ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರಕ್ಕೊಮ್ಮೆ ವಾರ್ಡ್‌ಗೆ ಹೋದ್ರೆ ರೋಗಿಗಳ ಪಾಡೇನು?

ಹಿಮ್ಸ್‌ ನಿರ್ದೇಶಕರ ಕಾರ್ಯವೈಖರಿಗೆ ಡಿಸಿಎಂ ಅಶ್ವತ್ಥ ನಾರಾಯಣ ಬೇಸರ
Last Updated 22 ಮೇ 2021, 13:31 IST
ಅಕ್ಷರ ಗಾತ್ರ

ಹಾಸನ: ವಾರಕ್ಕೊಮ್ಮೆ ಕೋವಿಡ್‌ ಸೋಂಕಿತರ ವಾರ್ಡ್‌ಗೆ ಭೇಟಿ ನೀಡುತ್ತಿದ್ದ ಹಾಸನವೈದ್ಯಕೀಯ ವಿಜ್ಞಾನ ಸಂಸ್ಥೆಯ ಡೀನ್‌ ಡಾ.ಬಿ.ಸಿ.ರವಿಕುಮಾರ್‌ ಅವರನ್ನು ಉಪಮುಖ್ಯಮಂತ್ರಿ ಡಾ.ಸಿಎನ್.‌ ಅಶ್ವತ್ಥ ನಾರಾಯಣ ತರಾಟೆಗೆ ತೆಗೆದುಕೊಂಡರು.

ಹಿಮ್ಸ್‌ ಗೆ ಶನಿವಾರ ಭೇಟಿ ನೀಡಿ, ಪರಿಶೀಲನೆ ನಡೆಸಿದ ವೇಳೆ, ‘ಆಸ್ಪತ್ರೆ ನಿರ್ದೇಶಕರಾದ ನೀವು ಎಷ್ಟು ದಿನಕ್ಕೊಮ್ಮೆ‌ ರೌಂಡ್ಸ್ ಮಾಡ್ತೀರಿ’ ಎಂಬ ಪ್ರಶ್ನಿಸಿದಾಗ, ‘ವಾರಕ್ಕೊಮ್ಮೆ ಭೇಟಿ ನೀಡುತ್ತೇನೆ’ ಎಂದು ಹೇಳಿದರು.

ಇದರಿಂದ ಕೆಂಡಾಮಂಡಲರಾದ ಡಿಸಿಎಂ, "ನೀವೇ ವಾರಕ್ಕೊಮ್ಮೆ ವಾರ್ಡ್‌ಗೆ ಹೋದರೆ ಇನ್ನು ಇಡೀ ವ್ಯವಸ್ಥೆ ಕಥೆ ಏನು? ಸ್ವತಃ ಡೀನ್‌ ಹೀಗೆ ಮಾಡಿದರೆ ಇತರೆ ವೈದ್ಯರ ಪರಿಸ್ಥಿತಿ ಏನು? ಎಲ್ಲರಿಗಿಂತ ಮೊದಲೇ ವ್ಯಾಕ್ಸಿನ್‌ ತೆಗೆದುಕೊಂಡು ಮುಂಚೂಣಿಯಲ್ಲಿ ಕೆಲಸ ಮಾಡುತ್ತಿರುವ ನಿಮ್ಮಂಥವರೇ ಹೆದರಿಕೊಂಡು ಸೋಂಕಿತರ ಬಳಿಗೆ ಹೋಗದಿದ್ದರೆ ಅವರ ಪಾಡೇನು? ಸೋಂಕಿತರಿಗೆ ಮನೋಧೈರ್ಯ ಬರುವುದು ಹೇಗೆ?" ಎಂದು ಖಾರವಾಗಿ ಪ್ರಶ್ನಿಸಿದರು.

‘ಇನ್ನು ಮುಂದೆ ಹೀಗೆ ಆಗುವಂತಿಲ್ಲ. ದಿನಕ್ಕೊಮ್ಮೆಯಾದರೂ, ಅಗತ್ಯ ಬಿದ್ದರೆ ಎರಡು ಸಲವಾದರೂ ಸೋಂಕಿತರ ವಾರ್ಡ್‌ಗೆ ಭೇಟಿ ನೀಡಲೇಬೇಕು. ಇಲ್ಲಿ ಏನೇ ಆದರೂ ನೀವೇ ಹೊಣೆಗಾರರು. ಮುಂದೆ ಇಂಥ ನಿರ್ಲಕ್ಷ್ಯ ಮರುಕಳಿಸಿದರೆ ಸುಮ್ಮನಿರುವುದಿಲ್ಲ’ ಎಂದು ಡಿಸಿಎಂ ಎಚ್ಚರಿಕೆ ನೀಡಿದರು.

‘ಬೇರೆ ಕಡೆ ಆಮ್ಲಜನಕ ಪ್ರಮಾಣ 40ಕ್ಕೆ ಕುಸಿದರೂ ರೋಗಿಗಳು ಬದುಕುಳಿಯುತ್ತಿದ್ದಾರೆ. ಬೇರೆ ದೇಶಗಳಲ್ಲಿ ಇಂತಹ ಸೋಂಕಿತರು ಶೇಕಡಾ 90ರಷ್ಟು ಬದುಕಿದ್ದಾರೆ. ಹಿಮ್ಸ್‌ನಲ್ಲಿ ಮಾತ್ರ ಏಕೆ ಹೀಗಾಗುತ್ತಿದೆ’ ಎಂದು ವೈದ್ಯರನ್ನು ಪ್ರಶ್ನಿಸಿದರು.

‘ಕೋವಿಡ್ ಸೋಂಕಿತರಿಗೆ ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ.ರೋಗಿಗಳಿಗೆ ಮಾತ್ರೆಗಳನ್ನು ಎಸೆಯುತ್ತಾರೆ. ಹತ್ತಿರ ಹೋಗಿ ಮಾತನಾಡಿ, ಧೈರ್ಯ ಹೇಳುತ್ತಿಲ್ಲ. ನಮ್ಮ‌ ಜನರನ್ನ ಉಳಿಸಿಕೊಳ್ಳಬೇಕು, ದಯವಿಟ್ಟು ಸರಿಯಾಗಿ ಚಿಕಿತ್ಸೆ ನೀಡಲು ಹೇಳಿ’ ಎಂದು ಸಭೆಯಲ್ಲಿ ಜೆಡಿಎಸ್ ಶಾಸಕರಾದ ಕೆ.ಎಂ.ಶಿವಲಿಂಗೇಗೌಡ, ಸಿ.ಎನ್.ಬಾಲಕೃಷ್ಣ ದೂರು ನೀಡಿದರು.

ಆಮ್ಲಜನಕ ಹಾಗೂ ರೆಮ್ ಡಿಸಿವರ್ ಚುಚ್ಚುಮದ್ದು ನಿರ್ವಹಣೆಯಲ್ಲಿ ಮುಂಜಾಗ್ರತೆ ವಹಿಸಬೇಕು.ವೈದ್ಯಕೀಯ ಸಿಬ್ಬಂದಿಗಳನ್ನು ಅಗತ್ಯವಿದ್ದಲ್ಲಿ ಹೆಚ್ಚುವರಿಯಾಗಿ ತಾತ್ಕಾಲಿಕವಾಗಿ ನೇಮಿಸಿ ಕೊಳ್ಳುವಂತೆ ಉಪ ಮುಖ್ಯಮಂತ್ರಿ ಡಾ.ಅಶ್ವತ್ಥ್ ನಾರಾಯಣ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಚಿವ ಕೆ.ಗೋಪಾಲಯ್ಯ ಮಾತನಾಡಿ, ಹೆಚ್ಚುವರಿ ಆಮ್ಲಜನಕಕ್ಕೆ ಪ್ರಸ್ತಾವನೆ ಕಳುಹಿಸಲಾಗಿದ್ದು, ಜಿಲ್ಲೆಯಲ್ಲಿ ಪ್ರತಿ ತಾಲ್ಲೂಕುಗಳಲ್ಲಿ ಕೋವಿಡ್ ಕೇರ್ ಸೆಂಟರ್ ತೆರೆಯಲಾಗಿದೆ ಎಂದರು .

ವಿಧಾನ ಪರಿಷತ್ ಸದಸ್ಯ ಎಂ.ಎ.ಗೋಪಾಲಸ್ವಾಮಿ ಮಾತನಾಡಿ, ಕೋವಿಡ್ ತಡೆಗಟ್ಟುವುದರ ಜೊತೆಗೆ ಕಪ್ಪು ಶಿಲೀಂಧ್ರ ಸೋಂಕು ಬಗ್ಗೆ ಹೆಚ್ಚಿನ ಗಮನಹರಿಸಬೇಕು ಎಂದು ತಿಳಿಸಿದರು.

ಶಾಸಕ ಪ್ರೀತಂ ಜೆ ಗೌಡ ಮಾತನಾಡಿ, ಜಿಲ್ಲೆಯಲ್ಲಿ ಲಭ್ಯವಿರುವ ಆಮ್ಲಜನಕ ಬಳಸಿಕೊಂಡು ಅಧಿಕಾರಿಗಳು ಕೋವಿಡ್ ನಿರ್ವಹಣೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವುದರ ಜೊತೆಗೆ ಗ್ರಾಮ ಮಟ್ಟದಲ್ಲೂ ತೀವ್ರ ನಿಗಾವಹಿಸುತ್ತಿದ್ದಾರೆ ಎಂದು ಹೇಳಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಆರ್. ಗಿರೀಶ್, ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ್‌ ಗೌಡ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಎ.ಪರಮೇಶ್, ಉಪವಿಭಾಗಾಧಿಕಾರಿ ಬಿ.ಎ. ಜಗದೀಶ್ , ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಕೃಷ್ಣ ಮೂರ್ತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿ ಕಾರಿ ಡಾ.ಸತೀಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT