ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಕಲಗೂಡು: ಗೋಮಾಳ ನಿವಾಸಿಗಳ ಕತ್ತಲ ಬದುಕು; ವಿದ್ಯುತ್ ಸಂಪರ್ಕ ಇಲ್ಲದೆ ಪರದಾಟ

ಕ್ಯಾಂಡಲ್‌ನಲ್ಲೇ ರಾತ್ರಿ ಕಳೆಯುವ ಸ್ಥಿತಿ
Last Updated 29 ಮಾರ್ಚ್ 2021, 2:02 IST
ಅಕ್ಷರ ಗಾತ್ರ

ಅರಕಲಗೂಡು: ವಿದ್ಯುತ್‌ ಸೌಲಭ್ಯವಿಲ್ಲದೇ ಸೀಮೆಎಣ್ಣೆ ದೀಪ ಹಾಗೂ ಕ್ಯಾಂಡಲ್‌ ಬೆಳಕಿನಲ್ಲಿ ನಿತ್ಯ ರಾತ್ರಿ ಕಳೆಯುವ ಸ್ಥಿತಿ. ಮಕ್ಕಳು ಓದಲು ಹಾಗೂ ಅಡುಗೆ ತಯಾರಿಸಲು ಕ್ಯಾಂಡಲ್‌ಬೆಳಕೇ ಗತಿ.

ತಾಲ್ಲೂಕಿನ ದುಮ್ಮಿ ಗ್ರಾಮದ ಹೊರ ಭಾಗದ ಸರ್ಕಾರಿ ಗೋಮಾಳದಲ್ಲಿ ಮನೆ ನಿರ್ಮಿಸಿಕೊಂಡು ಜೀವನ ಸಾಗಿಸು ತ್ತಿರುವ ಹತ್ತು ಕುಟುಂಬಗಳ ವ್ಯಥೆ ಇದು. ಎರಡು ದಶಕಗಳಿಂದ ವಿದ್ಯುತ್ ಸೌಲಭ್ಯವಿಲ್ಲದೆ ಜೀವನ ನಡೆಸುತ್ತಿದ್ದಾರೆ. ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದು, ಶಾಲಾ, ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳು ಇಲ್ಲಿದ್ದಾರೆ.

ದಿನ ನಿತ್ಯದ ಅಗತ್ಯಗಳನ್ನು ಪೂರೈಸಿಕೊಳ್ಳಲು ನೆರೆ, ಹೊರೆಯ ಮನೆಗಳನ್ನು ಅವಲಂಬಿಸಬೇಕಿದೆ. ಮಿಕ್ಸಿ ಬಳಕೆ, ಮೊಬೈಲ್ ಚಾರ್ಜ್ ಮಾಡಿಕೊಳ್ಳುವುದು, ಟಿ.ವಿ ನೋಡಲು ಹಾಗೂ ಮಕ್ಕಳು ಓದಲು ನಿತ್ಯವೂ ರಾತ್ರಿ ವೇಳೆ ತೆರಳುತ್ತಾರೆ. ಮನೆಯಲ್ಲಿ ಕಾರ ಅರೆಯಲು ಒರಳ ಕಲ್ಲು ಬಳಕೆ ಮತ್ತು ಸೀಮೆಎಣ್ಣೆ ದೀಪದ ಕೆಳಗೆ ಮಕ್ಕಳು ಓದುವಂತಹ ಶೋಚನೀಯ ಸ್ಥಿತಿಯಲ್ಲಿ ನಿವಾಸಿಗಳು ಇದ್ದಾರೆ.

ದುಮ್ಮಿ ದಲಿತ ಕಾಲೊನಿಯಲ್ಲಿ ಕುಮಾರ, ಲಕ್ಷ್ಮೀಕಾಂತ್, ರಾಜಯ್ಯ, ಸರೋಜಾ, ಹುಚ್ಚಯ್ಯ ಸೇರಿದಂತೆ ಇತರೆ ಕುಟುಂಬ ಗಳು ವಾಸವಿದ್ದವು. ಆದರೆ, ಅಲ್ಲಿ ಮನೆಗಳು ಶಿಥಿಲವಾಗಿ ನೆಲಸಮ ಗೊಂಡವು. ಹಾಗಾಗಿ ಉಳುಮೆ ಮಾಡುತಿದ್ದ ಸರ್ವೆ ನಂ.78 ಮತ್ತು 81ರ ಸರ್ಕಾರಿ ಗೋಮಾಳದಲ್ಲಿ ಆಶ್ರಯ ಯೋಜನೆಯಡಿ ಮನೆ ನಿರ್ಮಿಸಿಕೊಂಡು ವಾಸವಿದ್ದಾರೆ.

1991ರಲ್ಲಿ ನಮೂನೆ 53ರಲ್ಲಿ ಬಗರ್ ಹುಕುಂ ಸಾಗುವಳಿ ಚೀಟಿಗೆ ಅರ್ಜಿ ಸಲ್ಲಿಸಿದ್ದರೂ ಮಂಜೂರಾತಿ ಪತ್ರ ದೊರೆತಿಲ್ಲ. ಸ್ಥಳೀಯ ಸಂತೆಮರೂರು ಗ್ರಾಮ ಪಂಚಾಯಿತಿ ವತಿಯಿಂದ ಕುಡಿಯುವ ನೀರು, ಚರಂಡಿ ಹಾಗೂ ರಸ್ತೆ ಸೌಲಭ್ಯ ಕಲ್ಪಿಸಲಾಗಿದೆ. ಆದರೆ, ವಿದ್ಯುತ್ ಸಂಪರ್ಕ ಮಾತ್ರ ಕಲ್ಪಿಸಿಲ್ಲ.

ಗ್ರಾಮದ ಪ್ರಮುಖ ರಸ್ತೆಯ ಪಕ್ಕದಲ್ಲಿ ಕುಟುಂಬಗಳು ವಾಸವಿದ್ದು, ರಸ್ತೆಯ ಎರಡು ಕಡೆ ವಿದ್ಯುತ್ ಲೈನ್ ಹಾದು ಹೋಗಿವೆ. ಇದೇ ಮಾರ್ಗದಲ್ಲಿ ಮನೆ ಬಳಕೆಯ
ವಿದ್ಯುತ್ ಲೈನ್ ಅಳವಡಿಸುವ ಅವಕಾಶ ವಿದೆ. ಈ ಕೆಲಸವನ್ನು ನಿರ್ವಹಿಸದೆ ಸೆಸ್ಕ್ ನಿರ್ಲಕ್ಷ್ಯತೆ ವಹಿಸಿದೆ ಎಂದು ನಿವಾಸಿಗಳು ಅಳಲು ತೋಡಿಕೊಂಡರು.

ಸರ್ಕಾರಗಳು ಗ್ರಾಮೀಣ ಭಾಗದ ಬಡವರಿಗೆ ಉಚಿತ ವಿದ್ಯುತ್ ಸಂಪರ್ಕ ಕಲ್ಪಿಸಲು ಸಲುವಾಗಿ ಕೋಟ್ಯಂತರ ರೂಪಾಯಿ ವ್ಯಯ ಮಾಡುತ್ತಿವೆ. ನಿರಂತರ ಜ್ಯೋತಿ ಯೋಜನೆಯನ್ನು ಅನುಷ್ಠಾನಗೊಳಿಸಿ ವಿದ್ಯುತ್‌ ನೀಡಿದೆ. ಆದರೆ, ಗೋಮಾಳದಲ್ಲಿ ವಾಸವಿರುವ ಬಡ ಪರಿಶಿಷ್ಟ ಜಾತಿ ಕುಟುಂಬಗಳಿಗೆ ಮಾತ್ರ ವಿದ್ಯುತ್ ಸೌಲಭ್ಯ ಮರೀಚಿಕೆಯಾಗಿದೆ.

ಶಾಸಕರ ಸೂಚನೆಗೂ ಕಿಮ್ಮತ್ತಿಲ್ಲ

ಸಂತೆಮರೂರು ಗ್ರಾಮ ಪಂಚಾಯಿತಿ ವತಿಯಿಂದ ನಡೆದ ಜನಸಂಪರ್ಕ ಸಭೆಯಲ್ಲಿ ಭಾಗವಹಿಸಿದ್ದ ಕ್ಷೇತ್ರದ ಶಾಸಕ ರಾಮಸ್ವಾಮಿ ಅವರಿಗೆ ಮನವಿ ನೀಡಿದಾಗ, ಕೂಡಲೇ ಸ್ಥಳ ಪರಿಶೀಲನೆ ನಡೆಸಿ ಬಡ ಕುಟುಂಬಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕೆಂದು ಸೆಸ್ಕ್ ಎಂಜಿನಿಯರ್ ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಸೂಚನೆ ನೀಡಿದ್ದರು. ಎರಡೂವರೆ ವರ್ಷ ಕಳೆದರೂ ಅಧಿಕಾರಿ ಭೇಟಿ ಕೊಟ್ಟಿಲ್ಲ ಎಂಬುದು ನಿವಾಸಿಗಳ ಆರೋಪ.

ಮಕ್ಕಳ ಓದಿಗೆ ತೊಂದರೆ

‘ಕೃಷಿ ಜಮೀನು ಬಳಿ ಮನೆ ನಿರ್ಮಿಸಿಕೊಂಡಿದ್ದೇವೆ. ರಾತ್ರಿ ವೇಳೆ ತಿರುಗಾಡಲು ಭಯವಾಗುತ್ತದೆ. ಮಕ್ಕಳು, ಹೆಂಗಸರು ರಾತ್ರಿ ಕಷ್ಟದಿಂದ ಕಳೆಯುತ್ತಾರೆ. ರಾತ್ರಿ ವೇಳೆ ಶೌಚಕ್ಕೆ ಹೊರ ಬಂದ ವೇಳೆ ಒಂದಿಬ್ಬರಿಗೆ ಹಾವು ಕಚ್ಚಿತ್ತು. ಕೂಡಲೇ ಚಿಕಿತ್ಸೆ ಕೊಡಿಸಿದ್ದರಿಂದ ಪ್ರಾಣ ಉಳಿದುಕೊಂಡಿದೆ. ಸೊಸೈಟಿಯಲ್ಲಿ ಕೊಡುವ ಎರಡು ಲೀಟರ್ ಸೀಮೆಎಣ್ಣೆಯಿಂದ ಇಡೀ ತಿಂಗಳು ದೀಪ ಹಚ್ಚಿಕೊಳ್ಳಲು ಆಗುವುದಿಲ್ಲ. ಹೆಚ್ಚಾಗಿ ಕ್ಯಾಂಡಲ್ ಬಳಸುತ್ತೇವೆ. ಪ್ರತಿ ಮನೆಯಲ್ಲಿ ಶಾಲಾ, ಕಾಲೇಜುಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಇದ್ದಾರೆ. ಕೆಲವೊಮ್ಮೆ ಒಂದೇ ಮನೆಯಲ್ಲಿ ಸೇರಿಕೊಂಡು ಓದು ಬರಹ ಮಾಡುತ್ತಾರೆ. ಆರ್ಥಿಕವಾಗಿ ಸಂಕಷ್ಟದಲ್ಲಿರುವುದರಿಂದ ಬೆಳಕಿನ ವ್ಯವಸ್ಥೆ ಮಾಡಬೇಕು’ ಎಂದು ನಿವಾಸಿಗಳು ಆಗ್ರಹಿಸಿದರು.

***

ಎರಡು ದಶಕಗಳಿಂದ ಕತ್ತಲಲ್ಲೇ ಬದುಕು ಕಳೆಯುತ್ತಿದ್ದೇವೆ. ಹೆಣ್ಣು ಮಕ್ಕಳು ರಾತ್ರಿ ವೇಳೆ ಮನೆ ಹೊರಗೆ ಹೋಗಲು ಭಯಪಡುವಂತಾಗಿದೆ.

–ಯಶೋದಾ, ಸ್ಥಳೀಯ ನಿವಾಸಿ

***

ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗಿದೆ. ವಿದ್ಯುತ್ ಇಲ್ಲದ ಕಾರಣ ಓದಲು ಸಾಧ್ಯವಾಗದೆ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಸಂಬಂಧಿಸಿದವರು ಕ್ರಮ ಕೈಗೊಳ್ಳಬೇಕು.

–ರೇಖಾ, ವಿದ್ಯಾರ್ಥಿನಿ

***

21ನೇ ಶತನಮಾನದ ಆಧುನಿಕ ಯುಗದಲ್ಲೂ ಕತ್ತಲಲ್ಲಿ ಬದುಕುವ ದುಸ್ಥಿತಿ ಇದ್ದು. ಶಿಲಾಯುಗದ ಜನರಂತೆ ಬದುಕು ಸಾಗಿಸುತ್ತಿದ್ದೇವೆ. ಯಾರ ಬಳಿ ಕಷ್ಟ ಹೇಳಿಕೊಳ್ಳುವುದು.

–ಸೃಜನ್, ಪದವಿ ವಿದ್ಯಾರ್ಥಿ

***

ವಿದ್ಯುತ್ ಸೌಲಭ್ಯವಿಲ್ಲದೆ ಕಾಡಿನ ಜನರಂತೆ ಕತ್ತಲೆಯಲ್ಲಿ ಜೀವನ ಸಾಗಿಸುವಂತ ದುಃಸ್ಥಿತಿ ಎದುರಾಗಿದೆ. ಕ್ಷೇತ್ರದ ಶಾಸಕರು, ಅಧಿಕಾರಿಗಳು ವಿದ್ಯುತ್ ಸೌಲಭ್ಯ ಕಲ್ಪಿಸಬೇಕು.

–ಕುಮಾರ, ನಿವಾಸಿ

***

ಗೋಮಾಳದಲ್ಲಿ ನೆಲೆಸಿರುವ ಕುಟುಂಬಗಳಿಗೆ ನೀರಿನ ಸಂಪರ್ಕ ಕಲ್ಪಿಸಲಾಗಿದೆ. ವಿದ್ಯುತ್ ಕಲ್ಪಿಸುವ ಕುರಿತು ಮೇಲಧಿಕಾರಿಗಳೊಂದಿಗೆ ಚರ್ಚಿಸಲಾಗುವುದು.

–ಮಹಾದೇವಪ್ಪ, ಪಿಡಿಒ, ಸಂತೆಮರೂರು ಗ್ರಾ.ಪಂ

***

ನಿರಂತರ ಜ್ಯೋತಿ ಕೆಲಸ ತಾಲ್ಲೂಕಿನಲ್ಲಿ ಈಗಾಗಲೇ ಪೂರ್ಣಗೊಂಡಿದೆ. ಗೋಮಾಳದಲ್ಲಿ ಮನೆ ನಿರ್ಮಿಸಿಕೊಂಡಿರುವ ನಿವಾಸಿಗಳಿಗೆ ವಿದ್ಯುತ್ ಸಂಪರ್ಕ ಇಲ್ಲದಿರುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

-ಶ್ರೀನಿವಾಸ್, ಎಇಇ, ಸೆಸ್ಕ್ , ಅರಕಲಗೂಡು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT