ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ: ದೌರ್ಜನ್ಯ ತಡೆಗಟ್ಟಿ, ಹಕ್ಕು ರಕ್ಷಿಸಿ

ಡಿಸಿ ಕಚೇರಿ ಎದುರು ದಲಿತ ಹಕ್ಕುಗಳ ಸಮಿತಿ ಪ್ರತಿಭಟನೆ
Last Updated 13 ಆಗಸ್ಟ್ 2020, 16:02 IST
ಅಕ್ಷರ ಗಾತ್ರ

ಹಾಸನ: ಭೂ ಸುಧಾರಣಾ ಕಾಯಿದೆ ತಿದ್ದುಪಡಿ ಹಿಂಪಡೆಯಬೇಕು ಹಾಗೂ ಪರಿಶಿಷ್ಟರ ಮೇಲಿನ ದೌರ್ಜನ್ಯ ತಡೆಗಟ್ಟಿ, ಹಕ್ಕುಗಳನ್ನು ರಕ್ಷಿಸಬೇಕು ಎಂದು ಆಗ್ರಹಿಸಿ ದಲಿತ ಹಕ್ಕುಗಳ ಸಮಿತಿ (ಡಿ.ಎಚ್‌.ಎಸ್‌) ವತಿಯಿಂದ ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

1961 ಮತ್ತು 1947ರ ಭೂ ಸುಧಾರಣೆ ಕಾಯಿದೆ ಜಾರಿಯಾದಾಗಿನಿಂದ ಇದುವರೆಗೂ ಪರಿಶಿಷ್ಟ ಜಾತಿಯವರು ಶೇಕಡಾ 8.83 ರಷ್ಟು ಹಾಗೂ ಪಂಗಡದವರು ಶೇಕಡಾ 5.80 ರಷ್ಟು ಮಾತ್ರ ಭೂಮಿ ಹೊಂದಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಅತಿ ಸಣ್ಣ ಹಿಡುವಳಿದಾರರಿದ್ದಾರೆ. ದರಖಾಸ್ತು, ಬಗರ್‌ ಹುಕುಂ, ಒತ್ತುವರಿ ಇತ್ಯಾದಿ ಎಸ್‌ಸಿ, ಎಸ್‌ಟಿ ಜಮೀನಿಗೆ ಸಂಬಂಧಿಸಿದ ಸಾವಿರಾರು ಪ್ರಕರಣಗಳು ನ್ಯಾಯಾಲಯದಲ್ಲಿ ಕೊಳೆಯುತ್ತಿವೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಉಳುವವನು ಭೂಮಿ ಒಡೆಯನಾಗಿಬೇಕೆಂಬ ಪರಿಶಿಷ್ಟರ ಕನಸನ್ನು ರಾಜ್ಯ ಸರ್ಕಾರ ಮಣ್ಣು ಮಾಡಿ, ಕಪ್ಪು ಹಣ ಉಳ್ಳವರು, ಹಣವಂತರು ಮತ್ತು ಕಾರ್ಪೋರೆಟ್‌ ಕಂಪನಿಗಳು ಭೂಮಿ ಕಿತ್ತುಕೊಳ್ಳಲು ಸುಗ್ರೀವಾಜ್ಞೆ ತಂದಿದೆ. ಜಾತಿ ದೌರ್ಜನ್ಯ ಬಗ್ಗೆ ಸರ್ಕಾರಗಳು ಮಾತನಾಡುತ್ತಿಲ್ಲ. ಬಿ.ಆರ್‌. ಅಂಬೇಡ್ಕರ್‌ ಅವರ ಮನೆ ಮೇಲೆ ದಾಳಿ, ಸಂವಿಧಾನದ ಮೇಲೆ ದಾಳಿ, ನೊಂದವರ ಪರ ದ್ವನಿ ಎತ್ತಿದ ಹೋರಾಟಗಾರರನ್ನು ಜೈಲಿಗೆ ತಳ್ಳಿದ್ದಾರೆ ಎಂದು ಟೀಕಿಸಿದರು.

ಸಾಮಾಜಿಕ ಬಹಿಷ್ಕಾರ, ಜಾತಿ ತಾರತಮ್ಯ, ದೌರ್ಜನ್ಯ, ಕೊಲೆ, ಪೊಲೀಸ್‌ ದಬ್ಬಾಳಿಕೆ, ಅಂತರ ಜಾತಿ ವಿವಾಹದ ಮರ್ಯಾದೆ ಹತ್ಯೆ, ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳಲ್ಲಿ ದೂರುದಾರರ ವಿರುದ್ಧವೇ ಪ್ರತಿ ದೂರು ದಾಖಲಿಸಿ ಪೊಲೀಸರೇ ಆರೋಪಿಗಳಿಗೆ ರಕ್ಷಣೆ ನೀಡುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಬೇಸರ ವ್ಯಕ್ತಪಡಿಸಿದರು.

ಭೂಮಿ ಇಲ್ಲದ ಎಸ್‌ಸಿ,ಎಸ್‌ಟಿ ಸಮಾಜದವರಿಗೆ 5 ಎಕರೆ ಭೂಮಿ ನೀಡಬೇಕು. ಕೊಲೆ, ದೌರ್ಜನ್ಯ ಎಸಗಿದವರಿಗೆ ಕಠಿಣ ಶಿಕ್ಷೆಯಾಗಬೇಕು. ನೊಂದ ಕುಟುಂಬಗಳಿಗೆ ಸೂಕ್ತ ಪರಿಹಾರ ಒದಗಿಸಬೇಕು. ದೌರ್ಜನ್ಯ ತಡೆ ಕಾಯ್ದೆ ಕಟ್ಟುನಿಟ್ಟಾಗಿ ಜಾರಿಯಾಗಬೇಕು. ಪ್ರಕರಣಗಳ ವಿಚಾರಣೆಗೆ ಜಿಲ್ಲೆಗೊಂದು ತ್ವರಿತ ನ್ಯಾಯಾಲಯ ಸ್ಥಾಪನೆ ಆಗಬೇಕು ಎಂದು ಆಗ್ರಹಿಸಿದರು.

ಕೋವಿಡ್‌-19 ಸಮಯದಲ್ಲಿ ಸಂಕಷ್ಟದಲ್ಲಿರುವ ಪರಿಶಿಷ್ಟ ಸಮಾಜದವರಿಗೆ ಮಾಸಿಕ ₹ 7,500 ನೀಡಬೇಕು. ಉದ್ಯೋಗ ಖಾತ್ರಿ ಯೋಜನೆಯಲ್ಲಿ 200 ದಿನ ಕೆಲಸ ನೀಡಬೇಕು. ಈ ಯೋಜನೆಯನ್ನು ನಗರ ಪ್ರದೇಶಕ್ಕೂ ವಿಸ್ತರಿಸಬೇಕು. ಖಾಸಗಿ ಕ್ಷೇತ್ರದಲ್ಲೂ ಮೀಸಲಾತಿ ನೀಡಬೇಕು. ಹಾಸ್ಟೆಲ್‌ ವಿದ್ಯಾರ್ಥಿಗಳಿಗೆ ಹೆಚ್ಚಿನ ಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ದಲಿತ ಹಕ್ಕುಗಳ ಸಮಿತಿ ಜಿಲ್ಲಾ ಸಂಚಾಲಕ ಎಂ.ಜಿ. ಪೃಥ್ವಿ, ಸಹ ಸಂಚಾಲಕ ರಾಜು ಸಿಗರನಹಳ್ಳಿ, ಮೀನಾಕ್ಷಿ, ತಾಲ್ಲೂಕು ಸಂಚಾಲಕ ಎಂ.ಎಸ್. ಮಧುಸೂಧನ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT