ಶುಕ್ರವಾರ, 22 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮಕ್ಕೆ ಅವಕಾಶ ನೀಡದಿರಿ: ತಾಕೀತು

ಲೋಕಾಯುಕ್ತ ಎಸ್.ಪಿ. ಅವರಿಂದ ಅಹವಾಲು ಸ್ವೀಕಾರ
Published 9 ಆಗಸ್ಟ್ 2023, 10:49 IST
Last Updated 9 ಆಗಸ್ಟ್ 2023, 10:49 IST
ಅಕ್ಷರ ಗಾತ್ರ

ಹೊಳೆನರಸೀಪುರ: ಪಟ್ಟಣದ ಅರಕಲಗೂಡು ರಸ್ತೆಯಲ್ಲಿರುವ ಎ.ಆರ್. ಬಾರ್ ಅಕ್ರಮವಾಗಿ ನಡೆಯುತ್ತಿದೆ ಎಂದು ಸಾರ್ವಜನಿಕರೊಬ್ಬರು ದೂರು ನೀಡಿದ್ದು, ದೂರು ಸ್ವೀಕರಿಸಿದ ಲೋಕಾಯುಕ್ತರು ಸಭೆಯಲ್ಲಿ ಹಾಜರಿದ್ದ ಪುರಸಭೆ ಮುಖ್ಯಾಧಿಕಾರಿ ಮಹೇಂದ್ರ ಅವರನ್ನು ಈ ಬಗ್ಗೆ ಪ್ರಶ್ನಿಸಿದರು.

ಲೋಕಾಯುಕ್ತ ಎಸ್.ಪಿ. ಮಲ್ಲಿಕ್ ಹಾಗೂ ಇನ್‌ಸ್ಪೆಕ್ಟರ್‌ಗಳಾದ ಎಚ್.ಎನ್. ಬಾಲು ಹಾಗೂ ಶಿಲ್ಪಾ ಬುಧವಾರ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಸಾರ್ವಜನಿಕರ ಅವಹಾಲುಗಳನ್ನು ಸ್ವೀಕರಿಸಿದರು. ಎ.ಆರ್. ಬಾರ್ ಬಗ್ಗೆ ಬಂದ ಅರ್ಜಿ ಬಗ್ಗೆ ವಿವರಿಸಿದ ಮುಖ್ಯಾಧಿಕಾರಿ ಮಹೇಂದ್ರ, ‘ಅದು ಅಕ್ರಮ ಅಲ್ಲ ಸಾರ್ ಅನಧಿಕೃತ’ ಎಂದರು. ಅಕ್ರಮಕ್ಕೂ ಅನಧಿಕೃತಕ್ಕೂ ಏನು ವ್ಯತ್ಯಾಸ ಎಂದಾಗ. ‘ಅಕ್ರಮ ಎಂದರೆ ಸರ್ಕಾರಿ ಜಮೀನಿನಲ್ಲಿ ಕಟ್ಟುವುದು. ಅನಧಿಕೃತ ಎಂದರೆ ಪುರಸಭೆಯ ಪರವಾನಿಗೆ ತೆಗೆದುಕೊಳ್ಳದೇ ಕಟ್ಟಿದ್ದು’ ಅನಧಿಕೃತ ಎಂದರು.

ಅನಧಿಕೃತ ಕಟ್ಟಡಕ್ಕೆ ನೀವು ಹೇಗೆ ಪರವಾನಿಗೆ ಕೊಟ್ಟಿರಿ ಎಂದು ಅಬಕಾರಿ ಇಲಾಖೆಯ ಇನ್‍ಸ್ಪೆಕ್ಟರ್ ಪಾಂಡುರಂಗ ಅವರನ್ನು ಕೇಳಿದಾಗ, ಪುರಸಭೆಯವರು ಈಸ್ವತ್ತು ನೀಡಿದ್ದಾರೆ ಅದರ ಆಧಾರದ ಮೇಲೆ ನೀಡಿದ್ದೇವೆ ಎಂದು ಉತ್ತರಿಸಿದರು. ಇದರಿಂದ ಅಸಮಾಧಾನಗೊಂಡ ಲೋಕಾಯುಕ್ತ ಸಿಬ್ಬಂದಿ ಇಂತದಕ್ಕೆಲ್ಲ ಅವಕಾಶ ನೀಡಬೇಡಿ ಎಂದರು.

ಕೆಲವರು ಸರ್ಕಾರಿ ಕಚೇರಿಗಳಿಗೆ ಅರ್ಜಿ ನೀಡಿ ವರ್ಷಗಳಿಂದ ಅಲೆಯುತ್ತಿದ್ದರೂ ಸಾರ್ವಜನಿಕರ ಕೆಲಸಗಳು ಆಗದ ಬಗ್ಗೆ ಎಸ್.ಪಿ. ಮಲ್ಲಿಕ್ ತೀವ್ರ ಬೇಸರ ವ್ಯಕ್ತಪಡಿಸಿದರು. ಶಂಕರ್ ನಾರಾಯಣ್ ಐತಾಳ್ ದೂರು ನೀಡಿ, ಗೃಹ ಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಿದರೆ ನಮ್ಮ ಅರ್ಜಿ ಆನ್‍ಲೈನ್‍ನಲ್ಲಿ ಸ್ವೀಕೃತವಾಗುತ್ತಿಲ್ಲ. ಈ ಬಗ್ಗೆ ಆಹಾರ ಇಲಾಖೆಗೆ ದೂರು ನೀಡಿದರೆ ನಮ್ಮಲ್ಲಿ ಅಪ್‍ಲೋಡ್ ಆಗಿದೆ, ಆದರೆ ಅದು ಶಿಶು ಮತ್ತು ಮಕ್ಕಳ ಇಲಾಖೆಯವರು ಸ್ವೀಕರಿಸುತ್ತಿಲ್ಲ ಎಂದು ಆಹಾರ ಇಲಾಖೆಯ ಇನ್‍ಸ್ಪೆಕ್ಟರ್ ಹೇಮಂತ್ ಉತ್ತರಿಸಿದರು.

ಶಿಶು ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಭಾಗ್ಯಮ್ಮ ನಮ್ಮ ಇಲಾಖೆಗೆ ಆನ್‍ಲೈನ್‍ನಲ್ಲಿ ದೂರು ಸಲ್ಲಿಸಿದರೆ ಸರಿಪಡಿಸಿಕೊಡುವುದಾಗಿ ತಿಳಿಸಿದರು. ಈ ಕೆಲಸ ಮಾಡಿಕೊಡಲು ಏಕೆ ಅಲೆಸುತ್ತಿದ್ದೀರ ಎಂದು ಪ್ರಶ್ನಿಸಿದ ಎಸ್ಪಿ, ನಿಮ್ಮ ಮೇಲೆ ಕ್ರಮಕ್ಕೆ ಬರೆಯುತ್ತೇನೆ ಎಂದರು. ತಕ್ಷಣ ಇವರ ಸಮಸ್ಯೆ ಬಗೆಹರಿಸಿಕೊಡುತ್ತೇನೆ ಎಂದು ಹೇಮಂತ್ ಉತ್ತರಿಸಿದರು.

‘ಸಾರ್ ನಾನು ಖುಷಿ ಶ್ರೀ ಶಾಲೆಯಲ್ಲಿ ಕಳೆದ 5 ವರ್ಷಗಳಿಂದ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದೆ. ಅವರು ನ್ನನ್ನನ್ನು ಕೆಲಸ ದಿಂದ ತೆಗೆದರು. ಆದರೆ ನನಗೆ ನನ್ನ 2 ತಿಂಗಳ ಸಂಬಳ ನೀಡದೆ ಕಳುಹಿಸಿದ್ದಾರೆ. ಸಂಬಳಕ್ಕಾಗಿ ಅಲೆದಲೆದು ಸುಸ್ತಾಗಿದ್ದೇನೆ ದಯವಿಟ್ಟು ನನ್ನ ಸಂಬಳ ಕೊಡಿಸಿ’ ಎಂದು ಶಿಕ್ಷಕಿ ಅರ್ಪಿತಾ ದೂರು ನೀಡಿದರು. ಸಮಸ್ಯೆ ಬಗೆಹರಿಸುವಂತೆ

ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಲಿಂಗೇಗೌಡರಿಗೆ ಸೂಚನೆ ನೀಡಿದರು.

ಪುರಸಭೆಯವರು ನನ್ನ ಆಸ್ತಿಯ ಈಸ್ವತ್ತು ಮಾಡುವಾಗ 10x17 ಅಡಿಯನ್ನು ಕೈ ಬಿಟ್ಟಿದ್ದಾರೆ. ಇದನ್ನು ಸರಿಪಡಿಸಿಕೊಡಿ ಎಂದು ಪುರಸಭೆಗೆ 2021 ರಲ್ಲಿ ಅರ್ಜಿ ನೀಡಿದ್ದೇನೆ ಇನ್ನೂ ಮಾಡಿಕೊಟ್ಟಿಲ್ಲ ಎಂದು 14 ನೇ ವಾರ್ಡಿನ ವಿಜಯಕುಮಾರ್ ದೂರಿದರು. ಲೋಕಾಯುಕ್ತ ಸಿಬ್ಬಂದಿ ಸಭೆಯಲ್ಲಿ ಹಾಜರಿದ್ದ ಮುಖ್ಯಾಧಿಕಾರಿಗೆ ಈ ಕೆಲಸ ಮಾಡಲು ಇನ್ನು ಎಷ್ಟು ವರ್ಷ ಬೇಕಪ್ಪ ಎಂದು ಪ್ರಶ್ನಿಸಿದರು. ಮುಖ್ಯಾಧಿಕಾರಿ ಮಹೇಂದ್ರ, ನಾನು ಪುರಸಭೆಗೆ ಇತ್ತೀಚೆಗೆ ಬಂದಿದ್ದೇನೆ ಕೂಡಲೇ ಪರಿಶೀಲಿಸಿ ಸಮಸ್ಯೆ ಬಗೆಹರಿಸಿಕೊಡುತ್ತೇನೆ ಎಂದು ಉತ್ತರಿಸಿದರು.

ನೀರಾವರಿ ಇಲಾಖೆ, ಲೋಕೋಪಯೋಗಿ ಇಲಾಖೆ, ತಾಲ್ಲೂಕು ಪಂಚಾಯ್ತಿ. ಪಿಡಿಒ, ಚೆಸ್ಕಾಂ ವಿರುದ್ದ ಬಂದು ದೂರುಗಳನ್ನು ಸ್ವೀಕರಿಸಿದ ಲೋಕಾಯುಕ್ತ ಎಸ್.ಪಿ, ಸಂಬಂಧ ಪಟ್ಟವರೊಂದಿಗೆ ಚರ್ಚಿಸಿದರು. ತಹಸೀಲ್ದಾರ್ ಕೆ. ಕೃಷ್ಣಮೂರ್ತಿ, ಇ.ಒ. ಗೋಪಾಲ್, ಎಸ್.ಐ. ವಿನಯ್‍ಕುಮಾರ್, ಹಿಂದುಳಿದ ವರ್ಗಗಳ ಇಲಾಖೆಯ ಮಂಜುನಾಥ್, ಕೃಷಿ ಅಧಿಕಾರಿ ಸಪ್ನಾ, ಮೀನುಗಾರಿಕೆ ಇಲಾಖೆಯ ಸುಮಾ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT