ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಸಿ ಕಚೇರಿ ಎದುರು ರಾಸುಗಳೊಂದಿಗೆ ಪ್ರತಿಭಟನೆ

ದನಗಳ ಜಾತ್ರೆಗೆ ಮೂಲ ಸೌಕರ್ಯ ಒದಗಿಸಲು ರೈತರ ಆಗ್ರಹ
Last Updated 18 ಡಿಸೆಂಬರ್ 2019, 14:57 IST
ಅಕ್ಷರ ಗಾತ್ರ

ಹಾಸನ : ನಗರದ ಗೊರೂರು ರಸ್ತೆಯಲ್ಲಿ ನಡೆಯುತ್ತಿರುವ ದನಗಳ ಜಾತ್ರೆಗೆ ಮೂಲ ಸೌಕರ್ಯ ಒದಗಿಸಿಲ್ಲ ಎಂದು ಆರೋಪಿಸಿ ರೈತರು ತಮ್ಮ ರಾಸುಗಳೊಂದಿಗೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ದನಗಳ ಜಾತ್ರೆಗೆ ಶತಮಾನಗಳ ಇತಿಹಾಸ ಇದೆ. ಸರ್ಕಾರ, ಜಿಲ್ಲಾಡಳಿತ, ನಗರಸಭೆ ಉತ್ಸಾಹ ತೋರದೇ ಮೂಲ ಸೌಕರ್ಯ ಕಲ್ಪಿಸಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ದನಗಳಿಗೆ ಕುಡಿಯಲು ನೀರು, ಮೇವು ಸಹ ಲಭ್ಯವಿಲ್ಲ. ಬೆಳಗ್ಗೆಯಿಂದ ಸಂಜೆವರೆಗೂ ಬಿಸಿಲಿನಲ್ಲೇ ನಿಲ್ಲಬೇಕಿದೆ. ಬಿಸಿಲಿನಿಂದ ರಕ್ಷಣೆ ಪಡೆಯಲು ಪೆಂಡಾಲ್‌ ವ್ಯವಸ್ಥೆ ಮಾಡಬೇಕು ಎಂದು ರೈತರು ಆಗ್ರಹಿಸಿದರು.

ಹಾಸನ, ಬೇಲೂರು, ಹಳೇಬೀಡು, ಶ್ರವಣಬೆಳಗೋಳ, ಚನ್ನರಾಯಪಟ್ಟಣ, ಅರಕಲಗೂಡು, ಅರಸೀಕೆರೆ ಸೇರಿದಂತೆ ಹೊರ ಜಿಲ್ಲೆಗಳಿಂದ ರೈತರು ದನಗಳನ್ನು ಜಾತ್ರೆಗೆ ಕರೆ ತರುತ್ತಾರೆ. ನಿತ್ಯ ನೂರಾರು ಜಾನುವಾರುಗಳು ಮಾರಾಟವಾಗುತ್ತವೆ. ಹಿಂದೆ ಉತ್ತಮ ತಳಿಯ ಜಾನುವಾರುಗಳಿಗೆ ಬಹುಮಾನ ನೀಡಲಾಗಿತ್ತು. ಆದರೆ ಈಗ ಬಹುಮಾನ ನೀಡುವುದನ್ನು ನಿಲ್ಲಿಸಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಅಳವಡಿಸಿರುವ ವಿದ್ಯುತ್‌ ಕಂಬಗಳು ಜೋರು ಗಾಳಿಗೆ ಕೆಳಗೆ ಬಿದ್ದು, ರೈತರೊಬ್ಬರಿಗೆ ಪೆಟ್ಟಾಗಿದೆ. ಅವರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದ್ದು, ಐದಾರು ಹೊಲಿಗೆ ಹಾಕಲಾಗಿದೆ. ಈ ರೀತಿ ಅವಘಡ ಸಂಭವಿಸಿದರೆ ಅವರನ್ನೇ ನಂಬಿಕೊಂಡಿರುವ ಕುಟುಂಬ ಸದಸ್ಯರಿಗೆ ಯಾರು ದಿಕ್ಕು ಎಂದು ಮುದ್ದಳ್ಳಿ ರೈತ ಜವರೇಗೌಡ ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT