ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Elephant Arjuna | ಕ್ಯಾಪ್ಟನ್‌ ಇಲ್ಲದೇ ಮರಳಿದ ಸಾಕಾನೆ ತಂಡ

Published 7 ಡಿಸೆಂಬರ್ 2023, 4:41 IST
Last Updated 7 ಡಿಸೆಂಬರ್ 2023, 4:41 IST
ಅಕ್ಷರ ಗಾತ್ರ

ಬೇಲೂರು: ಕುಟುಂಬದ ಸದಸ್ಯನೊಬ್ಬನನ್ನು ಕಳೆದುಕೊಂಡ ನೋವು... ಮರಳಿ ಬಾರದ ಲೋಕಕ್ಕೆ ಹೋದ ಕ್ಯಾಪ್ಟನ್‌ನನ್ನು ಬಿಟ್ಟು ಹೊರಡಬೇಕಾದ ದುಃಖ... ಅರ್ಜುನನನ್ನು ಕೊಂದ ಕಾಡಾನೆಯನ್ನು ಸೆರೆ ಹಿಡಿಯುವ ಶಪಥ...

ತಾಲ್ಲೂಕಿನ ಬಿಕ್ಕೋಡು ವ್ಯಾಪ್ತಿಯಲ್ಲಿ ಮೂರು ಹೆಣ್ಣಾನೆಗಳಿಗೆ ರೇಡಿಯೊ ಕಾಲರ್ ಅಳವಡಿಕೆ ಹಾಗೂ ಮೂರು ಪುಂಡಾನೆಗಳನ್ನು ಸ್ಥಳಾಂತರ ಮಾಡಿದ ಸಾಕಾನೆಗಳ ತಂಡ ಬುಧವಾರ ದುಬಾರೆ ಆನೆ ಶಿಬಿರಕ್ಕೆ ವಾಪಸಾಗುವ ಸಂದರ್ಭದಲ್ಲಿ ಕಂಡು ಬಂದ ದೃಶ್ಯಗಳಿವು.

ಇಲ್ಲಿಂದ ಸಕಲೇಶಪುರ ಭಾಗಕ್ಕೆ ತೆರಳಿ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಅರ್ಜುನ ಮೃತಪಟ್ಟಿದ್ದಾನೆ. ಅರ್ಜುನನ ಕೊರತೆ ಇಡೀ ಕ್ಯಾಂಪ್‌ನಲ್ಲಿ ಎದ್ದು ಕಾಣುತ್ತಿತ್ತು.

ಅರ್ಜುನನ ಮಾವುತ ವಿನುವಿನ ಕಣ್ಣೀರು ಮಾತ್ರ ನಿಲ್ಲುತ್ತಿರಲಿಲ್ಲ. ‘ನನ್ನ ಆನೆಯನ್ನು ತಂದು ಕೊಡಿ’ ಎಂದು ಕಣ್ಣೀರಿಟ್ಟ ವಿನು, ’ಕಾಡಾನೆಗೆ ಫೈರ್ ಮಾಡಲು ಹೋಗಿ ನನ್ನ ಆನೆಗೆ ಹೊಡೆದರು’ ಎಂದು ಅಲವತ್ತಿಕೊಳ್ಳುತ್ತಿದ್ದರು.

‘ಅವನು ಹೋಗುವ ಮುಂಚೆ ದೇವರು ನನ್ನನ್ನು ಕರೆದುಕೊಳ್ಳಬೇಕಿತ್ತು. ನಮ್ಮ ಮೈಸೂರಿನವರಿಗೆ ಅರ್ಜುನ ಎಂದರೆ ತುಂಬಾ ಇಷ್ಟ. ನಮ್ಮ ಅಪ್ಪ, ಅಮ್ಮನಿಗೆ ಹೇಗೆ ಮುಖ ತೋರಿಸಲಿ? ಅವತ್ತಿನಿಂದ ಏನು ತಿಂದಿಲ್ಲವಂತೆ. ಎಲ್ಲ ಹಾಗೇ ಇದ್ದಾರೆ, ಫೋನ್ ಮಾಡಿದ್ರು. ನನ್ನ ಮಕ್ಕಳು ಏನೂ ತಿಂದಿಲ್ಲ, ಸ್ಕೂಲ್‌ಗೂ ಹೋಗಿಲ್ಲ. ಅರ್ಜುನ ಗಂಟೆ ಅಲ್ಲಾಡಿಸುತ್ತಿದ್ದಂತೆಯೇ, ಬೆಲ್ಲ ತಂದು ನಿಂತುಕೊಳ್ಳೋರು’ ಎಂದು ದುಃಖ ತೋಡಿಕೊಳ್ಳುತ್ತಿದ್ದರು.

‘ದಯವಿಟ್ಟು ನನ್ನ ಆನೆಯನ್ನು ಕೊಡಿ ಸರ್, ನಾನು 2015–16 ರಲ್ಲಿ ಅರ್ಜುನನ ಜೊತೆಯಾದೆ. ಮೂರು ಬಾರಿ ಅಂಬಾರಿ ಹೊತ್ತೆವು. ಚಿನ್ನದಂತ ಆನೆ’ ಎಂದು ಗಳಗಳನೆ ಅತ್ತರು.

‘ನಾವು ಶೆಡ್ ಹಾಕಿಕೊಂಡು ಮಲಗಿದ್ದಾಗ ನಮ್ಮ ಹತ್ತಿರ ಕಾಡಾನೆ ಬರಲು ಬಿಡುತ್ತಿರಲಿಲ್ಲ. ನಮಗಿಂತ ಮುಂಚೆ ಅರ್ಜುನನೇ ಎದ್ದೇಳುತ್ತಿದ್ದ. ಮುಂದೆ ಉಳಿದ ಆನೆಗಳಿಗೂ ಸುರಕ್ಷತೆ ನೀಡಿ. ಅಭಿಮನ್ಯುವನ್ನು ಎಲ್ಲಿಗೂ ಕಳಿಸಬೇಡಿ’ ಎಂದು ಮನವಿ ಮಾಡಿದರು.

ಹೊರಡುವ ಮುನ್ನ ಸಿಸಿಎಫ್ ರವಿಶಂಕರ್‌, ಡಿಎಫ್‌ಒ ಮೋಹನ್‌ಕುಮಾರ್‌ ಎಷ್ಟೇ ಸಮಾಧಾನ ಮಾಡಿದರೂ, ವಿನು ಬಿಕ್ಕಿ ಬಿಕ್ಕಿ ಅಳುವುದನ್ನು ಮುಂದುವರಿಸಿದ್ದರು. ಧೈರ್ಯವಾಗಿರು ಎಂದು ಸಮಾಧಾನ ಮಾಡಿದರೂ ಕೇಳಲಿಲ್ಲ. ‘ಅರ್ಜುನನನ್ನು ಹೇಗೆ ಮರೆಯಲಿ’ ಎಂದು ಕಣ್ಣೀರು ಹಾಕಿದ.

10 ದಿನ ಸ್ಥಗಿತ

‘ಹತ್ತು ದಿನ ಕಳೆದ ನಂತರ ಕಾಡಾನೆ ಸೆರೆ ಹಾಗೂ ರೇಡಿಯೊ ಕಾಲರ್ ಅಳವಡಿಕೆ ಕಾರ್ಯಾಚರಣೆ ಆರಂಭಿಸಲಾಗುವುದು’ ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್ ತಿಳಿಸಿದರು.

ಬೇಲೂರು ತಾಲ್ಲೂಕಿನ ಬಿಕ್ಕೋಡು ಗ್ರಾಮದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಇಷ್ಟು ದಿನ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಸಾಕಾನೆಗಳನ್ನು ಕಾಡಾನೆಗಳು ದುಬಾರೆ ಕ್ಯಾಂಪ್‌ಗೆ ವಾಪಸ್ ಕಳಿಸುತ್ತಿದ್ದೇವೆ. 10 ದಿನದ ನಂತರ ಕಾರ್ಯಾಚರಣೆ ಮುಂದುವರಿಸಲು ತೀರ್ಮಾನ ಕೈಗೊಂಡಿದ್ದೇವೆ’ ಎಂದರು.

‘ಈಗಾಗಲೇ ಅರ್ಜುನ ಮರಣ ಹೊಂದಿರುವುದರಿಂದ ಎಲ್ಲ ಮಾವುತರು, ಕಾವಾಡಿಗಳು, ನಮ್ಮ ಸಿಬ್ಬಂದಿ ದುಃಖದಲ್ಲಿದ್ದಾರೆ. ಎಲ್ಲರೂ ದೂರದಿಂದ ಬಂದಿದ್ದು, 15 ದಿನದಿಂದ ಮನೆ ಬಿಟ್ಟಿದ್ದಾರೆ. ಸ್ವಲ್ಪ ದಿನ ಸುಧಾರಿಸಿಕೊಂಡು ನಂತರ ಕಾರ್ಯಾಚರಣೆ ಪುನರಾರಂಭ ಮಾಡುವುದಾಗಿ’ ಹೇಳಿದರು.

‘9 ಕಾಡಾನೆಗೆ ರೇಡಿಯೊ ಕಾಲರ್ ಅಳವಡಿಕೆ ಮಾಡಬೇಕಿತ್ತು. ಈಗಾಗಲೇ ಐದು ಕಾಡಾನೆಗಳಿಗೆ ರೇಡಿಯೊ ಕಾಲರ್ ಹಾಕಲಾಗಿದೆ. ಖಂಡಿತವಾಗಿಯೂ ಈ ಕಾರ್ಯಾಚರಣೆಯನ್ನು ಪೂರ್ಣಗೊಳಿಸಲಿದ್ದೇವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT