ಶುಕ್ರವಾರ, ಡಿಸೆಂಬರ್ 3, 2021
26 °C

ಆರ್‌ಎಸ್ಎಸ್‌ ಬಗ್ಗೆ ಹಗುರವಾಗಿ ಮಾತನಾಡಬೇಡಿ: ಎಚ್‌ಡಿಕೆಗೆ ಶಾಸಕ ಪ್ರೀತಂ ಗೌಡ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ‘ನಾನು ಯಾವ ಸ್ಪೀಡನಲ್ಲೂ ಬಂದಿಲ್ಲ, ಮೂರೂವರೆ ವರ್ಷ ಜನರ ಸೇವೆ ಮಾಡಿಕೊಂಡು, ಚುನಾವಣೆಯಲ್ಲಿ ಜನರ ಆಶೀರ್ವಾದ ಪಡೆದು ಶಾಸಕನಾಗಿದ್ದೇನೆ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಹೇಳಿಕೆಗೆ ಶಾಸಕ ಪ್ರೀತಂ ಜೆ.ಗೌಡ ತಿರುಗೇಟು ನೀಡಿದರು.

ನಗರದಲ್ಲಿ ಬುಧವಾರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ‘ನಾನು ಗೆಲುವು ಪಡೆದಿರುವುದು ಒಂದೇ ಚುನಾವಣೆಯಲ್ಲಿ, ಆಕಸ್ಮಿಕವಾಗಿ ಮಂತ್ರಿಯೂ ಆಗಿಲ್ಲ, ಮುಖ್ಯಮಂತ್ರಿಯೂ ಆಗಿಲ್ಲ. ಯಾರು ಆಕಸ್ಮಿಕವಾಗಿ ಏನೇನು ಆಗಿದ್ದಾರೆ ಎಂಬುದನ್ನು ಇತಿಹಾಸ ಪುಟ ತೆರೆದು ನೋಡಿದರೇ ತಿಳಿಯುತ್ತದೆ’ ಎಂದು ಟಾಂಗ್ ನೀಡಿದರು.

‘ಕುಮಾರಣ್ಣ ನನ್ನ ಹಿತೈಷಿ, ಯಾವಾಗಲೂ ನನ್ನ ಒಳಿತನ್ನೇ ಬಯಸುತ್ತಾರೆ ಎಂದು ನಂಬಿದ್ದೇನೆ. ಪಕ್ಷ ಬೇರೆ ಇದ್ದರೂ ಪ್ರೀತಂಗೌಡ ಬಗ್ಗೆ ಅವರಿಗೆ ಕಾಳಜಿ ಹೆಚ್ಚಿದೆ. ಅವರ ಆಶೀರ್ವಾದವನ್ನು ಸಕಾರಾತ್ಮಕವಾಗಿ ಆಗಿ ತೆಗೆದುಕೊಂಡು ಹೋಗುವ ಕೆಲಸ ಮಾಡುತ್ತೇನೆ. ಯಾರು ಆಕಸ್ಮಿಕವಾಗಿ ಯಾರ ನಾಮಬಲದಲ್ಲಿ ಶಾಸಕರಾದರು, ಸಚಿವರಾದರು, ಯಾವ ಕಾರ್ಯತಂತ್ರ ಬಳಸಿ ಸಿ.ಎಂ ಆಗಿದ್ದರು ಎಂಬುದು ಇಡೀ ರಾಜ್ಯದ ಜನರಿಗೆ ತಿಳಿದಿರುವ ವಿಚಾರ’ ಎಂದರು.

‘ಆರ್‌ಎಸ್‌ಎಸ್‌ ಶಾಖೆ ಕಲಿಸಿಕೊಟ್ಟಿರೋದೆ ನೀಲಿ ಚಿತ್ರ ನೋಡೋದು’ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಯಾರೋ ಒಬ್ಬರು ಸಂಘದ ಬಗ್ಗೆ ಮಾತನಾಡಿದ ತಕ್ಷಣ ಅದರ ಶಕ್ತಿ ಕುಗ್ಗುವುದಿಲ್ಲ. ಮಾತನಾಡುವವರ ಬಾಯಿ ಚಪಲ ತೀರುತ್ತದೆಯೇ ಹೊರತು ಸಂಘಟನೆಗೆ ಯಾವ ಪರಿಣಾಮ ಬೀರುವುದಿಲ್ಲ. ಇಡೀ ಪ್ರಪಂಚದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘವು ತನ್ನ ಅಸ್ತಿತ್ವ ಇಟ್ಟುಕೊಂಡು ಮುನ್ನಡೆಯುತ್ತಿದೆ’ ಎಂದರು.

‘ಚುನಾವಣಾ ಮತಕ್ಕಾಗಿ, ರಾಜಕಾರಣಕ್ಕಾಗಿ ಏನು ಬೇಕಾದರೂ ಮಾತನಾಡಬಹುದು ಎಂದು ರಾಜಕೀಯ ಪಕ್ಷಗಳು ಅಂದುಕೊಂಡಿದ್ದರೆ ಅದು ದುರ್ದೈವ. ದೇಶದ ಸಂಸ್ಕೃತಿ ಪರಂಪರೆ ಉಳಿಸುವ ಸಂಘಟನೆ ಬಗ್ಗೆ ಹಗುರವಾಗಿ ಮಾತನಾಡಬಾರದು ಎಂದು ಹಿರಿಯರಾದ ಎಚ್.ಡಿ. ಕುಮಾರಸ್ವಾಮಿಗೆ ಮನವಿ ಮಾಡುತ್ತೇನೆ’ ಎಂದರು.

‘ಮಹರ್ಶಿ ವಾಲ್ಮೀಕಿ ರಾಮಾಯಣ ಮಹಾಕಾವ್ಯ ರಚಿಸಿದರು. ಪ್ರಪಂಚದ ಆದರ್ಶ ಪುರುಷ ಎಂದರೆ ಶ್ರೀರಾಮಚಂದ್ರ ಎಂದು ಜಗತ್ತೇ ನಂಬಿದೆ. ನಾವು ಆದರ್ಶ ಪುರುಷ ಶ್ರೀರಾಮಚಂದ್ರನ ಭಕ್ತರು. ಆದ್ದರಿಂದಲೇ ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣ ಮಾಡಲಾಗುತ್ತಿದೆ. ಅದರ ಮೌಲ್ಯವನ್ನು ಎತ್ತಿ ಹಿಡಿಯುವ ಕೆಲಸವನ್ನು ಎಲ್ಲರೂ ಮಾಡೋಣ’ ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು