ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯೋಗ ಕಡಿತ: ಸುದ್ದಿಯಿಂದಲೇ ನಿದ್ದೆಗೆಡುತ್ತಿರುವ ಕಾರ್ಮಿಕರು

ಹಾಸನದ ಗಾರ್ಮೆಂಟ್ಸ್‌ ಉದ್ಯಮಕ್ಕೆ ತಟ್ಟದ ಆರ್ಥಿಕ ಹಿಂಜರಿತ
Last Updated 3 ಸೆಪ್ಟೆಂಬರ್ 2019, 8:55 IST
ಅಕ್ಷರ ಗಾತ್ರ

ಹಾಸನ: ದೇಶದಲ್ಲಿ ಕಾಡುತ್ತಿರುವ ಆರ್ಥಿಕ ಹಿಂಜರಿತ ಜಿಲ್ಲೆಯ ಗಾರ್ಮೆಂಟ್ಸ್‌ ಉದ್ಯಮದ ಮೇಲೆ ಪರಿಣಾಮ ಬೀರಿಲ್ಲ. ಆದರೆ, ಪತ್ರಿಕೆ, ಟಿ.ವಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ‘ಕಂಪನಿಗಳಲ್ಲಿ ಉದ್ಯೋಗ ಕಡಿತ’ದ ಸುದ್ದಿಯಿಂದ ನೌಕರರಲ್ಲಿ ಉದ್ಯೋಗ ಕಳೆದುಕೊಳ್ಳುವ ಭೀತಿ ಎದುರಾಗಿದೆ.

ನಗರದ ಕೈಗಾರಿಕಾ ಪ್ರದೇಶದಲ್ಲಿ ಗಾರ್ಮೆಂಟ್ಸ್‌, ಗ್ರಾನೈಟ್ಸ್‌, ಕಾಫಿ ಕ್ಯೂರಿಂಗ್‌, ಬಿಯರ್‌ ತಯಾರಿಕೆಯಂತಹ ಕಂಪನಿಗಳು ಇವೆ. ಸಿದ್ಧ ಉಡುಪು ತಯಾರಿಕಾ ಉದ್ಯಮದಲ್ಲಿ ನಿಗದಿಯಂತೆ ಮರ್ನಾಲ್ಕು ಪಾಳಿಗಳಲ್ಲಿ ಕೆಲಸ ನಡೆಯುತ್ತಿದೆ. ಹಿಮತ್‌ ಸಿಂಗ್‌, ಜಾಕಿ ಕಂಪನಿಗಳು ಹೊಸದಾಗಿ ನೌಕರರನ್ನು ನೇಮಕಾತಿ ಮಾಡಿಕೊಳ್ಳುತ್ತಿವೆ. ಇನ್ನು ಕೆಲ ಕಾರ್ಖಾನೆಗಳು ಇರುವ ನೌಕರರಿಂದಲೇ ಕೆಲಸ ತೆಗೆಸಿಕೊಳ್ಳುತ್ತಿವೆ.

ಸಿದ್ಧ ಉಡುಪು ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಹಿಮತ್‌ ಸಿಂಗ್‌ ಕಾ ದಲ್ಲಿ 4,500, ಜಾಕಿಯಲ್ಲಿ 3 ಸಾವಿರ, ಗೋಕುಲ್‌ ದಾಸ್‌ನಲ್ಲಿ 2500 ಹಾಗೂ ಸಾಯಿ ಎಕ್ಸ್‌ಪೋರ್ಟ್‌ನಲ್ಲಿ 1,200 ರಾಜ್ಯ ಹಾಗೂ ಹೊರ ರಾಜ್ಯದ ನೌಕರರು ಬದುಕು ಕಟ್ಟಿಕೊಂಡಿದ್ದಾರೆ. ಸಾವಿರಾರು ಜನರಿಗೆ ಉದ್ಯೋಗ ನೀಡಿ ಅವರ ಜೀವನ ಮಟ್ಟ ಸುಧಾರಣೆಗೆ ಕಾರಣವಾಗಿರುವ ಈ ಕಂಪನಿಗಳಿಗೆ ಆರ್ಥಿಕ ಹಿಂಜರಿತ ಬಿಸಿ ಅಷ್ಟಾಗಿ ತಟ್ಟಿಲ್ಲ.

ಈ ಕಂಪನಿಗಳಲ್ಲಿ ತಯಾರಿಸುವ ದಿಂಬಿನ ಕವರ್‌, ಒಳ ಉಡುಪುಗಳು, ಜಾಕೆಟ್‌, ಬೆಡ್‌ಶಿಟ್‌, ಬ್ಲಾಂಕೆಟ್‌, ಚಡ್ಡಿ, ಟಿ ಶರ್ಟ್‌, ಟವಲ್‌, ಸಿಲ್ಕ್‌ ಉತ್ಪನ್ನಗಳನ್ನು ವಿದೇಶಕ್ಕೆ ರಫ್ತು ಮಾಡಲಾಗುತ್ತದೆ. ಸಿದ್ದಪಡಿಸಿರುವ ಬಟ್ಟೆಗಳನ್ನು ಪ್ರತಿಷ್ಠಿತ ಬ್ಯ್ಯಾಂಡ್‌ ಕಂಪನಿಗಳು ಖರೀದಿಸುತ್ತಿವೆ. ಅವುಗಳಿಂದ ಬೇಡಿಕೆಯೂ ಕಡಿಮೆಯಾಗಿಲ್ಲ.

‘ವಿದೇಶದಲ್ಲಿ ಗಾರ್ಮೆಂಟ್ಸ್‌ ಉದ್ಯಮಕ್ಕೆ ಹೊಡೆತ ಬಿದ್ದಿಲ್ಲ. ಹೊರ ರಾಜ್ಯ ಹಾಗೂ ವಿದೇಶಿ ಕಂಪನಿಗಳಿಂದ ಆರ್ಡರ್‌ ಕಡಿಮೆಯಾಗಿಲ್ಲ. ಹೊಸ ಬಟ್ಟೆ ಸಿದ್ಧಪಡಿಸುವ ಪ್ರಮಾಣವೂ ಅಷ್ಟೇ ಇದೆ. ಆಟೊಮೊಬೈಲ್‌ ಕ್ಷೇತ್ರಕ್ಕೆ ಸಾಕಷ್ಟು ಹೊಡೆತ ಬಿದ್ದಿದೆ. ಉದ್ಯಮ ಅಂದ ಮೇಲೆ ಒಂದಕ್ಕೊಂದು ಲಿಂಕ್‌ ಇರುತ್ತದೆ. ಮುಂದಿನ ದಿನಗಳಲ್ಲಿ ಗಾರ್ಮೆಂಟ್ಸ್‌ ಉದ್ಯಮಕ್ಕೂ ಆರ್ಥಿಕ ಬಿಸಿ ತಟ್ಟಬಹುದು’ ಎಂದು ಗಾರ್ಮೆಂಟ್ಸ್‌ ಕಂಪನಿಯ ಅಧಿಕಾರಿಯೊಬ್ಬರು ಆತಂಕ ವ್ಯಕ್ತಪಡಿಸಿದರು.

‘ಗ್ರಾಹಕ ವಸ್ತುಗಳನ್ನು ಕೊಂಡುಕೊಳ್ಳುವವರೆಗೂ ವ್ಯವಹಾರ ಉತ್ತಮವಾಗಿಯೇ ನಡೆಯುತ್ತಿರುತ್ತದೆ. ಉತ್ಪನ್ನಗಳು ಖರ್ಚಾಗದೆ ಉಳಿದಾಗ ಸಮಸ್ಯೆ ಎದುರಾಗುತ್ತದೆ. ಸರ್ಕಾರ ಸ್ಥಳೀಯವಾಗಿ ನೀರು, ವಿದ್ಯುತ್‌ ಸಮಸ್ಯೆ, ರಸ್ತೆ ಹಾಗೂ ಇತರ ಸೌಲಭ್ಯ ಕಲ್ಪಿಸಿದರೆ ಸಾಕು’ ಎನ್ನುತ್ತಾರೆ ಅವರು.

‘ಪ್ರತಿನಿತ್ಯ ಟಿ.ವಿ. ಪತ್ರಿಕೆಗಳಲ್ಲಿ ಉದ್ಯೋಗ ಕಡಿತ ಸುದ್ದಿ ನೋಡಿ ಕಂಪನಿಯವರು ಕೆಲಸದಿಂದ ಯಾವಾಗ ತೆಗೆದು ಹಾಕುತ್ತಾರೆ ಎಂಬ ಭಯ ಕಾಡುತ್ತಿದೆ. ದಿನನಿತ್ಯ ಕಾರ್ಖಾನೆಯಲ್ಲಿ 3–4 ಪಾಳಿಯಲ್ಲಿ ಕೆಲಸ ನಡೆಯುತ್ತಿದೆ. ಹೊಸದಾಗಿ ನೌಕರರನ್ನು ಕೆಲಸಕ್ಕೆ ತೆಗೆದುಕೊಳ್ಳುತ್ತಿರುವುದು ಸ್ವಲ್ಪ ಸಮಾಧಾನ ತಂದಿದೆ’ ಎಂದು ಹಿಮತ್‌ ಸಿಂಗ್‌ ಕಾ ಹಾಗೂ ಜಾಕಿ ಕಂಪನಿಯ ಕಾರ್ಮಿಕರು ನಿಟ್ಟಿಸಿರುಬಿಟ್ಟರು.

‘ಆರ್ಥಿಕ ಹಿಂಜರಿತ ಕಾರಣಕ್ಕೆ ಕೈಗಾರಿಕಾ ಪ್ರದೇಶದಲ್ಲಿನ ಗಾರ್ಮೆಂಟ್ಸ್‌ ಕಾರ್ಖಾನೆಗಳಿಂದ ನೌಕರರನ್ನು ಕೆಲಸದಿಂದ ತೆಗೆದು ಹಾಕಿರುವ ಬಗ್ಗೆ ದೂರುಗಳು ಬಂದಿಲ್ಲ. ಎಂದಿನಂತೆ ಕಾರ್ಖಾನೆಗಳು ಕೆಲಸ ನಿರ್ವಹಿಸುತ್ತಿವೆ’ ಎಂದು ಕಾರ್ಮಿಕ ಮುಖಂಡ ಎಂ.ಸಿ.ಡೋಂಗ್ರೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT