ಗುರುವಾರ , ಜುಲೈ 29, 2021
21 °C
ಹಿಂಬಾಗಿಲ ಪ್ರವೇಶ ಎಂದು ಭಾವಿಸದೆ ಚುನಾವಣೆಯಲ್ಲಿ ಸ್ಪರ್ಧಿಸಲಿ

ದೇವೇಗೌಡರ ಒಪ್ಪಿಸಲು ಸಿದ್ಧ: ಶಿವಲಿಂಗೇಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರ ಸಲಹೆ ಮತ್ತು ಮಾರ್ಗದರ್ಶನ ದೇಶಕ್ಕೆ ಅಗತ್ಯವಿದೆ. ಹೇಗಾದರೂ ಮಾಡಿ ಅವರನ್ನು ಒಪ್ಪಿಸಿ ಸಂಸತ್‌ ಪ್ರವೇಶ ಮಾಡಿಸುತ್ತೇವೆ ಎಂದು ಶಾಸಕ ಶಿವಲಿಂಗೇಗೌಡ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಈಗ ಯಾವುದೂ ಉಪಚುನಾವಣೆ ಇಲ್ಲ. ಇದ್ದಿದ್ದರೆ ನಿಲ್ಲಿಸಿ ಗೆಲ್ಲಿಸಬಹುದಿತ್ತು. ಲಾಕ್‌ಡೌನ್‌ನಿಂದ ಜನರು ಪಡುತ್ತಿರುವ ಕಷ್ಟ ನೋಡಿದಾಗ ದೇವೇಗೌಡರಂತಹ ಅನುಭವಿ ರಾಜಕಾರಣಿ ದೇಶಕ್ಕೆ ಅವಶ್ಯಕತೆ ಇದೆ. ರಾಜ್ಯಸಭೆಗ ಹೋಗುವುದು ಹಿಂಬಾಗಿಲ ಪ್ರವೇಶ ಎಂದು ಭಾವಿಸದೆ, ಚುನಾವಣೆಯಲ್ಲಿ ಸ್ಪರ್ಧಿಸಬೇಕು. ಪಕ್ಷ ಬೇಧ ಮರೆತು ಗೆಲ್ಲಿಸುತ್ತಾರೆಂಬ ವಿಶ್ವಾಸ ಇದೆ. ಕಾಂಗ್ರೆಸ್‌ ಬಳಿ ಹೆಚ್ಚುವರಿ ಮತ ಇದೆ. ಅವರು ಸಹಕಾರ ನೀಡಿದರೆ, ಸಮಯ ಬಂದಾಗ ಅವರಿಗೆ ನೆರವಾಗುತ್ತೇವೆ ಎಂದು ಹೇಳಿದರು.

ಕೋವಿಡ್‌ 19 ಪ್ರಕರಣ ಹೆಚ್ಚುತ್ತಿರುವುದರಿಂದ ಇನ್ನೂ ಸ್ವಲ್ಪ ದಿನ ಲಾಕ್‌ಡೌನ್‌ ಮಾಡಬೇಕಿತ್ತು. ಹೊರ ರಾಜ್ಯದಿಂದ ಬಂದವರ ಆರೋಗ್ಯ ಪರೀಕ್ಷಿಸಿ ಬಿಡಬೇಕಾಗಿತ್ತು. ಆದರೆ, ಈಗ ಅಂತರ ಕಾಯ್ದುಕೊಳ್ಳುವುದು ಸೇರಿ ಎಲ್ಲ ಮರೆತು ಪರೀಕ್ಷೆ ಇಲ್ಲದೆ ಮನೆಗೆ ಕಳಿಸಿ ಹೋಂ ಕ್ವಾರಂಟೈನ್‌ನಲ್ಲಿ ಇರಿಸಲಾಗುತ್ತಿದೆ. ಇದು ಎಷ್ಟರ ಮಟ್ಟಿಗೆ ಸಾಧಕ ಆಗಬಹುದು ಗೊತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕೊರೊನಾ ಸೋಂಕಿತರ ಪ್ರಕರಣ ಹೆಚ್ಚುತ್ತಿರುವ ವೇಳೆ ಶಾಲೆಗಳನ್ನು ಆರಂಭಿಸಿದರೆ ಮಕ್ಕಳಿಗೆ ಸೋಂಕು ಹರಡುವ ಸಾಧ್ಯತೆ ಹೆಚ್ಚು. ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಇರುವುದಿಲ್ಲ. ಸರ್ಕಾರ ಇನ್ನೂ ಒಂದು ತಿಂಗಳು ಕಾಯಬೇಕು. ಆನ್‌ ಲೈನ್‌ ನಲ್ಲಿ ಓದಿಕೊಂಡು ಎಷ್ಟು ಜ್ಞಾನ ಬೆಳೆಸಿಕೋಳ್ಳಲು ಸಾಧ್ಯ ಗೊತ್ತಿಲ್ಲ. ಒಟ್ಟಿನಲ್ಲಿ ಜನ ಗೊಂದಲಕ್ಕೆ ಸಿಲುಕಿದ್ದಾರೆ ಎಂದು ಹೇಳಿದರು.

ಶಾಸಕ ಸಿ.ಎನ್‌. ಬಾಲಕೃಷ್ಣ ಮಾತನಾಡಿ, ಸೋಂಕಿತರಿಗೆ 7ನೇ ದಿನ ಪರೀಕ್ಷೆ ಮಾಡಿ ನೆಗೆಟಿವ್‌ ವರದಿ ಬಂದವರಿಗೆ ಹೋಂ ಕ್ವಾರಂಟೈನ್‌ಗೆ ಕಳಿಸಲು ಸರ್ಕಾರ ಆದೇಶ ಹೊರಡಿಸಿದೆ. ಮನೆಗೆ ಹೋದವರಿಗೆ ಮತ್ತೆ ಪಾಸಿಟಿವ್ ಬಂದ ಉದಾಹರಣೆಗಳು ಇವೆ. ಹಾಗಾಗಿ 7 ದಿನಕ್ಕೆ ಮನೆಗೆ ಕಳಿಸುವುದು ಸೂಕ್ತ ಅಲ್ಲ. ಅನ್ಯ ರಾಜ್ಯಗಳಿಂದ ಚನ್ನರಾಯಪಟ್ಟಣ ತಾಲ್ಲೂಕಿಗೆ 800 ಜನ ಬಂದಿದ್ದರು, ಸಾಂಸ್ಥಿಕ ಕ್ವಾರಂಟೈನ್ ಇರಿಸಲಾಗಿತ್ತು. 700 ಜನ ಮನೆಗೆ ಹೋಗಿದ್ದಾರೆ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು