ಮಂಗಳವಾರ, ಅಕ್ಟೋಬರ್ 20, 2020
27 °C

ಸಕಲೇಶಪುರ: ಅರಣ್ಯ ಇಲಾಖೆಯಿಂದ ಬೆಳೆ ತೆರವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಕಲೇಶಪುರ: ‘ಹಿಡುವಳಿ ಜಮೀನಿನಲ್ಲಿ ಬೆಳೆದಿದ್ದ ಕಾಫಿ, ಬಾಳೆ, ಕಾಳು ಮೆಣಸು ಗಿಡಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಕಿತ್ತು ಬೆಳೆ ಹಾನಿ ಮಾಡಿದ್ದಾರೆ’ ಎಂದು ತಾಲ್ಲೂಕಿನ ಕ್ಯಾನಹಳ್ಳಿ ಗ್ರಾಮದ ಕೆಲವು ರೈತರು ಆರೋಪಿಸಿದ್ದಾರೆ.

ಗ್ರಾಮದ ಕೆ.ಟಿ. ಗೋಪಾಲಗೌಡ ಅವರ ಸರ್ವೆ ನಂ.138 ರಲ್ಲಿ ಎರಡು ಎಕರೆ, ಕೆ.ಕೆ.ರಂಜನ್‌ ಅವರ ಸರ್ವೆ ನಂಬರ್‌ 47ರಲ್ಲಿ 2.30 ಎಕರೆ ಸೇರಿದಂತೆ ಕೆಲವು ರೈತರು ಬೆಳೆದಿರುವ ಗಿಡಗಳನ್ನು ಕಿತ್ತುಹಾಕಿರುವುದಾಗಿ ತಹಶೀಲ್ದಾರ್‌, ಉಪವಿಭಾಗಾಧಿಕಾರಿ ಹಾಗೂ ಗ್ರಾಮಾಂತರ ಪೊಲೀಸ್‌ ಠಾಣೆಗೆ ದೂರು ನೀಡಲಾಗಿದೆ ಎಂದು ರೈತ ಕೆ.ಜಿ.ಸುಬ್ರಹ್ಮಣ್ಯ ಹಾಗೂ ಕೆ.ಕೆ.ರಂಜನ್‌ ಸುದ್ದಿಗಾರರಿಗೆ ಹೇಳಿದರು.

ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ತಹಶೀಲ್ದಾರ್‌ ಸ್ಥಳ ಪರಿಶೀಲಿಸಿ ಸಮಿತಿಗೆ ವರದಿ ಮಂಡಿಸುವಂತೆ ಆದೇಶಿಸಿದ್ದಾರೆ. ಭೂಮಿ ಮಂಜೂರಾತಿ ಹಂತದಲ್ಲಿ ಇರುವಾಗಲೇ ಅರಣ್ಯ ಇಲಾಖೆಯವರು ಗಿಡ ಕಿತ್ತು ಹಾನಿ ಮಾಡಿದ್ದಾರೆ ಎಂದು ಆರೋಪಿಸಿದರು.

ಹಿಡು‌ವಳಿ ಭೂಮಿಯಲ್ಲಿ ತೆರವುಗೊಳಿಸಿಲ್ಲ: ಕ್ಯಾನಹಳ್ಳಿ ಗ್ರಾಮದ ಹಿಡುವಳಿ ಭೂಮಿಯಲ್ಲಿ ಕಾಫಿ, ಬಾಳೆ, ಕಾಳುಮೆಣಸು ಗಿಡ ತೆರವುಗೊಳಿಸಿಲ್ಲ ಎಂದು ವಲಯ ಅರಣ್ಯ ಅಧಿಕಾರಿ ರಾಘವೇಂದ್ರ ಅಗಸೆ ಹೇಳಿದರು.

ಕೆಲವರು ಎಚ್‌ಆರ್‌ಪಿಯಿಂದ ಮಂಜೂರಾಗಿದೆ ಎಂದು ಹೇಳಿ ಸರ್ಕಾರಿ ನೆಡುತೋಪುಗಳಲ್ಲಿ ತೋಟ ಮಾಡಲು ಮುಂದಾಗಿದ್ದಾರೆ. ನೆಡುತೋಪುಗಳ ಎಚ್‌ಆರ್‌ಪಿ ಮಂಜೂರಾತಿ ರದ್ದುಗೊಳಿಸುವಂತೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ. ಹೀಗಾಗಿ ಮರಮಾಲಿಕೆ ಕಟ್ಟುವುದಕ್ಕೆ ಅವಕಾಶವೂ ಇಲ್ಲ. ಗ್ರಾಮದಲ್ಲಿ ಇರುವ ಸ್ವಲ್ಪ ಪ್ರಮಾಣದ ನೆಡುತೋಪು ಉಳಿಸಿಕೊಳ್ಳಬೇಕಾದ ಜವಾಬ್ದಾರಿಯನ್ನು ಸರ್ಕಾರ ಇಲಾಖೆಗೆ ನೀಡಿದೆ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.