ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಲೂರು: ತಾಲ್ಲೂಕಿನಲ್ಲಿ ಕ್ಷೀಣಿಸುತ್ತಿರುವ ರಾಗಿ ಕೃಷಿ

ರೈತಾಪಿ ಜನರಿಗೆ ಹೆಚ್ಚಿನ ಶ್ರಮ: ಕೂಲಿಕಾರ್ಮಿಕರ ಅಭಾವ
Last Updated 25 ಫೆಬ್ರುವರಿ 2023, 5:13 IST
ಅಕ್ಷರ ಗಾತ್ರ

ಆಲೂರು: ತಾಲ್ಲೂಕಿನಲ್ಲಿ ರಾಗಿ ಬೆಳೆಯುವುದು ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿದೆ. ಐದು ದಶಕದ ಹಿಂದೆ ಆಲೂಗಡ್ಡೆ ಬೆಳೆಯಲು ಪ್ರಾರಂಭಿಸಿದ ನಂತರ ರಾಗಿ ಬೆಳೆಯುವುದು ಕಡಿಮೆಯಾಯಿತು. ಆದರೂ ಆಲೂಗಡ್ಡೆ ಬೆಳೆ ಕಟಾವು ಮಾಡಿದ ನಂತರ ಬೇಸಿಗೆ ರಾಗಿ ಬೆಳೆಯುತ್ತಿದ್ದರು.

ರಾಗಿ ಬೆಳೆಯಲು ರೈತರು ಹೆಚ್ಚು ಶ್ರಮ ವಹಿಸಬೇಕಾಗಿದೆ. ಕೊಟ್ಟಿಗೆ ಗೊಬ್ಬರ ಬಳಸಿ, ನಂತರ ಹೊಲವನ್ನು ಹದವಾಗಿ ಕಳೆ ನಾಶವಾಗುವಂತೆ ಉಳುಮೆ ಮಾಡಿ, ಬೆರಗು ನೋಡಿ ಬಿತ್ತನೆ ಮಾಡಿದರೆ ಮಾತ್ರ ಚೆನ್ನಾಗಿ ಬರುತ್ತದೆ. ಕಾಲಕ್ಕೆ ಸರಿಯಾಗಿ ಹರತೆ, ಕಳೆ ತೆಗೆಯುವುದನ್ನು ಮಾಡಿ, ಸಕಾಲಕ್ಕೆ ಮಳೆಯಾದರೆ ಹುಲುಸಾದ ಬೆಳೆ ಬರುತ್ತದೆ.

ರಾಗಿ ಬೆಳೆ ಕೊಯ್ಲು ಮಾಡಿ ಕಂತೆ ಕಟ್ಟಿ ಹೊಲದಲ್ಲಿ ಗುಪ್ಪು ಮಾಡಲಾಗುತ್ತದೆ. ಸಂಪೂರ್ಣ ಸಗಣಿಯಿಂದ ಸಾರಿಸಿದ ಕಣದಲ್ಲಿ ಅಟ್ಟು ಹಾಕಿ ಗುಡ್ಡೆ ಹಾಕಬೇಕು. ನೆಲದಲ್ಲಿ ಹಾಕಿದರೆ ಗೆದ್ದಲು ಹಿಡಿದು ನಾಶವಾಗುತ್ತದೆ.

ನಂತರ ಒಕ್ಕಲಾಟ ಮಾಡಬೇಕಾದರೆ ಊಹಿಸಲಾಗದಂತಹ ಕಷ್ಟ ಎದುರಾಗುತ್ತದೆ. ಸಗಣಿಯಿಂದ ಹದಭರಿತ ಕಣ ಮಾಡಬೇಕು. ಮಂಜಿನ ಹನಿ ಇರುವಾಗಲೇ ಬೆಳಿಗ್ಗೆ ಕಣದಲ್ಲಿ ತೆನೆ ಹುಲ್ಲು ಹರಡಬೇಕು. ರೌಂಡ್ ಕಲ್ಲಿನಿಂದ ಅರೆದು ಕೋಲಿನಿಂದ ಬಡಿದು ಹುಲ್ಲು ಬೇರ್ಪಡಿಸಬೇಕು.

ಮತ್ತೆ ರಾಗಿಯನ್ನು ಗುಡ್ಡೆ ಮಾಡಿ ಕೋಲಿನಿಂದ ಬಡಿದು ಹಸನು ಮಾಡಬೇಕು. ತೂರಿದ ನಂತರ ಉತ್ತಮ ರಾಗಿ ಪಡೆಯಬಹುದು. ಇಷ್ಟು ಕೆಲಸ ಮಾಡಬೇಕಾದರೆ ರೈತ ಹೈರಾಣಾಗುತ್ತಿದ್ದಾರೆ.

ಕೃಷಿಯನ್ನು ಆಧರಿಸಿದ ಕುಟುಂಬ ಮಾತ್ರ ಈ ಕೆಲಸ ಮಾಡಿ ಉತ್ಪಾದನೆಯಲ್ಲಿ ಸ್ವಲ್ಪ ಲಾಭ ಪಡೆಯಬಹುದು. ಪ್ರತಿಯೊಂದಕ್ಕೂ ಕಾರ್ಮಿಕರನ್ನು ಅವಲಂಬಿಸಿದರೆ ರಾಗಿ ಬೆಳೆಯುವುದು ಕಗ್ಗಂಟಾಗುತ್ತದೆ.

ಇತ್ತೀಚೆಗೆ ಕೃಷಿ ಕಾರ್ಮಿಕರ ಅಭಾವದಿಂದ ರಾಗಿ, ಭತ್ತ ಬಿತ್ತನೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗಿ, ಅಡಿಕೆ ಬೆಳೆಯಲ್ಲಿ ರೈತರು ಆಸಕ್ತಿ ತೋರುತ್ತಿದ್ದಾರೆ. ಆದರೂ ಕೆಲ ಕೃಷಿ ಕುಟುಂಬಗಳು ತಮ್ಮ ಮನೆ ಬಳಕೆಗೆ ರಾಗಿಯನ್ನು ಬೆಳೆದುಕೊಳ್ಳುತ್ತಿದ್ದಾರೆ. ಕೆಲವರು ಜಾನುವಾರುಗಳಿಗೆ ಆಹಾರಕ್ಕೆಂದು ಬೆಳೆಯುತ್ತಿದ್ದಾರೆ.

ಮಾರುಕಟ್ಟೆಯಲ್ಲಿ ಒಂದು ಕ್ವಿಂಟಲ್ ರಾಗಿಗೆ ಸದ್ಯ ₹ 3,300 ದರ ಇದೆ. ಭತ್ತಕ್ಕಿಂತ ಹೆಚ್ಚು ಬೆಲೆ ಇದೆ. ಆದರೆ ರಾಗಿ ಬೆಳೆಯುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಆಲೂರು ತಾಲ್ಲೂಕು ಐದು ದಶಕಗಳ ಹಿಂದೆ ಸಂಪದ್ಭರಿತ ಭತ್ತ ಮತ್ತು ರಾಗಿ ಕಣಜವಾಗಿತ್ತು. ಈಗ ಕಣಜ ಸೋರಿ ಹೋಗಿ ಜಗಿಯುವ ಅಡಿಕೆ ಕೇಂದ್ರವಾಗುತ್ತಿದೆ ಎನ್ನುತ್ತಾರೆ ರೈತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT