ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಸಾವು: ದ್ವೇಷ ರಾಜಕಾರಣ ಸರಿಯಲ್ಲ- ಶಾಸಕ ಎಚ್‌.ಡಿ.ರೇವಣ್ಣ

Last Updated 28 ಮೇ 2021, 2:54 IST
ಅಕ್ಷರ ಗಾತ್ರ

ಸಕಲೇಶಪುರ: ‘ನಮ್ಮ ಜಿಲ್ಲೆಯ ಜನರ ಜೀವ ಉಳಿಸಿಕೊಡಿ ಎಂದು ಮುಖ್ಯಮಂತ್ರಿಗಳ ಮನೆ ಮುಂದೆ ಧರಣಿ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಶಾಸಕ ಎಚ್‌.ಡಿ.ರೇವಣ್ಣ ಹೇಳಿದರು.

ಇಲ್ಲಿಯ ಸರ್ಕಾರಿ ಕ್ರಾಫರ್ಡ್‌ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರು, ಶುಶ್ರೂ‌ಷಕರು ಹಾಗೂ ಇತರ ಸಮಸ್ಯೆಗಳನ್ನು ಆಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘6 ಮಂದಿ ಜೆಡಿಎಸ್‌ ಶಾಸಕರು ಇರುವುದರಿಂದ ಹಾಸನ ಜಿಲ್ಲೆಯನ್ನು ಸಂಪೂರ್ಣ ಕಡೆಗಣಿಸಲಾಗುತ್ತಿದೆ. ಚುನಾವಣೆ ಬಂದಾಗ ಹೇಗಾದರೂ ರಾಜಕೀಯ ಮಾಡಿಕೊಳ್ಳಲಿ, ಕೊರೊನಾದಂತ ಜೀವ ಹಂತಕ ಕಾಯಿಲೆ ವಿಷಯದಲ್ಲಿಯೂ ಸಹ ಬಿಜೆಪಿ ಸರ್ಕಾರ ದ್ವೇಷದ ರಾಜಕೀಯ ಮಾಡುವುದು ಸರಿಯಲ್ಲ’ ಎಂದರು.

‘ಸಕಲೇಶಪುರದ ಕ್ರಾಫರ್ಡ್‌ ಸರ್ಕಾರಿ ಆಸ್ಪತ್ರೆ ಸೇರಿದಂತೆ ತಾಲ್ಲೂಕಿನ ಆರೋಗ್ಯ ಕೇಂದ್ರಗಳಿಗೆ 25ಕ್ಕೂ ಹೆಚ್ಚು ಮಂದಿ ವೈದ್ಯರು ಬೇಕು. ಜಿಲ್ಲೆಯಲ್ಲಿ ಸುಮಾರು 100ಕ್ಕೂ ಹೆಚ್ಚು ಮಂದಿ ವೈದ್ಯರ ಹುದ್ದೆಗಳು ಖಾಲಿ ಇವೆ. ಇದು ಇಂದಿನ ಸಮಸ್ಯೆ ಅಲ್ಲ ಹಲವು ವರ್ಷಗಳಿಂದ ಇರುವ ಈ ಸಮಸ್ಯೆಗೆ ಸರ್ಕಾರ ಸ್ವಲ್ಪವೂ ಸ್ಪಂದಿಸುತ್ತಿಲ್ಲ’ ಎಂದು ಆರೋಪಿಸಿದರು.

‘ಜಿಲ್ಲೆಯಲ್ಲಿ 100 ಮಂದಿ ಕೋವಿಡ್‌ ಪರೀಕ್ಷೆ ಮಾಡಿಸಿಕೊಂಡರೆ 45 ಜನರಿಗೆ ಸೋಂಕು ದೃಢಪಡುತ್ತಿದೆ. ಇದುವರೆಗೆ 956 ಮ‌ಂದಿ ಸಾವನ್ನಪ್ಪಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಸಮುದಾಯಕ್ಕೆ ಸೋಂಕು ಹರಡಿ ಜನರು ನಿತ್ಯ ಸಾವು ಎಣಿಕೆ ಮಾಡುತ್ತಿದ್ದಾರೆ. ಆದರೂ ಕೂಡ ರಾಜ್ಯ ಸರ್ಕಾರ ಜಿಲ್ಲೆಯ ಜನರ ಮೇಲೆ ಕರುಣೆ ಇಲ್ಲದಂತೆ ಆಡಳಿತ ನಡೆಸುತ್ತಿದೆ’ ಎಂದು ಆರೋಪಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಯವರು ಲಾಕ್‌ಡೌನ್ ನಿಯಮದಲ್ಲಿ ಬದಲಾವಣೆ ತಂದರೆ ಮುಖ್ಯಮಂತ್ರಿಗಳು ಅರ್ಧ ಗಂಟೆಯಲ್ಲಿ ರದ್ದುಗೊಳಿಸುತ್ತಾರೆ. ಮತ್ತೊಂದೆಡೆ ಜಿಲ್ಲಾಧಿಕಾರಿಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ ಎನ್ನುತ್ತಾರೆ. ಹಾಸನದಲ್ಲಿ ಜಿಲ್ಲಾಧಿಕಾರಿ ಸರ್ಕಾರದ ಕೈಗೊಂಬೆಯಾಗಿ ಕೆಲಸ ಮಾಡಬೇಕಾಗಿದೆ ಎಂದರು.

‘ನಮ್ಮನ್ನು ರಾಜಕೀಯವಾಗಿ ಮುಗಿಸುವ ಶಕ್ತಿ ಯಡಿಯೂರ‍ಪ್ಪಗೆ ಇಲ್ಲ, ಅದೆಲ್ಲಾ ದೈವ ಇಚ್ಛೆ’ ಎಂದು ಹೇಳಿದರು.

ಶಾಸಕ ಎಚ್.ಕೆ. ಕುಮಾರಸ್ವಾಮಿ, ಪುರಸಭಾ ಅಧ್ಯಕ್ಷ ಕಾಡಪ್ಪ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಬೆಕ್ಕನಹಳ್ಳಿ ನಾಗರಾಜ್‌, ಯುವ ಜನತಾದಳ ಅಧ್ಯಕ್ಷ ಸ.ಬ. ಭಾಸ್ಕರ್‌, ಪುರಸಭಾ ಸದಸ್ಯ ಪ್ರಜ್ವಲ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT