ಶನಿವಾರ, ಸೆಪ್ಟೆಂಬರ್ 18, 2021
23 °C
ಸಮಾವೇಶದಲ್ಲಿ ಕಾರ್ಯಕರ್ತರಿಗೆ ಶಾಸಕ ಎಚ್‌.ಡಿ. ರೇವಣ್ಣ ಕರೆ

ಜೆಡಿಎಸ್‌ ಅಧಿಕಾರಕ್ಕೆ ತರಲು ಶ್ರಮಿಸಿ: ರೇವಣ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ‘ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಿಸುವ ಮೂಲಕ 2023ಕ್ಕೆ ಜೆಡಿಎಸ್‌ ಸ್ವಾತಂತ್ರ್ಯವಾಗಿ ಅಧಿಕಾರಕ್ಕೆ ತರಲು ಕಾರ್ಯಕರ್ತರು ಶ್ರಮಿಸಬೇಕು’ ಎಂದು ಶಾಸಕ ಎಚ್‌.ಡಿ. ರೇವಣ್ಣ ಕಾರ್ಯಕರ್ತರಿಗೆ ಕರೆ ನೀಡಿದರು.

ನಗರದ ಜ್ಞಾನಾಕ್ಷಿ ಕಲ್ಯಾಣ ಮಂಟಪದಲ್ಲಿ ಗುರುವಾರ ಆಯೋಜಿ ಸಿದ್ದ ಜೆಡಿಎಸ್‌ ಕಾರ್ಯಕರ್ತರ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಆಯಾ ಕ್ಷೇತ್ರಗಳಿಗೆ ಬಂದು ಜನಾಭಿಪ್ರಾಯ ಸಂಗ್ರಹಿಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಯಾರನ್ನೇ ಅಭ್ಯರ್ಥಿ ಯಾಗಿ ಆಯ್ಕೆ ಮಾಡಿದರೂ ವ್ಯಕ್ತಿ ಮುಖ್ಯ ಅಲ್ಲ, ಪಕ್ಷ ಮುಖ್ಯ ಎಂದು ತಿಳಿದು ಕಾರ್ಯಕರ್ತರು ಪಕ್ಷ ಸಂಘಟನೆ ಮಾಡಬೇಕು’ ಎಂದು ಸಲಹೆ ನೀಡಿದರು.

‘ಜೆಡಿಎಸ್ ಅಧಿಕಾರದಲ್ಲಿದ್ದಾಗ ಜಿಲ್ಲೆ ಹಾಗೂ ಹಾಸನ ನಗರಕ್ಕೆ ಏನು ಕೊಡುಗೆ ನೀಡಿದೆ ಎಂಬುದನ್ನು ಕಾರ್ಯಕರ್ತರು ಜನರಿಗೆ ಹೇಳಬೇಕು. ಇಂದು ರಾಜ್ಯದಲ್ಲಿ ಲೂಟಿಕೋರರ ಕೈಲಿ ಸರ್ಕಾರ ಇದೆ. ಎಲ್ಲಾ ಕಡೆ ಭ್ರಷ್ಟಾಚಾರ ಹೆಚ್ಚಾಗಿದೆ. ಹಿಂದೆ ಸಿಎಂ ಆಗಿದ್ದ ಯಡಿಯೂರಪ್ಪ ಅವರು ಯಾವ ರೀತಿಯ ಆಡಳಿತ ನೀಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ’ ಎಂದರು.

‘ನಗರದಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಇತ್ತೀಚೆಗೆ ಕೇಂದ್ರ ಸಚಿವರನ್ನು ಭೇಟಿ ಮಾಡಿ ಅನೇಕ ರೈಲ್ವೆ ಯೋಜನೆಗಳನ್ನು ಅನುಮೋದನೆ ಮಾಡಿಕೊಂಡು ಬರಲಾಗಿದೆ. ಎಚ್‌.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ರಾಜ್ಯದ ರೈತರ ಸಾಲ ಮನ್ನಾ ಮಾಡಿದರು. ತೆಂಗು, ಅಡಿಕೆ ಬೆಳೆಗಾರರಿಗೆ ಪರಿಹಾರ ನೀಡಲಾಯಿತು. ಆಲೂಗಡ್ಡೆಗೆ ಸಬ್ಸಿಡಿ ನೀಡಲಾಯಿತು. ಹಾಸನ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಏನೆಲ್ಲಾ ನಡೆಯುತ್ತಿದೆ ಎಂಬುದನ್ನು ಸಮಯ ಬಂದಾಗ ಬಿಚ್ಚಿಡುತ್ತೇನೆ. ಇದನ್ನೆಲ್ಲಾ ಕಾರ್ಯಕರ್ತರು ಜನರಿಗೆ ಹೇಳಬೇಕು’ ಎಂದು ಹೇಳಿದರು.

ಶಾಸಕ ಕೆ.ಎಸ್.ಲಿಂಗೇಶ್ ಮಾತ ನಾಡಿ, ‘ಕೇಂದ್ರ ಸರ್ಕಾರ ಸಾರ್ವ ಜನಿಕ ಸಂಸ್ಥೆಗಳನ್ನು ಖಾಸಗೀ ಕರಣ ಮಾಡುತ್ತಿದ್ದಾರೆ. ಅಗತ್ಯ ವಸ್ತುಗಳ ಬೆಲೆ ಗಗನಮುಖಿಯಾಗಿದೆ. ಸಂಸದ ಪ್ರಜ್ವಲ್ ರೇವಣ್ಣ ಅವರು ಸಂಸತ್ತಿನಲ್ಲಿ ಮೇಕೆದಾಟು ಸೇರಿ ಅನೇಕ ಸಮಸ್ಯೆಗಳ ಬಗ್ಗೆ ಗಮನಸೆಳೆದಿದ್ದಾರೆ‌. ಅ ಮೂಲಕ ಯುವಕರು ರಾಜಕೀಯಕ್ಕೆ ಬರಲು ಪ್ರೇರಣೆಯಾಗಿದ್ದಾರೆ’ ಎಂದರು.

‘ಬಸವರಾಜಬೊಮ್ಮಾಯಿ ದೇವೇಗೌಡರ ಆಶೀರ್ವಾದ ತೆಗೆದು ಕೊಂಡು ಸಹಕಾರ ಕೇಳಿದರು. ಆದರೆ, ಸ್ಥಳೀಯ ಶಾಸಕರು ಅದನ್ನು ಬೇರೆ ಬೇರೆ ಆಯಾಮದಲ್ಲಿ ದೊಡ್ಡ ಮಟ್ಟದಲ್ಲಿ ವಿರೋಧಿಸಿದರು. ಅದಕ್ಕೆ ನಾವು ಚುನಾವಣೆ ಮೂಲಕ ಉತ್ತರ ನೀಡಬೇಕು. ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸುವ ಆಕಾಂಕ್ಷಿಗಳು ಸೆ. 5 ಬಳಿಕ ಫಾರಂ ಭರ್ತಿ ಮಾಡಿ ಕಚೇರಿಗೆ ಸಲ್ಲಿಸಿ’ ಎಂದು ತಿಳಿಸಿದರು.

ಜೆಡಿಎಸ್‌ ಮುಖಂಡ ಕೆ.ಎಂ.ರಾಜೇಗೌಡ, ಮಾಜಿ ಶಾಸಕ ಬಿ.ವಿ. ಕರೀಗೌಡ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸೋಮನಹಳ್ಳಿ ನಾಗರಾಜ್, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎಚ್.ಪಿ.ಸ್ವರೂಪ್ ಮಾತನಾಡಿದರು.

ಡಿಸಿಸಿ ಬ್ಯಾಂಕ್‌ ನಿರ್ದೇಶಕ ಗಿರೀಶ್‌ ಚನ್ನವೀರಪ್ಪ, ಮಾಜಿ ಅಧ್ಯಕ್ಷ ಹೊನ್ನವಳ್ಳಿ ಸತೀಶ್‌, ಮುಖಂಡ ದೇವ್‌, ನಗರಸಭೆ ಸದಸ್ಯರಾದ ಪ್ರಶಾಂತ್ ನಾಗರಾಜ್, ಅಕ್ಬರ್, ಸಿ.ಆರ್.ಶಂಕರ್ ಹಾಗೂ ಇತರರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.