ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಂ ಬಳಿ ಇರುವ ಇಂಧನ, ಹಣಕಾಸು ಇಲಾಖೆಯಲ್ಲಿ ಭ್ರಷ್ಟಾಚಾರ: ರೇವಣ್ಣ ಆರೋಪ

ಆರೋಪ ಸುಳ್ಳಾದರೆ ಶಿಕ್ಷೆ ಅನುಭವಿಸಲು ಸಿದ್ದ: ಶಾಸಕ ಎಚ್.ಡಿ.ರೇವಣ್ಣ
Last Updated 3 ಏಪ್ರಿಲ್ 2021, 14:32 IST
ಅಕ್ಷರ ಗಾತ್ರ

ಹಾಸನ: ‘ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಳಿ ಇರುವ ಇಂಧನ, ಹಣಕಾಸು ಇಲಾಖೆಯಲ್ಲಿ ಭ್ರಷ್ಟಾಚಾರ ಮಿತಿ ಮೀರಿದ್ದು, ನಾನು ಮಾಡಿರುವ ಆರೋಪ ಸುಳ್ಳಾದರೆ ಯಾವ ರೀತಿಯ ಶಿಕ್ಷೆ ಅನುಭವಿಸಲೂ ಸಿದ್ಧ’ ಎಂದು ಶಾಸಕ ಎಚ್.ಡಿ. ರೇವಣ್ಣ ಸವಾಲು ಹಾಕಿದರು.

‘ಭ್ರಷ್ಟಾಚಾರ ತಡೆಯಬೇಕಾದ ಲೋಕಾಯುಕ್ತ ಜಿಲ್ಲೆಯಲ್ಲಿ ಜೀವಂತವಾಗಿಲ್ಲ. ಅವರಿಗೂ ಲಂಚದಲ್ಲಿ ಪಾಲುಹೋಗುತ್ತಿದೆ. ಸಣ್ಣಪುಟ್ಟ ಗುತ್ತಿಗೆದಾರರು ಪತ್ನಿ, ಮಕ್ಕಳ ಚಿನ್ನಾಭರಣ ಅಡವಿಟ್ಟು ಬಡ್ಡಿಗೆ ಹಣ ತಂದು ಕಾಮಗಾರಿಪೂರ್ಣಗೊಳಿಸಿದ್ದಾರೆ. ಕಾಮಗಾರಿಗಳ ಬಿಲ್‌ ಪಾಸ್ ಮಾಡಲು ಅಧಿಕಾರಿಗಳಿಗೆ ಗುತ್ತಿಗೆದಾರರು ಹಣ ನೀಡಬೇಕಿದೆ. ಗುತ್ತಿಗೆದಾರರು ವಿಷ ಸೇವಿಸುವ ಪರಿಸ್ಥಿತಿ ಬಂದಿದೆ. ಯಾವ ಇಲಾಖೆಯಲ್ಲೂ ಲಂಚ ಇಲ್ಲದೆ ಕೆಲಸಗಳು ಆಗುತ್ತಿಲ್ಲ’ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

‘ವಿವಿಧ ಇಲಾಖೆಯ ಅಭಿವೃದ್ಧಿ ಕಾಮಗಾರಿಗಳ ಗುತ್ತಿಗೆ ನಿರ್ವಹಿಸಿರುವ ಗುತ್ತಿಗೆದಾರರಿಗೆ ಬಿಲ್‌ ಪಾವತಿಯ ಎಲ್‌ಒಸಿ (ಲೆಟರ್‌ ಆಫ್‌ ಕ್ರೆಡಿಟ್‌) ‌ಜಿಲ್ಲೆಯಲ್ಲಿ ಬಹಿರಂಗವಾಗಿ ಮಾರಾಟವಾಗುತ್ತಿದೆ. ಈ ಪ್ರಕರಣವನ್ನು ಸಿಐಡಿ ಅಥವಾ ಸಿಸಿಬಿ ತನಿಖೆಗೆ ನೀಡಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಈ ಅವ್ಯವಹಾರದಲ್ಲಿ ತಮ್ಮದೂ ಪಾಲಿದೆ ಎಂದು ಯಡಿಯೂರಪ್ಪ ಒಪ್ಪಿಕೊಳ್ಳಲಿ’ ಎಂದು ಹೇಳಿದರು.

‘ಸಚಿವ ಕೆ.ಎಸ್. ಈಶ್ವರಪ್ಪ ಹಾಗೂ ಸಿ.ಎಂ ನಡುವಿನ ಮುಸುಕಿನ ಗುದ್ದಾಟದಿಂದಾಗಿ ರಾಜ್ಯದ ಜನತೆ ಕುಡಿಯುವ ನೀರಿಗೆಪರದಾಡುವಂತಾಗಿದೆ. ಶಾಂತಿಗ್ರಾಮ, ದುದ್ದ, ದಂಡಿನಹಳ್ಳಿ ಹೋಬಳಿಯಲ್ಲಿ ನೀರಿಗೆ ಬಿಕ್ಷೆ ಬೇಡುವ ಸ್ಥಿತಿ ಬಂದಿದೆ. ಜಿಲ್ಲಾ ಪಂಚಾಯಿತಿಯಿಂದ ಒಂದು ಕೊಳವೆ ಬಾವಿ ಕೊರೆಸಲು ಹಣ ಇಲ್ಲ. ಇಂತಹ ಲೂಟಿಕೋರರ ಸರ್ಕಾರ ನೋಡಿಲ್ಲ ಎಂದು ವಾಗ್ದಾಳಿ’ ನಡೆಸಿದರು.

‘ ನಮಗೆ ಎಷ್ಟು ಬೇಕಾದರೂ ತೊಂದರೆ ಕೊಡಿ, ಸಹಿಸಿಕೊಳ್ಳುವ ಶಕ್ತಿ ಇದೆ. ಆದರೆ ಬಡವರ ಕಣ್ಣಲ್ಲಿ ನೀರು ತರಿಸಿದರೆ ನಿಮ್ಮ ಮಕ್ಕಳು, ಮೊಮ್ಮಕ್ಕಳಿಗೆ ಒಳ್ಳೆಯದಾಗುವುದಿಲ್ಲ’ ಎಂದು ಯಡಿಯೂರಪ್ಪ ಅವರಿಗೆ ಎಚ್ಚರಿಸಿದರು.

ಹೊಳೆನರಸೀಪುರದಲ್ಲಿ ಮೂರು ದಿನಗಳಿಂದ ವಿದ್ಯುತ್ ಇಲ್ಲ. ಕಾಲೇಜು ವಿದ್ಯಾರ್ಥಿಯೊಬ್ಬ ಹಾಸ್ಟೆಲ್‌ನಲ್ಲಿ ನೀರು ಬಾರದ ಕಾರಣ ಬಟ್ಟೆ ತೊಳೆಯಲು ಹೋಗಿ ಹೇಮಾವತಿ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಇಂತಹ ಸ್ಥಿತಿ ನಿರ್ಮಾಣವಾಗಲು ಯಾರುಕಾರಣ ಎಂದು ಪ್ರಶ್ನಿಸಿದರು.

ಬಿಜೆಪಿಯವರಿಗೆ ಜನರ ಸಮಸ್ಯೆಗಿಂತ ಉಪ ಚುನಾವಣೆ ಗೆಲ್ಲುವುದೇ ಮುಖ್ಯವಾಗಿದೆ. ಹಾಸನ ಅಭಿವೃದ್ಧಿಗೆ ಸಂಬಂಧಿಸಿದಂತೆ ಯಡಿಯೂರಪ್ಪ ಅವರು ಎಚ್.ಡಿ. ದೇವೇಗೌಡರಿಗೆ ಕೊಟ್ಟ ಆಶ್ವಾಸನೆ ಮರೆತಿದ್ದಾರೆ. ದೇವೇಗೌಡರು ಆಸ್ಪತ್ರೆಯಿಂದ ಬಿಡುಗಡೆ ಆದ ಬಳಿಕ, ಶಾಸಕರ ಜತೆ ಚರ್ಚಿಸಿ, ಮತ್ತೆ ಸಿ.ಎಂ ನಿವಾಸದ ಎದುರು ಧರಣಿ ನಡೆಸುವ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

‘ಹಾಸನ ಜಿಲ್ಲಾ ಪಂಚಾಯಿತಿಗೆ 2019-20ರ ಸಾಲಿನ ರಾಷ್ಟ್ರೀಯ ಪುರಸ್ಕಾರ ದೊರೆತಿದೆ. ಕಾಂಗ್ರೆಸ್‍ನವರು ಹಠಕ್ಕೆ ಬಿದ್ದು, ಅಧ್ಯಕ್ಷ ಸ್ಥಾನ ಪಡೆದರು. ನಾನು ಸಚಿವನಾಗಿದ್ದಾಗ ಅಧಿಕಾರಿಗಳಿಂದ ಕೆಲಸ ಮಾಡಿಸಿದೆ. ಅಭಿವೃದ್ಧಿ ಎಂದರೆ ಏನು ಎಂಬುದನ್ನು ತೋರಿಸಿದ್ದೇನೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT