಿ ಸಾಲಿನಲ್ಲಿ ಕಾಯುತ್ತ ಕುಳಿತಿದ್ದ ರೈತರು
ಚನ್ನರಾಯಪಟ್ಟಣದ ಕೊಬ್ಬರಿ ಖರೀದಿ ಕೇಂದ್ರದಲ್ಲಿ ಸರದಿ ಸಾಲಿನಲ್ಲಿ ಕಲ್ಲುಗಳನ್ನಿಟ್ಟು ಅವುಗಳಿಗೆ ನಂಬರ್ ಬರೆಯುವ ಮೂಲಕ ರೈತರು ಭಾನುವಾರ ಸ್ಥಳ ಕಾಯ್ದಿರಿಸಿದರು.
ಚನ್ನರಾಯಪಟ್ಟಣದ ಕೊಬ್ಬರಿ ಖರೀದಿ ಕೇಂದ್ರದಲ್ಲಿ ಸರದಿ ಸಾಲಿನಲ್ಲಿ ಕಲ್ಲುಗಳನ್ನಿಟ್ಟು ಅವುಗಳಿಗೆ ನಂಬರ್ ಬರೆಯುವ ಮೂಲಕ ರೈತರು ಭಾನುವಾರ ಸ್ಥಳ ಕಾಯ್ದಿರಿಸಿದರು.

20 ಸಾವಿರ ಟನ್‌ ಹೆಚ್ಚುವರಿ ಖರೀದಿಗೆ ಮನವಿ

ಚನ್ನರಾಯಪಟ್ಟಣ: ‘ನುಗ್ಗೇಹಳ್ಳಿ ಹಿರೀಸಾವೆ ಚನ್ನರಾಯಪಟ್ಟಣ ಶ್ರವಣಬೆಳಗೊಳ ಉದಯಪುರ ಬಾಗೂರು ಹೋಬಳಿ ಕೇಂದ್ರದಲ್ಲಿ ಸೋಮವಾರ ಬೆಳಿಗ್ಗೆ ಕೊಬ್ಬರಿ ಖರೀದಿಗಾಗಿ ನೋಂದಣಿ ಆರಂಭವಾಗಲಿದೆ’ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ತಿಳಿಸಿದರು. ಭಾನುವಾರ ಇಲ್ಲಿನ ಖರೀದಿ ಕೇಂದ್ರಕ್ಕೆ ಭೇಟಿ ನೀಡಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಖರೀದಿ ಕೇಂದ್ರದ ಬಳಿ ನೆರಳು ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ರಾಜ್ಯದಲ್ಲಿ 69250 ಟನ್ ಕೊಬ್ಬರಿ ಖರೀದಿಸಲಾಗುತ್ತದೆ. ಯಾವುದೇ ಗದ್ದಲಕ್ಕೆ ಆಸ್ಪದ ಇಲ್ಲದಂತೆ ಸುಸೂತ್ರವಾಗಿ ನೋಂದಣಿಗೆ ರೈತರು ಸಹಕರಿಸಬೇಕು’ ಎಂದು ಮನವಿ ಮಾಡಿದರು. ‘ರೈತರ ಹಿತದೃಷ್ಟಿಯಿಂದ ಹೆಚ್ಚುವರಿಯಾಗಿ 20 ಸಾವಿರ ಟನ್ ಕೊಬ್ಬರಿ ಖರೀದಿಸುವಂತೆ ರಾಜ್ಯಸಭಾ ಸದಸ್ಯ ಎಚ್.ಡಿ. ದೇವೇಗೌಡರ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗುವುದು’ ಎಂದು ಹೇಳಿದರು.

ಗರಿಷ್ಠ 15 ಕ್ವಿಂಟಲ್‌ ಖರೀದಿ

ಹಾಸನ: ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಡಿಯಲ್ಲಿ ಎಫ್.ಎ.ಕ್ಯೂ. ಗುಣಮಟ್ಟದ ಉಂಡೆ ಕೊಬ್ಬರಿಯನ್ನು ಪ್ರತಿ ಕ್ವಿಂಟಲ್‌ಗೆ ₹ 12ಸಾವಿರದಂತೆ ನಾಫೆಡ್ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಲಗಳ ವತಿಯಿಂದ ಖರೀದಿಸಲಾಗುವುದು. ಮಾ.4 ರಿಂದ ರೈತರ ನೋಂದಣಿ ಪುನರ್‌ ಆರಂಭವಾಗಲಿದ್ದು 45 ದಿನಗಳವರೆಗೆ ನೋಂದಣಿ ನಡೆಯಲಿದೆ ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಉಪ ನಿರ್ದೇಶಕ ಶ್ರೀಹರಿ ತಿಳಿಸಿದ್ದಾರೆ. ಅರಸೀಕೆರೆ ಚನ್ನರಾಯಪಟ್ಟಣ ಹೊಳೆನರಸೀಪುರ ಗಂಡಸಿ ಬಾಣಾವರ ಜಾವಗಲ್ ಜೆ.ಸಿ. ಪುರ ಶ್ರವಣಬೆಳಗೊಳ ನುಗ್ಗೇಹಳ್ಳಿ ದುದ್ದ ಬಾಗೂರು ಹಿರೀಸಾವೆ ಉದಯಪುರದಲ್ಲಿ ಆರಂಭವಾಗಲಿರುವ ಖರೀದಿ ಕೇಂದ್ರಗಳಲ್ಲಿ ಫ್ರೂಟ್ಸ್‌ ಐಡಿ ಮೂಲಕ ರೈತರು ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ಹೇಳಿದ್ದಾರೆ. ಪ್ರತಿ ರೈತರಿಂದ ಎಕರೆಗೆ 6 ಕ್ವಿಂಟಲ್‌ನಂತೆ ಗರಿಷ್ಠ 15 ಕ್ವಿಂಟಲ್‌ ಉಂಡೆ ಕೊಬ್ಬರಿ ಖರೀದಿಸಲಾಗುವುದು. ರೈತರ ಆಧಾರ್‌ ಸಂಖ್ಯೆ ಜೋಡಣೆಗೊಂಡ ಬ್ಯಾಂಕ್‌ ಖಾತೆಗೆ ಉತ್ಪನ್ನದ ಮೌಲ್ಯವನ್ನು ಡಿಬಿಟಿ ಮೂಲಕ ಜಮಾ ಮಾಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಖರೀದಿ ಕೇಂದ್ರದ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

4–5 ದಿನ ಕೇಂದ್ರದ ಎದುರೇ ಠಿಕಾಣಿ

ಹಿರೀಸಾವೆಯ ನೋಂದಣಿ ಕೇಂದ್ರದ ಬಳಿ ಭಾನುವಾರವೇ 600 ಜನ ರೈತರು ಸೇರಿದ್ದರು. ನಿತ್ಯ 150 ಜನರ ನೋಂದಣಿ ಮಾಡಲಾಗುತ್ತಿದ್ದು ಉಳಿದ 450 ಜನರು 4–5 ದಿನ ನೋಂದಣಿ ಕೇಂದ್ರ ಬಳಿಯೇ ಠಿಕಾಣಿ ಹೂಡಲು ನಿರ್ಧರಿಸಿದ್ದಾರೆ. ಭಾನುವಾರವೇ ಹಾಸಿಗೆ ಹೊದಿಕೆಗಳನ್ನು ಹೊತ್ತು ಕೇಂದ್ರಕ್ಕೆ ಬಂದಿರುವ ರೈತರು ನೋಂದಣಿ ಆಗುವವರೆಗೆ ಇಲ್ಲಿಯೇ ವಾಸ್ತವ್ಯ ಹೂಡುವುದಾಗಿ ತಿಳಿಸಿದರು. ರಾಜ್ಯ ಸಹಕಾರ ಮಾರಾಟ ಮಹಾಮಂಡಲದ ನಿರ್ದೇಶಕ ಸಿ.ಎನ್‌. ಪುಟ್ಟಸ್ವಾಮಿಗೌಡ ಭಾನುವಾರ ಹಿರೀಸಾವೆಯ ನೋಂದಣಿ ಕೇಂದ್ರಕ್ಕೆ ಭೇಟಿ ನೀಡಿ ರೈತರಿಗೆ ಪರಿಸ್ಥಿತಿಯ ಮನವರಿಕೆ ಮಾಡಲು ಪ್ರಯತ್ನಿಸಿದರು. ಆದರೆ ಇದಕ್ಕೆ ಒಪ್ಪದ ರೈತರು ನೋಂದಣಿ ಆಗುವವರೆಗೆ ಇಲ್ಲಿಯೇ ಇರುವುದಾಗಿ ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT