ಮಳೆ ಇಲ್ಲದೆ ಒಣಗಿದ ಮಲೆನಾಡಿನ ಹಳ್ಳಗಳು

ಭಾನುವಾರ, ಜೂನ್ 16, 2019
22 °C
ಕುಸಿಯುತ್ತಿರುವ ಅಂತರ್ಜಲ: ಕುಡಿಯುವ ನೀರಿನ ಸಮಸ್ಯೆ

ಮಳೆ ಇಲ್ಲದೆ ಒಣಗಿದ ಮಲೆನಾಡಿನ ಹಳ್ಳಗಳು

Published:
Updated:
Prajavani

ಸಕಲೇಶಪುರ: ಜೂನ್‌ ಬಂದರೂ ಮಲೆನಾಡಿನಲ್ಲಿ ಮಳೆ ಇಲ್ಲ. ಸುಡುವ ಬಿಸಿು, ಧಗೆ, ನೀರಿನ ಸಮಸ್ಯೆ ಇವೆಲ್ಲಾ ಮಲೆನಾಡಿಗರಲ್ಲಿ ಬರದ ಭಯ ಹುಟ್ಟಿಸಿದೆ.

ಜಿಲ್ಲೆಯ ಜೀವ ನದಿ ಹೇಮಾವತಿ ಸೇರಿದಂತೆ ತಾಲ್ಲೂಕಿನ ಬಹುತೇಕ ಹಳ್ಳ, ಕೊಳ್ಳ, ಝರಿ ಜಲಪಾತಗಳೆಲ್ಲವೂ ನೀರಿಲ್ಲದೆ ಭಣಗುಡುತ್ತಿವೆ. ಹಲವು ದಶಕಗಳ ಇಲ್ಲಿಯ ಇತಿಹಾಸದಲ್ಲಿ, ಮಳೆ ಇಲ್ಲದೆ ಬಿಸಿಲ ಬೇಗೆಗೆ ಗಿಡ ಮರಗಳೆಲ್ಲವೂ ಸುಡುತ್ತಿರುವುದು ಇದೇ ಮೊದಲು.

ವರ್ಷಪೂರ್ತಿ ಹರಿಯುತ್ತಿದ್ದ ಹಳ್ಳಗಳಲ್ಲಿ ಹಿಡಿ ನೀರು ಇಲ್ಲದಷ್ಟು ಒಣಗಿ ಹೋಗಿವೆ. ಅರೇಕೆರೆ, ಜಾನೇಕೆರೆ, ಸತ್ತಿಗಾಲ ಗ್ರಾಮಗಳಲ್ಲಿ ಹರಿಯುವ ಕಿರು ಹಳ್ಳವೂ ಒಣಗಿ ಹೋಗಿದೆ.

‘ನಾನು ಕಂಡಂತೆ 60 ವರ್ಷಗಳಿಂದ ಯಾವ ವರ್ಷವೂ ಒಣಗಿರಲಿಲ್ಲ. ಈ ಸ್ಥಿತಿ ನೋಡಿ ಕಣ್ಣೀರು ಬರುತ್ತದೆ’ ಎಂದು ಬಾಗರಹಳ್ಳಿ ರೈತ ಬಿ.ಆರ್. ಲಿಂಗಪ್ಪಗೌಡ ಬೇಸರದಿಂದಲೇ ಹೇಳಿದರು.

ನೀರಿನ ಸಮಸ್ಯೆಗೆ ನಲುಗಿದ ಮಲೆನಾಡು: ಇಡೀ ತಾಲ್ಲೂಕು ಸೇರಿದಂತೆ ಪಶ್ಚಿಮಘಟ್ಟದ ಅಂಚಿನ ಗ್ರಾಮಗಳಲ್ಲಿಯೂ ನೀರಿನ ಸಮಸ್ಯೆ ಎದುರಾಗಿದೆ. ಈ ಗ್ರಾಮಗಳು ಬೆಟ್ಟಗಳ ಮೇಲಿಂದ ಹರಿಯುವ ಸ್ವಜಲಧಾರೆಗಳಿಗೆ ಪೈಪ್‌ ಅಳವಡಿಸಿಕೊಂಡು ಕುಡಿಯುವ ನೀರು ಪಡೆಯುತ್ತಿದ್ದರು. ಗ್ರಾಮ ಪಂಚಾಯಿತಿಗಳ ಕಿರು ನೀರು ಸರಬರಾಜು ವ್ಯವಸ್ಥೆಯಿಂದ ಸಂಪರ್ಕ ಕಲ್ಪಿಸಿಕೊಂಡಿಲ್ಲ. ಹೀಗಾಗಿ ಹೊಡಚಹಳ್ಳಿ, ಕುಮಾರಳ್ಳಿ, ಮಾರನಹಳ್ಳಿ, ಕುಂಬರಡಿ, ಅಗನಿ ಸೇರಿದಂತೆ ಹಲವು ಗ್ರಾಮಗಳಲ್ಲಿ ನೀರಿನ ಸಮಸ್ಯೆ ಉಲ್ಬಣಿಸಿದೆ.

ಪ್ರಾಣಿ, ಪಕ್ಷಿಗಳಿಗೂ ನೀರಿಲ್ಲ: ಕಾಡಿನಲ್ಲಿ ಝರಿ, ಜಲಪಾತ ಬತ್ತಿವೆ. ಹಳ್ಳಗಳಲ್ಲಿಯೂ ನೀರಿಲ್ಲ, ಕಾಡಾನೆ ಸೇರಿದಂತೆ ವನ್ಯ ಜೀವಿಗಳು ರೈತರ ಗದ್ದೆ ತೋಟಗಳಲ್ಲಿರುವ ಕೆರೆ ಕಟ್ಟೆಗಳತ್ತ ದಾಳಿ ಮಾಡುತ್ತಿವೆ. ನೀರು ಹಾಗೂ ಆಹಾರ ಹುಡುಕಿಕೊಂಡು ಬರುವ ಕಾಡಾನೆ, ಕಾಟಿಗಳಿಂದ ಪ್ರಾಣ ಹಾನಿಗಳು ಸಂಭವಿಸುತ್ತಿವೆ. ಉಷ್ಠಾಂಶ ಶೇ 36ರ ವರೆಗೂ ದಾಖಲಾಗಿರುವುದು ಇದೇ ಮೊದಲು ಎನ್ನಲಾಗಿದೆ. ಕಾಫಿ, ಕಾಳುಮೆಣಸು ಬೆಳೆಗಳು ನೀರಿಲ್ಲದೆ ಬಾಡುತ್ತಿವೆ. ಇದರಿಂದ ಮುಂದಿನ ಫಸಲಿಗೂ ಭಾರಿ ಹೊಡೆತ ಬಿದ್ದಿದೆ ಎಂದು ರೈತರು ಕಂಗಾಲಾಗಿದ್ದಾರೆ.

ಟ್ಯಾಂಕರ್‌ ಮೂಲಕ ನೀರು: ತಾಲ್ಲೂಕಿನ ಸುಮಾರು 20 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಅಂತರ್ಜಲಮಟ್ಟ ಕುಸಿದು ಕೊಳವೆಬಾವಿ, ತೆರೆದ ಬಾವಿಗಳಲ್ಲಿ ನೀರಿಲ್ಲ. ಕೆಲವು ಗ್ರಾಮಗಳಿಗೆ ಎರಡ್ಮೂರು ದಿನಗಳಿಗೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ. ಬಾಳ್ಳುಪೇಟೆ ಹಾಗೂ ಕೆಲವೆಡೆ ಟ್ಯಾಂಕರ್‌ಗಳಲ್ಲಿ ನೀರು ಸರಬರಾಜು ಮಾಡಲಾಗುತ್ತಿದೆ.

14ನೇ ಹಣಕಾಸು ಯೋಜನೆಯ ಅನುದಾನದಲ್ಲಿ ಶೇ 80 ಕುಡಿಯುವ ನೀರು ಸರಬರಾಜಿಗೆ ಖರ್ಚು ಮಾಡುವಂತೆ ಗ್ರಾಮ ಪಂಚಾಯಿತಿಗಳಿಗೆ ಸರ್ಕಾರದಿಂದ ಆದೇಶ ಸಹ ಬಂದಿದೆ. ಕುಡಿಯುವ ನೀರಿನ ಸಮಸ್ಯೆಗೆ ತುರ್ತು ಕ್ರಮ ಕೈಗೊಳ್ಳುವಂತೆ ಗ್ರಾ.ಪಂ.ಗಳಿಗೆ ಸೂಚನೆ ನೀಡಲಾಗಿದೆ ಎನ್ನುತ್ತಾರೆ.

ಮಳೆ ಕೊರತೆ

ತಾಲ್ಲೂಕಿನಲ್ಲಿ ಜನವರಿ 1ರಿಂದ ಮೇ 31 ವಾಡಿಕೆ ಸರಾಸರಿ 204 ಮಿ.ಮೀ. ಮಳೆ ಆಗಬೇಕಿತ್ತು. ಕಳೆದ ವರ್ಷ 375 ಮಿ.ಮೀ. ಮಳೆಯಾಗಿ ವಾಡಿಕೆಗಿಂತ ಹೆಚ್ಚಾಗಿತ್ತು.  ಆದರೆ ಈ ವರ್ಷ ಕೇವಲ 80 ಮಿ.ಮೀ ಮಳೆಯಾಗಿದೆ. ಶೇ 59 ರಷ್ಟು ಕಡಿಮೆಯಾಗಿರುವುದರಿಂದ ಬೆಳೆ ಹಾಗೂ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ.

ಖಾಸಗಿ ಕೊಳವೆಬಾವಿ ವಶಕ್ಕೆ ಆದೇಶ

ತಾಲ್ಲೂಕಿನಕ್ಯಾಮನಹಳ್ಳಿ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಕೊಳವೆ ಬಾವಿ ಪಕ್ಕದಲ್ಲಿಯೇ ಅನುಮತಿ ಇಲ್ಲದೆ ಖಾಸಗಿ ವ್ಯಕ್ತಿಯೊಬ್ಬರು ಕೊಳವೆಬಾವಿ ಕೊರೆಸಿದ್ದು, ಆ ಬಾವಿಯಲ್ಲಿ ನೀರು ಇದ್ದರೂ ಗ್ರಾಮಸ್ಥರಿಗೆ ನೀಡುತ್ತಿಲ್ಲ. ಆದ್ದರಿಂದ ಅದನ್ನು ಗ್ರಾ.ಪಂ. ವಶಕ್ಕೆ ಪಡೆಯುವಂತೆ ಆದೇಶ ನೀಡಲಾಗಿದೆ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಡಾ. ಪುನೀತ್‌ ಹೇಳಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !