ಹೊಳೆನರಸೀಪುರ: ತಾಲ್ಲೂಕಿನ ಮಾವನೂರು ಗ್ರಾಮದಲ್ಲಿ ಮದ್ಯವ್ಯಸನಿಯೊಬ್ಬನ ಹಲ್ಲೆಯಿಂದ ತಪ್ಪಿಸಿಕೊಳ್ಳಲು ಮುಂದಾದ ತಂದೆ, ಕೈಯಲ್ಲಿದ್ದ ಚಾರ್ಜೆಬಲ್ ಬ್ಯಾಟರಿಯಿಂದ ತಲೆಗೆ ಹೊಡೆದ ಪರಿಣಾಮ ಮಗ ಮೃತಪಟ್ಟಿದ್ದಾನೆ.
ತಾಲ್ಲೂಕಿನ ಹಳೇಕೋಟೆ ಹೋಬಳಿಯ ಮಾವನೂರು ಗ್ರಾಮದಲ್ಲಿ ಶಿವಮ್ಮ– ನಂಜುಂಡೇಗೌಡ ದಂಪತಿ ಪುತ್ರ ಉಮೇಶ ನಿತ್ಯ ಮದ್ಯಪಾನ ಮಾಡಿ, ’ಮನೆಯಲ್ಲಿ ನನಗೆ ಮದುವೆ ಮಾಡಿಲ್ಲ. ನನ್ನ ಹೆಸರಿಗೆ ಜಮೀನು ನೀಡಿಲ್ಲ’ ಎಂದು ಜಗಳ ಮಾಡುತ್ತಿದ್ದ. ಮಂಗಳವಾರ ರಾತ್ರಿಯೂ ಮನೆಯಲ್ಲಿ ಗಲಾಟೆ ಮಾಡಿ ಮಲಗಿದ್ದ.
ಬುಧವಾರ ಬೆಳಿಗ್ಗೆ ನಂಜುಂಡೇಗೌಡರು ಕೊಟ್ಟಿಗೆಯಲ್ಲಿ ಕೆಲಸ ಮಡುತ್ತಿದ್ದ ಸಂದರ್ಭದಲ್ಲಿ ಅವ್ಯಾಚ್ಯ ಶಬ್ದಗಳಿಂದ ಬೈಯುತ್ತಿದ್ದ ಉಮೇಶ್, ಹಲ್ಲೆ ನಡೆಸಲು ಮುಂದಾಗಿದ್ದ. ಆತನಿಂದ ತಪ್ಪಿಸಿಕೊಳ್ಳಲು ಕೈಯಲ್ಲಿದ್ದ ಬ್ಯಾಟರಿಯಿಂದ ನಂಜುಂಡೇಗೌಡ, ಉಮೇಶ್ ತಲೆಗೆ ಹೊಡೆದಿದ್ದಾರೆ. ಉಮೇಶನ ತಲೆಯಲ್ಲಿ ರಕ್ತ ಬರುತ್ತಿದ್ದನ್ನು ಕಂಡು ಕೆಲ ಯುವಕರು ಆಂಬುಲೆನ್ಸ್ ಮೂಲಕ ಗಾಯಾಳುವನ್ನು ಹಾಸನಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಮಾರ್ಗಮಧ್ಯೆ ಉಮೇಶ ಸಾವನ್ನಪ್ಪಿದ್ದಾರೆ. ಈ ಕುರಿತು ಮೃತನ ತಾಯಿ ಶಿವಮ್ಮ ದೂರು ನೀಡಿದ್ದಾರೆ.
ಕುಡಿತ ಮತ್ತಿನಲ್ಲಿ ಈಜಲು ಹೋಗಿ ಯುವಕ ಸಾವು
ಅರಕಲಗೂಡು: ತಾಲ್ಲೂಕಿನ ಹೆಬ್ಬಾಲೆ ಬಳಿ ಕುಡಿದ ಮತ್ತಿನಲ್ಲಿ ಈಜಲು ತೆರಳಿದ್ದ ಯುವಕ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.
ಹೊಸಕೊಪ್ಪಲು ಗ್ರಾಮದ ಮಲ್ಲೇಶ್ (28) ಮೃತ ಯುವಕ. ಗ್ರಾಮದ ಹೇಮಾವತಿ ಬಲದಂಡೆ ನಾಲೆ ಸಮೀಪ ಮೂವರು ಸ್ನೇಹಿತರ ಸೇರಿ, ಪಾರ್ಟಿ ಮಾಡಿದ್ದಾರೆ. ಅತಿಯಾಗಿ ಮದ್ಯ ಸೇವನೆ ಮಾಡಿದ್ದ ಮಲ್ಲೇಶ್, ನಾಲೆಗೆ ಈಜಲು ಇಳಿದಿದ್ದ. ಈಜಲು ಸಾಧ್ಯವಾಗದೇ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.
ಅಗ್ನಿಶಾಮಕ ದಳದ ಸಿಬ್ಬಂದಿ ನಾಲೆಯಲ್ಲಿ ಶೋಧಕಾರ್ಯ ನಡೆಸಿ ಮೃತದೇಹ ಹೊರ ತೆಗೆದಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲಿಸಿದ್ದು, ಅರಕಲಗೂಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.