ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಎ ಜಾರಿಯಿಂದ ದೇಶದ ಯಾವುದೇ ಪ್ರಜೆಗೂ ತೊಂದರೆ ಇಲ್ಲ: ಡಿವಿಎಸ್‌

Last Updated 10 ಜನವರಿ 2020, 14:31 IST
ಅಕ್ಷರ ಗಾತ್ರ

ಹಾಸನ : ಕಾಂಗ್ರೆಸ್ ಹಾಗೂ ಎಡಪಕ್ಷಗಳು ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಲು ಯಾವುದೇ ಅಸ್ತ್ರ ಸಿಗದೆ ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ಕುರಿತು ಜನರಿಗೆ ತಪ್ಪು ಸಂದೇಶ ನೀಡುತ್ತಿವೆ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಆರೋಪಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, 2014ರ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಸಿಎಎ ಜಾರಿಗೊಳಿಸಲಾಗಿದೆ. ಭಾರತ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದ್ದು, ಅಮೆರಿಕ ಅಧ್ಯಕ್ಷ ಸಹ ಮೋದಿ ಆಡಳಿತ ಮೆಚ್ಚಿಕೊಂಡಿದ್ದಾರೆ ಎಂದರು.

ಕೇಂದ್ರ ಸರ್ಕಾರ ಭ್ರಷ್ಟಾಚಾರ ರಹಿತ ಆಡಳಿತ ನೀಡಿದೆ. ದೇಶದ ಪ್ರಗತಿಗೆ ಹಲವಾರು ಜನಪರ ಯೋಜನೆ ಜಾರಿಗೊಳಿಸಿದೆ. ಮುಸ್ಲಿಂ ಮಹಿಳೆಯರಿಗೆ ಆಗುತ್ತಿದ್ದ ಅನ್ಯಾಯ ತಡೆಯಲು ತ್ರಿವಳಿ ತಲಾಖ್ ಪದ್ಧತಿ ರದ್ಧು ಮಾಡಲಾಯಿತು. ಉಗ್ರ ಸಂಘಟನೆಗಳನ್ನು ದಮನ ಮಾಡಲಾಗಿದೆ. ಮೋದಿ ಟೀಕಿಸಬೇಕೆಂಬ ಕಾರಣಕ್ಕೆ ಸಿಎಎ ವಿರೋಧಿಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸಿಎಎ ಜಾರಿಯಿಂದ ದೇಶದ 130 ಕೋಟಿ ಜನಸಂಖ್ಯೆಯಲ್ಲಿ ಒಬ್ಬರಿಗೂ ತೊಂದರೆ ಆಗುವುದಿಲ್ಲ. ಸರ್ಕಾರಿ ಆಸ್ತಿಗೆ ಹಾನಿ ಮಾಡಬಾರದು. ಬೆದರಿಕೆಗೆ ಹೆದರಿ ಹಿಂದೆ ಸರಿಯುವುದಿಲ್ಲ ಎಂದು ವಿರೋಧ ಪಕ್ಷಗಳಿಗೆ ತಿರುಗೇಟು ನೀಡಿದರು.

ಶಾಸಕ ಪ‍್ರೀತಂ ಗೌಡ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ನವಿಲೆ ಅಣ್ಣಪ್ಪ, ಮುಖಂಡ ರೇಣು ಕುಮಾರ್ ಇದ್ದರು.

ಇದೇ ವೇಳೆ ಪೌರತ್ವ (ತಿದ್ದುಪಡಿ) ಕಾಯ್ದೆಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಮನೆ ಮನೆ ಸಂಪರ್ಕ ಹಾಗೂ ಸಹಿ ಸಂಗ್ರಹ ಸಹಿ ಅಭಿಯಾನಕ್ಕೆ ಹಾಸನಾಂಬ ದೇವಸ್ಥಾನ ಎದುರು ಸದಾನಂದಗೌಡ ಚಾಲನೆ ನೀಡಿದರು.

ಹೊಸಲೈನ್ ರಸ್ತೆಯಲ್ಲಿರುವ ಮನೆ ಮನೆಗೆ ತೆರಳಿ ಕರಪತ್ರ ನೀಡಿ, ಸಿಎಎ ಕುರಿತು ವರ್ತಕರು ಹಾಗೂ ಸಾರ್ವಜನಿಕರಿಗೆ ಮನವಿ ಮಾಡಿಕೊಟ್ಟರು. ಡಬಲ್ ಟ್ಯಾಂಕ್, ಪಾಂಡುರಂಗ ದೇವಸ್ಥಾನ, ಸುಪ್ರಿಯಾ ಬಾರ್, ಕಸ್ತೂರಬಾ ರಸ್ತೆಯಲ್ಲಿ ಕರಪತ್ರ ವಿತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT