ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೋಣಿಗಾಲ್‌: ಮತ್ತೆ ಭೂ ಕುಸಿತ ಭೀತಿ

ಹಾಸನ–ಮಾರನಹಳ್ಳಿ ಚತುಷ್ಪಥ ಕಾಮಗಾರಿ ವಿಳಂಬ: ಸಂಚಾರಕ್ಕೆ ತೊಂದರೆ
Last Updated 11 ಏಪ್ರಿಲ್ 2022, 5:42 IST
ಅಕ್ಷರ ಗಾತ್ರ

ಸಕಲೇಶಪುರ: ಹಾಸನ–ಬಿ.ಸಿ. ರೋಡ್ ನಡುವಿನ ಚತುಷ್ಪಥ ಕಾಮಗಾರಿ ವಿಳಂಬದಿಂದಾಗಿ ಈ ವರ್ಷದ ಮುಂಗಾರಿನಲ್ಲಿ ದೋಣಿಗಾಲ್‌ನಿಂದ ದೊಡ್ಡತಪ್ಪಲೆ ನಡುವೆ ಹೆದ್ದಾರಿ ಮತ್ತೆಕುಸಿಯುವ ಸಾಧ್ಯತೆ ಇದೆ.

ಜೂನ್‌ನಿಂದ ಮುಂಗಾರು ಶುರುವಾಗಲಿದ್ದು, ಶೇಕಡಾ 20 ರಷ್ಟು ತಡೆಗೋಡೆಗಳ ನಿರ್ಮಾಣ ಕಾಮಗಾರಿಯೇ ಪೂರ್ಣಗೊಂಡಿಲ್ಲ. ವಾರದ ಹಿಂದೆ ಸುರಿದ ಮಳೆಗೆ ಸುಮಾರು 150 ಅಡಿ ಆಳ ಹಾಗೂ ಸುಮಾರು 800 ಮೀಟರ್‌ಗೂ ಹೆಚ್ಚು ಉದ್ದ ಇರುವ ದೋಣಿಗಾಲ್‌ನ ಹೆದ್ದಾರಿಯಲ್ಲಿ ಸಣ್ಣ ಬಿರುಕು ಕಾಣಿಸಿಕೊಂಡಿದೆ.

ಮುಂಗಾರಿಗೂ ಮುನ್ನವೇ ತಡೆಗೋಡೆ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಿಲ್ಲ. ಜೋರು ಮಳೆಯಾದರೆ ಈ ಪ್ರದೇಶದಲ್ಲಿ ಭೂ ಕುಸಿತ ಉಂಟಾಗುವ ಸಾಧ್ಯತೆ ಹೆಚ್ಚಳವಾಗಿದೆ. ಕಳೆದ ವರ್ಷ ಇದೇ ಸ್ಥಳದಲ್ಲಿ ಭೂಕುಸಿತ ಉಂಟಾಗಿ ತಿಂಗಳು ವಾಹನ ಸಂಚಾರ ಬಂದ್‌ ಮಾಡಲಾಗಿತ್ತು.

2022ರ ಮಾರ್ಚ್‌ 31ರೊಳಗೆ ಹಾಸನ–ಮಾರನಹಳ್ಳಿ ನಡುವಿನ 45 ಕಿ.ಮೀ. ಚತುಷ್ಪಥ ಕಾಮಗಾರಿ ಪೂರ್ಣ ಗೊಳಿಸಿ ಸಂಚಾರಕ್ಕೆ ಮುಕ್ತಗೊಳಿಸಲು ಕಾಮಗಾರಿ ಗುತ್ತಿಗೆ ಪಡೆದಿರುವ ರಾಜ್‌ಕಮಲ್‌ ಬಿಲ್ಡರ್ಸ್‌ ಕಂಪನಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಂತಿಮ ಗಡುವು ನೀಡಿತ್ತು. ಮಾರ್ಚ್‌ 31 ಕಳೆದರೂ ಶೇ 40 ಕಾಮಗಾರಿ ಪೂರ್ಣಗೊಂಡಿಲ್ಲ. ಹಾಸನ–ಸಕಲೇಶಪುರ ನಡುವಿನ ಸಮತಟ್ಟು ಪ್ರದೇಶದಲ್ಲಿಯೇ ಇನ್ನೂ ಶೇ 40 ಕಾಮಗಾರಿ ಬಾಕಿ ಉಳಿದಿದೆ. ಯಗಚಿ ಹಾಗೂ ಹೇಮಾವತಿ ನದಿಗಳಿಗೆ ಸೇತುವೆ ಕಾಮಗಾರಿ ಆಗಿಲ್ಲ.

ಹಾಸನದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇತ್ತೀಚೆಗೆ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅನಿಲ್‌ ಕುಮಾರ್‌ ಕಾಮಗಾರಿ ವಿಳಂಬ ಕುರಿತು ಬೇಸರ ವ್ಯಕ್ತಪಡಿಸಿದ್ದರು. ಗುತ್ತಿಗೆದಾರರಿಗೆ ನೋಟಿಸ್‌ ಜಾರಿಗೊಳಿಸಿ ದಂಡ ವಿಧಿಸುವಂತೆ ಸೂಚನೆ ನೀಡಿದ್ದಾರೆ.

ದೋಣಿಗಾಲ್‌ನಿಂದ ಮಾರನಹಳ್ಳಿ ವರೆಗೆ ಸುಮಾರು 25ಕ್ಕೂ ಹೆಚ್ಚು ಕಡಿದಾದ ತಿರುವು, ನೂರಾರು ಅಡಿ ಆಳದ ಕಂದಕ, ಎತ್ತರದ ಗುಡ್ಡಗಳು ಇವೆ. 2017 ರಲ್ಲಿ ಹೆದ್ದಾರಿ ವಿಸ್ತರಣೆ ಮಾಡಿ ಗುಡ್ಡಗಳನ್ನು ಬಗೆದು, ತಡೆಗೋಡೆ ನಿರ್ಮಾಣ ಮಾಡದ ಕಾರಣ 2018 ರಿಂದ ಪ್ರತಿ ವರ್ಷದ ಮಳೆಗಾಲದಲ್ಲಿ ದೊಡ್ಡತಪ್ಪಲೆ, ದೋಣಿಗಾಲ್ ಕೆಸಗಾನಹಳ್ಳಿ, ಕಪ್ಪಳ್ಳಿ ಭಾಗದಲ್ಲಿ ಪದೇ ಪದೇ ಭೂ ಕುಸಿತ ಉಂಟಾಗಿ ಮೂರು ನಾಲ್ಕು ತಿಂಗಳು ಈ ಮಾರ್ಗದ ಸಂಚಾರ ಬಂದ್‌ ಮಾಡಬೇಕಾಗಿದೆ.

ಚತುಷ್ಪಥ ಕಾಮಗಾರಿ ವಿಳಂಬ ದಿಂದ ಸಾರ್ವಜನಿಕರು, ಪ್ರಯಾಣಿ ಕರು, ಸರಕು ಸಾಗಣೆ, ಹೆದ್ದಾರಿ
ಪಕ್ಕದ ಹೋಟೆಲ್‌, ಅಂಗಡಿಗಳ ಮಾಲೀಕರು ನಿರಂತರ ಸಮಸ್ಯೆ
ಅನುಭವಿಸಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT