ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ: ಹಚ್ಚ ಹಸಿರಿನ ಮರಗಳಿಗೆ ಕೊಡಲಿ ಪೆಟ್ಟು

ಬಡವರ ಊಟಿಯಲ್ಲಿ ಹೆಚ್ಚುತ್ತಿದೆ ಬಿಸಿಲು: ಕ್ಷೀಣಿಸುತ್ತಿದೆ ಮರ ಸಂಪತ್ತು
Last Updated 12 ಫೆಬ್ರುವರಿ 2023, 5:51 IST
ಅಕ್ಷರ ಗಾತ್ರ

ಹಾಸನ: ಬಡವರ ಊಟಿ ಎಂದೇ ಹೆಸರಾಗಿರುವ ಹಾಗೂ ಸದಾ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದ ನಗರದಲ್ಲಿ ಇದೀಗ ಮರಗಳು ಕಡಿಮೆಯಾಗುತ್ತಿವೆ. ಇರುವ ಮರಗಳಿಗೆ ಕೊಡಲು ಪೆಟ್ಟು ಬೀಳುತ್ತಿದೆ.

ನಗರದ ಮುಖ್ಯ ರಸ್ತೆ ಸೇರಿದಂತೆ ಎಲ್ಲ ಬಡಾವಣೆಯ ರಸ್ತೆ ಬದಿಯಲ್ಲಿ ಸಮೃದ್ಧವಾಗಿ ಬೆಳೆದಿರುವ ಕಾಡು ಬಾದಾಮಿ, ಕಾಡು ಗಸಗಸೆ, ಗುಲ್‌ಮೊಹರ್‌, ಹೊಂಗೆ, ನೇರಳೆ, ಬೇವು ಸೇರಿದಂತೆ ಹಲವಾರು ಮರಗಳು ಗಾಳಿ, ನೆರಳನ್ನು ನೀಡುವ ಹಾಗೂ ಹಾಸನ ನಗರವನ್ನು ಹಸಿರಾಗಿಸುತ್ತಿವೆ. ಜೊತೆಗೆ ರಸ್ತೆಯಲ್ಲಿ ಸಂಚರಿಸುವ ಸಾವಿರಾರು ವಾಹನ ಸವಾರರಿಗೆ ತಂಪು ಅನುಭವ ನೀಡುತ್ತಿವೆ.

ಆದರೆ, ಇತ್ತೀಚಿನ ದಿನಗಳಲ್ಲಿ ನಾನಾ ಕಾರಣಗಳಿಂದ ವರ್ಷಕ್ಕೆ ನೂರಾರು ಮರಗಳು ಮಾಯವಾಗುತ್ತಿವೆ. ರಸ್ತೆ ಅಭಿವೃದ್ಧಿ ಹೆಸರಲ್ಲಿ ಮರಗಳನ್ನು ಕತ್ತರಿಸಲೆಂದೇ ಟೆಂಡರ್ ನೀಡುವ ಮೂಲಕ, ಹಾಸನ ನಗರಸಭೆ ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಿರುವುದು ನಾಗರಿಕರಲ್ಲಿ ಆತಂಕ ಹೆಚ್ಚಿಸಿದೆ.

ಸದಾ ತಂಪು ವಾತಾವರಣದಿಂದ ಕೂಡಿರುವ ನಗರದ ಹಾಸ‌ನದಲ್ಲಿ ಒಂದು ವರ್ಷಕ್ಕೆ ರಸ್ತೆ ವಿಸ್ತರಣೆ ನೆಪದಲ್ಲಿ 100 ರಿಂದ 200 ಮರಗಳನ್ನು ಕಳೆದುಕೊಳ್ಳುತ್ತಿದೆ ಎಂದು ಅಂದಾಜಿಸಲಾಗಿದೆ.

ಮರಗಳನ್ನು ಕಡಿಯುವುದರಿಂದ ವಲಸೆ ಪಕ್ಷಿಗಳ ಸಂಖ್ಯೆಯೂ ಕ್ಷೀಣಿಸುತ್ತಿದೆ ಎಂಬ ಆತಂಕವೂ ಕಾಡುತ್ತಿದೆ. ಇದಲ್ಲದೇ ವಾಣಿಜ್ಯ ಕಟ್ಟಡ, ಮನೆ ನಿರ್ಮಾಣ, ಫ‌ುಟ್‌ಪಾತ್‌ ನಿರ್ಮಾಣ ಹೆಸರಿನಲ್ಲಿ ನೂರಾರು ಮರಗಳನ್ನು ಕಡಿಯಲಾಗುತ್ತಿದೆ.

ನಗರದ ಬಹುಪಾಲು ಬಡಾವಣೆಗಳಲ್ಲಿ ಮನೆ, ಅಂಗಡಿ ಮತ್ತು ಬೃಹತ್ ವಾಣಿಜ್ಯ ಮಳಿಗೆಗಳ ಬಾಗಿಲು ಮುಂಭಾಗ ಮರಗಳು ಇದ್ದರೆ, ಗ್ರಾಹಕರಿಗೆ ಸುಲಭವಾಗಿ ಕಾಣಿಸುವುದಿಲ್ಲ ಎಂಬ ಕಾರಣದಿಂದಾಗಿ ಮರಕ್ಕೆ ಮೊಳೆ ಹೊಡೆಯುವುದು, ಆ್ಯಸಿಡ್‌ ಹಾಕುವುದು ಹಾಗೂ ಮರದ ಬುಡದಲ್ಲಿ ಸಣ್ಣ ಗುಂಡಿ ತೆಗೆದು ಆ್ಯಸಿಡ್‌ ಸುರಿಯುವುದು ಅವ್ಯಾಹತವಾಗಿದೆ.

ಇನ್ನೂ ಕೆಲ ಖಾಸಗಿ ಮತ್ತು ಸರ್ಕಾರಿ ಸಂಸ್ಥೆಗಳೂ ತಮ್ಮ ಸಂಸ್ಥೆಯ ಬಗ್ಗೆ ಜಾಹಿರಾತು ಪ್ರದರ್ಶನ ಮಾಡಲು ಫಲಕಗಳನ್ನು ಹಾಕಲು ಬೃಹತ್ ಮರಗಳಿಗೆ ಮೊಳೆ ಹೊಡೆಯುವ ಕಾಯಕವನ್ನು ಬಿಟ್ಟಿಲ್ಲ ಇದು ಸಹ ಮರಗಳ ಸಾವಿಗೆ ಕಾರಣವಾಗಿದೆ ಎಂದು ಪರಿಸರ ಪ್ರೇಮಿಗಳು ದೂರುತ್ತಿದ್ದಾರೆ.

ನಗರಸಭೆ ನಿರ್ಲಕ್ಷ್ಯ: ನಗರದ ಎಲ್ಲ ಬಡಾವಣೆ ಹಾಗೂ ಮುಖ್ಯ ರಸ್ತೆಗಳ ಬದಿಯಲ್ಲಿರುವ ಮರಗಳ ಬುಡದಲ್ಲಿ ಒಂದಿಂಚೂ ಜಾಗವನ್ನು ಬಿಡದೇ ಡಾಂಬರು ಹಾಕುತ್ತಿರುವುದು ಒಂದೆಡೆಯಾದರೆ, ಫ‌ುಟ್‌ಪಾತ್‌ ನಿರ್ಮಾಣ ಮಾಡಿ, ಮರದ ಬುಡ ಸೇರಿದಂತೆ ಸಿಮೆಂಟ್ ಗಾರೆ ಹಾಕಿ ಮುಚ್ಚಲಾಗಿದೆ. ಇದರಿಂದ ಸುರಿದ ವೇಳೆ ನೀರು ಇಂಗದೇ ಹರಿದು ಹೋಗುತ್ತಿದ್ದು, ಅತಿ ಹೆಚ್ಚು ನೀರು ಉಪಯೋಗಿಸುವ ದೊಡ್ಡ ಮರಗಳು ನೀರಿಲ್ಲದೇ ಒಣಗುತ್ತಿವೆ.

ಇನ್ನೊಂದೆಡೆ ಒಳಚರಂಡಿ ಕಾಮಗಾರಿ ವೇಳೆ ಮರದ ಬೇರು ತೊಡಕಾಗಲಿವೆ ಎಂಬ ಕಾರಣಕ್ಕೂ ಮರಗಳನ್ನು ಕಡಿದ ಉದಾಹರಣೆಗಳು ಸಾಕಷ್ಟಿವೆ. ಇಷ್ಟಾದರೂ ನಗರಸಭೆ ಮರಗಳನ್ನು ಉಳಿಸುವ ಮತ್ತು ಜನರಲ್ಲಿ ಜಾಗೃತಿ ಮೂಡಿಸುವ ಒಂದಿಷ್ಟೂ ಕೆಲಸ ಮಾಡದಿರುವುದು ಪರಿಸರವಾದಿಗಳ ಆಕ್ರೋಶಕ್ಕೆ ಗುರಿಯಾಗಿದೆ.

ಕೇವಲ ಪರಿಸರ ದಿನ ನೆಪವಾಗಿಸಿ, ಜನಪ್ರತಿನಿಧಿಗಳು ಮತ್ತು ಹಿರಿಯ ಅಧಿಕಾರಿಗಳು ಗಿಡ ನೆಟ್ಟು ಫೋಟೊ ತೆಗೆಸಿಕೊಳ್ಳುವುದನ್ನು ಬಿಟ್ಟು ಇರುವಂತಹ ಮರಗಳನ್ನು ಉಳಿಸಿ, ಪೋಷಿಸುವ ಕೆಲಸ ಮಾಡಲಿ ಎಂಬುದು ನಾಗರಿಕರ ಒತ್ತಾಯ.

ಹಚ್ಚ ಹಸಿರಿನ ಗಂಧದ ಕೋಠಿ ನಾಶ

ನಗರದ ಹೃದಯ ಭಾಗದಲ್ಲಿ ಹಚ್ಚ ಹಸಿರಿನಿಂದ ಕಂಗೊಳಿಸುವ ಅರಣ್ಯದಂತಿದ್ದ ಗಂಧದಕೋಠಿ ಆವರಣದ ಒಂದು ಭಾಗದಲ್ಲಿ ಸರ್ಕಾರಿ ಮಹಿಳಾ ಕಾಲೇಜು, ಕೆಲ ವರ್ಷಗಳ ಹಿಂದೆ ಕಟ್ಟಡ ತಲೆ ಎತ್ತಿದೆ. ಇದೀಗ ಉಳಿದ ಭೂಮಿಯಲ್ಲಿ ನೂರಾರು ವರ್ಷದ ಮರಗಳನ್ನು ಧರೆಗುರುಳಿಸಿ, ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ‌ ಮಾಡಲಾಗಿದೆ.

ಇನ್ನೂ ಉಳಿದ ಒಂದಿಷ್ಟು ಜಾಗದಲ್ಲಿ ಆಟದ ಮೈದಾನ, ಕೃತಕ ಹಸಿರು, ಸಣ್ಣಪುಟ್ಟ ಗಿಡಗಳನ್ನು ನೆಡಲಾಗಿದೆ. ಇದರಿಂದ ಸಾಂಪ್ರದಾಯಿಕ ಕಾಡು ಜಾತಿಯ ಹಚ್ಚ ಹಸಿರಿನ ಸೌಂದರ್ಯ ಕಾಣಲು ಅದೆಷ್ಟು ದಿನ ಬೇಕೋ ತಿಳಿಯುತ್ತಿಲ್ಲ. ಅಭಿವೃದ್ಧಿ ಹೆಸರಲ್ಲಿ ಮಾತ್ರ ಹಲವು ಹಳೆಯ ಮರಗಳಿಕೆ ಕೊಡಲಿ ಪೆಟ್ಟು ಬೀಳುತ್ತಿದ್ದು, ಮುಂದಿನ ಜನಾಂಗಕ್ಕೆ ಬರಡು ನೆಲದ ಕೊಡುಗೆ ನೀಡುವತ್ತ ಅಭಿವೃದ್ಧಿ ಸಾಗಿದೆ ಎನ್ನುವುದು ಪರಿಸರ ಪ್ರಿಯರ ಆಕ್ರೋಶ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT