ಭಾನುವಾರ, ಏಪ್ರಿಲ್ 11, 2021
20 °C
15ನೇ ಘಟಿಕೋತ್ಸವ

ಪ್ರಾಕೃತ ಭಾಷೆ ಮಹತ್ವ ತಿಳಿಸಿ: ಪ್ರೊ.ಪ್ರೇಮ್‌ಸುಮನ್ ಜೈನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶ್ರವಣಬೆಳಗೊಳ: ‘ಸಾಹಿತ್ಯ ಮತ್ತು ಅಧ್ಯಯನದ ದೃಷ್ಟಿಯ ವಿಶಾಲವಾದ ಅರ್ಥದಲ್ಲಿ ಎರಡು ಮಹತ್ವದ ಭಾಷೆ ಗಳೆಂದರೆ ಪ್ರಾಕೃತ ಮತ್ತು ಸಂಸ್ಕೃತ ಭಾಷೆಗಳಾಗಿದ್ದು, ಬೇರೆ- ಬೇರೆ ಕಾಲಘಟ್ಟಗಳಲ್ಲಿ ಇವು ಒಂದನ್ನೊಂದು ಪ್ರಭಾವಿಸಿದ್ದವು’ ಎಂದು ರಾಜಸ್ಥಾನದ ಪ್ರೊ.ಪ್ರೇಮ್‌ಸುಮನ್ ಜೈನ್ ಅಭಿಪ್ರಾಯಪಟ್ಟರು.

ಇಲ್ಲಿಯ ಹೊರವಲಯದ ಶ್ರೀಧವಲತೀರ್ಥಂನಲ್ಲಿರುವ ರಾಷ್ಟ್ರೀಯ ಪ್ರಾಕೃತ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಭಾನುವಾರ ಆಯೋಜಿಸಿದ್ದ 15ನೇ ಘಟಿಕೋತ್ಸವ ಭಾಷಣ ಮಾಡಿ ಮಾತನಾಡಿದ ಅವರು, ‘ಪ್ರಾಕೃತ ಪ್ರಾಚೀನ ಭಾಷೆಯಾಗಿರುವುದರಿಂದ ಇಂದಿನ ಯುವಪೀಳಿಗೆಗೆ ಈ ಭಾಷೆಯ ಮಹತ್ವವನ್ನು ಮತ್ತು ಅದರ ಶ್ರೀಮಂತಿಕೆಯನ್ನು ತಿಳಿಸುವ ಕಾರಣ ದಿಂದ ಪ್ರಾಕೃತವನ್ನು ಅಧ್ಯಯನ ಮಾಡುವ ಮಾಧ್ಯಮಿಕ ತರಗತಿಗಳ ವಿದ್ಯಾರ್ಥಿಗಳಿಗೆ ಐಚ್ಛಿಕ ವಿಷಯವಾಗಿ ಸೇರಿಸಬೇಕು ಹಾಗೂ ಧಾರ್ಮಿಕ ಕೇಂದ್ರ ಗಳಲ್ಲಿ ಹೆಚ್ಚು ಪ್ರಾಕೃತ ಪಾಠಶಾಲೆಗಳನ್ನು ಆರಂಭಿಸಬೇಕು’ ಎಂದು ಹೇಳಿದರು.

‘ಪ್ರಾಕೃತ ಭಾಷೆ ಕೇವಲ ಜೈನರದ್ದು ಎಂದು ತಿಳಿಯಬಾರದು, ಅದು ಜನಸಾಮಾನ್ಯರ ಆಡು ಭಾಷೆಯಾಗಿತ್ತು. ಪ್ರಾಕೃತ ಸಾಹಿತ್ಯದ ಅಧ್ಯಯನದಿಂದ ನಮಗೆ ಅನೇಕ ಕಲೆಗಳು, ಹಸ್ತಶಿಲ್ಪ, ಔಷಧಿ- ವಿಜ್ಞಾನ, ಜೋತಿಷ್ಯ, ಭೂಗೋಳ, ಧಾತು ವಿಜ್ಞಾನ, ರಸಾಯನ ವಿಜ್ಞಾನ ಮುಂತಾದವುಗಳ ಪ್ರಾಮಾಣಿಕ ತಿಳಿವಳಿಕೆ ದೊರೆಯುತ್ತದೆ. ಪ್ರಾಕೃತ ಗ್ರಂಥಗಳಲ್ಲಿ ದೊರೆಯುವ ವಿಭಿನ್ನ ವೃತ್ತಾಂತಗಳು ಆಚಾರಶಾಸ್ತ್ರ, ವನಸ್ಪತಿಶಾಸ್ತ್ರ, ಜೀವ-ವಿಜ್ಞಾನ ಮತ್ತು ರಾಜನೀತಿ ಶಾಸ್ತ್ರ ಮುಂತಾದ ಕ್ಷೇತ್ರಗಳಲ್ಲಿ ನವೀನ ತತ್ತ್ವಗಳನ್ನು ಪ್ರಸ್ತುತಪಡಿಸುತ್ತವೆ. ಪ್ರಾಕೃತ ಅಧ್ಯಯನ ವನ್ನು ಭಾಷಾತ್ಮಕವಾಗಿ, ಸಾಂಸ್ಕೃತಿಕವಾಗಿ ವಿಭಿನ್ನ ಆಯಾಮಗಳಲ್ಲಿ ಪ್ರಕಟಪಡಿಸುವ ಅವಶ್ಯಕತೆಯಿದೆ’ ಎಂದು ಹೇಳಿದರು.

ಪ್ರಾಕೃತ ಪರೀಕ್ಷೆಯನ್ನು ಭಾರತದಾದ್ಯಂತ ಈ ಸಾಲಿನಲ್ಲಿ ಕನ್ನಡ ಮಾಧ್ಯಮದಲ್ಲಿ ಪರೀಕ್ಷೆಗೆ ಹಾಜರಾಗಿ 243 ಜನ ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಹಿಂದಿ ಮಾಧ್ಯಮದಿಂದ 206 ಜನ ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು, ಒಟ್ಟು 449 ಜನ ವಿದ್ಯಾರ್ಥಿಗಳು ಎರಡು ಮಾಧ್ಯಮದಲ್ಲಿ ಉತ್ತೀರ್ಣರಾಗಿದ್ದಾರೆ.

ಕಾರ್ಯಕ್ರಮದಲ್ಲಿ ಬಾಹುಬಲಿ ಪ್ರಾಕೃತ ವಿದ್ಯಾಪೀಠದ ಕಾರ್ಯಾಧ್ಯಕ್ಷ ಎ.ಸಿ.ವಿದ್ಯಾಧರ, ಮ್ಯಾನೇಜಿಂಗ್ ಟ್ರಸ್ಟಿ ದೇವೇಂದ್ರ ಪಾಕಿ, ನಿರ್ದೇಶಕ ಡಾ. ರಾಜೇಂದ್ರ ಕುಮಾರ್, ಕಾರ್ಯ ನಿರ್ವಹಣಾಧಿಕಾರಿ ಎಂ.ಉದಯರಾಜ್, ಟ್ರಸ್ಟಿ ಸದಸ್ಯರಾದ ಎಲ್.ಎಸ್. ಜೀವೇಂದ್ರಕುಮಾರ್, ವೃಷಭರಾಜ್, ಬೋದಕ ಸಿಬ್ಬಂದಿ ಸಿ.ಪಿ.ಕುಸುಮಾ, ರಾಜೇಂದ್ರ ಶಾಸ್ತ್ರಿ, ಲೋಕ್‌ ಕುಮಾರ್, ಹಜಾರಿ ಪಾರ್ಶ್ವನಾಥ್, ಡಾ.ಮುರಳಿ ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.