ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಣದ ವಿಚಾರ ಮಾತನಾಡಿದ್ದರೆ ರಾಜಕೀಯ ಬಿಡುವೆ: ದೇವರಾಜೇಗೌಡಗೆ ಗೋಪಾಲಸ್ವಾಮಿ ಸವಾಲು

Published 20 ಮೇ 2024, 23:30 IST
Last Updated 20 ಮೇ 2024, 23:30 IST
ಅಕ್ಷರ ಗಾತ್ರ

ಹಾಸನ: ‘ಬಿಜೆಪಿ ಮುಖಂಡ, ವಕೀಲ ಜಿ.ದೇವರಾಜೇಗೌಡರ ಜೊತೆಗೆ ಹಣದ ವಿಚಾರ ಮಾತನಾಡಿದ್ದರೆ ರಾಜಕೀಯ ಬಿಡುವೆ’ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಎ. ಗೋಪಾಲಸ್ವಾಮಿ ಸವಾಲು ಹಾಕಿದರು.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ದೇವರಾಜೇಗೌಡರೊಂದಿಗೆ ರಾಜಕೀಯ ಮಾತನಾಡಿದ್ದೇನೆ. ಆದರೆ, ₹ 100 ಕೋಟಿ ಆಫರ್ ಹಾಗೂ ₹ 5 ಕೋಟಿ ಮುಂಗಡ ಕೊಡಲು ಬೌರಿಂಗ್ ಕ್ಲಬ್‌ನ 110ನೇ ಕೊಠಡಿಯಲ್ಲಿ ಭೇಟಿ ಮಾಡಿದ್ದೆ ಎಂಬುದು ಶುದ್ಧ ಸುಳ್ಳು. ಅಲ್ಲಿ 110ನೇ ಕೊಠಡಿಯೇ ಇಲ್ಲ’ ಎಂದು ಪ್ರತಿಪಾದಿಸಿದರು.

‘₹ 100 ಕೋಟಿ ಅಥವಾ ₹ 5 ಕೋಟಿ ತುಂಬಲು ಎಷ್ಟು ಚೀಲ ಬೇಕೆಂಬುದನ್ನು ಯಾರಾದರೂ ಅಂದಾಜಿಸಬಹುದು. ಅವರು ನಕಲಿ ವಕೀಲರೋ‌ ಅಥವಾ ಅಸಲಿಯೋ ಗೊತ್ತಿಲ್ಲ. ಯಾವಾಗಲೂ ಕೋಟ್‌ ಹಾಕಿಕೊಂಡು ಪತ್ರಿಕಾಗೋಷ್ಠಿ ಮಾಡುತ್ತಾರೆ. ರಾಜ್ಯಮಟ್ಟದ ನಾಯಕರ ಕುರಿತು ಅಪಪ್ರಚಾರ ಮಾಡುತ್ತಿದ್ದಾರೆ. ಅವರು ಆಚೆಗೆ ಬರಲಿ, ಬಹಿರಂಗ ಚರ್ಚೆಗೆ ಸಿದ್ಧನಿದ್ದೇನೆ’ ಎಂದು ಸವಾಲು ಹಾಕಿದರು.

‘₹ 5 ಕೋಟಿಯೊಂದಿಗೆ ಸಂಧಾನಕ್ಕೆ ಬಂದಿದ್ದರೆ, ಕೇಂದ್ರ ಸರ್ಕಾರಕ್ಕೆ ಹೇಳಿ ನನ್ನನ್ನು ಬಂಧಿಸಬಹುದಾಗಿತ್ತು. ಇ.ಡಿ ಅವರ ಬಳಿಯೇ ಇದೆ. ಎಚ್‌.ಡಿ.ದೇವೇಗೌಡರಿಂದ ಪತ್ರ ಬರೆಸಿ ಹಿಡಿಸಬಹುದಿತ್ತಲ್ಲವೇ’ ಎಂದರು.

‘ಸಚಿವರಾದ ಎನ್‌.ಚಲುವರಾಯಸ್ವಾಮಿ, ಕೃಷ್ಣ ಬೈರೇಗೌಡರ ವಿರುದ್ಧ ಆರೋಪ ಮಾಡಿರುವ ದೇವರಾಜೇಗೌಡರಿಗೆ, ಅವರು ಚಪ್ಪಲಿ ಬಿಡುವ ಜಾಗದಲ್ಲಿ ನಿಲ್ಲುವ ಅರ್ಹತೆಯೂ ಇಲ್ಲ. ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಸುಳ್ಳು ಅಫಿಡವಿಟ್‌ ಪ್ರಕರಣದಲ್ಲಿ, ಐದು ವರ್ಷದ ಹಿಂದೆ ನನ್ನನ್ನು ಭೇಟಿ ಮಾಡಿದ್ದ ದೇವರಾಜೇಗೌಡರಿಗೆ ಸಲಹೆಗಳನ್ನು ಕೊಟ್ಟಿದ್ದೆ. ಅವರು ಕಾಂಗ್ರೆಸ್‌ನಲ್ಲಿದ್ದಾಗ, ಕೆಡಿಪಿ ಸದಸ್ಯರನ್ನಾಗಿ ಮಾಡಿದ್ದೆ. ಕಿಸಾನ್ ಘಟಕದ ಅಧ್ಯಕ್ಷರನ್ನಾಗಿ ಮಾಡಿದ್ದೆವು’ ಎಂದರು.

‘ಎಚ್.ಡಿ ಕುಮಾರಸ್ವಾಮಿ, ದೇವರಾಜೇಗೌಡರ ಜೊತೆಗಿದ್ದು, ಇಬ್ಬರೂ ಪರಸ್ಪರರನ್ನು ಬಿಟ್ಟುಕೊಡುತ್ತಿಲ್ಲ, ಕುಮಾರಸ್ವಾಮಿಯವರು, ಎಚ್‌.ಡಿ.ರೇವಣ್ಣ ಹೆಗಲ ಮೇಲೆ ಗನ್ ಇಟ್ಟು, ಡಿ.ಕೆ. ಶಿವಕುಮಾರ್ ಅವರನ್ನು ಮುಗಿಸಲು ಹೊರಟಿದ್ದಾರೆ ಎಂಬ ಅನುಮಾನ ಮೂಡುತ್ತಿದೆ’ ಎಂದರು.

ಎಸ್ಪಿಗೆ ಮನವಿ: ‘ಪೊಲೀಸ್ ಕಸ್ಟಡಿಯಲ್ಲಿದ್ದಾಗ, ನ್ಯಾಯಾಲಯದ ಅನುಮತಿ ಇಲ್ಲದೇ, ದೇವರಾಜೇಗೌಡ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಬಗ್ಗೆ ಸೂಕ್ತ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿ ಕಾಂಗ್ರೆಸ್ ಜಿಲ್ಲಾ ಘಟಕದ ಪ್ರಮುಖರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT