ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಲೂರು | ಸಂಜೆ ಬಸ್‌ ಸೌಲಭ್ಯ ಇಲ್ಲದೆ ಪರದಾಟ

ಆಲೂರಿನಲ್ಲಿ ಕಾಡಾನೆ ಹಾವಳಿ ಹೆಚ್ಚಳದಿಂದ ವಿದ್ಯಾರ್ಥಿಗಳು, ಜನರಲ್ಲಿ ಆತಂಕ– ಬಸ್‌ ಸೌಲಭ್ಯಕ್ಕೆ ಒತ್ತಾಯ
ಎಂ.ಪಿ. ಹರೀಶ್
Published 30 ಜನವರಿ 2024, 5:54 IST
Last Updated 30 ಜನವರಿ 2024, 5:54 IST
ಅಕ್ಷರ ಗಾತ್ರ

ಆಲೂರು: ತಾಲ್ಲೂಕಿನಲ್ಲಿ ಕಾಡಾನೆ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಜನರು ಭೀತಿಯಲ್ಲಿಯೇ ಓಡಾಡುವಂತಾಗಿದೆ. ಅದರಲ್ಲಿಯೂ ಸಂಜೆಯ ವೇಳೆ ಮನೆಗೆ ತೆರಳುವವರಿಗೆ ಬಸ್‌ ಸೌಲಭ್ಯ ಇಲ್ಲದೇ ಆತಂಕದಲ್ಲಿಯೇ ಈ ರಸ್ತೆಯಲ್ಲಿ ಸಂಚರಿಸಬೇಕಾಗಿದೆ.

ಪಾಳ್ಯ ಹೋಬಳಿಯಲ್ಲಿ ವಾರದಿಂದ ಆನೆಗಳ ಉಪಟಳ ಹೆಚ್ಚಾಗಿದ್ದು, ಸೋಮವಾರ ಸಂಜೆ ತಾಳೂರು ವ್ಯಾಪ್ತಿಯಲ್ಲಿ ಕಾಡಾನೆಯೊಂದು ರಸ್ತೆ ದಾಟಿದೆ. ಇದರಿಂದಾಗಿ ಕಾರು ಮತ್ತು ಬೈಕ್‌ನಲ್ಲಿ ತೆರಳುತ್ತಿದ್ದವರು ಕೆಲಕಾಲ ಭಯಭೀತರಾಗಿದ್ದರು. ಸಂಜೆ 6 ಗಂಟೆಗೆ ಆಲೂರು ಬಸ್ ನಿಲ್ದಾಣದಿಂದ ಬಿಕ್ಕೋಡು ಮಾರ್ಗವಾಗಿ ಬೇಲೂರಿಗೆ ಬಸ್‌ ಇಲ್ಲದೇ ಇರುವುದರಿಂದ ನಿತ್ಯ ಪ್ರಾಣವನ್ನು ಕೈಯಲ್ಲಿ ಹಿಡಿದುಕೊಂಡು ಹೋಗಬೇಕಾಗಿದೆ ಎಂದು ಜನರು ಅಳಲು ತೋಡಿಕೊಂಡರು.

ಆಲೂರಿನಿಂದ ಬಿಕ್ಕೋಡು ಮಾರ್ಗವಾಗಿ ಬೇಲೂರಿಗೆ ಹೋಗಲು ಸಂಜೆ 5 ಗಂಟೆಗೆ ಮೈಸೂರಿನಿಂದ ಅರೇಹಳ್ಳಿಗೆ ಹೋಗುವ ಬಸ್‌, ಕಣತೂರು-ಕೆಸಗೋಡು-ಬಿಕ್ಕೋಡು ಮಾರ್ಗವಾಗಿ ಅರೇಹಳ್ಳಿಗೆ ಹೋಗಿ ತಂಗುವ ಬಸ್‌ ಇವೆ. 5 ಗಂಟೆಯ ನಂತರ ಈ ಮಾರ್ಗದಲ್ಲಿ ಬಸ್ ಸಂಚಾರವಿಲ್ಲ. ಹೀಗಾಗಿ ಅನಿವಾರ್ಯವಾಗಿ ಬೈಕ್‌, ಟಂಟಂ, ಆಟೋಗಳ ಮೂಲಕ ಊರು ಸೇರುವಂತಾಗಿದೆ. ಆದರೆ, ರಾತ್ರಿ ವೇಳೆ ಕಾಡಾನೆಗಳು ಎದುರಾದರೆ, ನಮ್ಮ ಗತಿ ಏನು ಎನ್ನುವ ಆತಂಕ ನಿತ್ಯ ನಮ್ಮನ್ನು ಕಾಡುತ್ತಿದೆ ಎಂದು ಜನರು ಹೇಳುತ್ತಿದ್ದಾರೆ.

ಕೋವಿಡ್‌–19 ಗಿಂತ ಮೊದಲು ಈ ಮಾರ್ಗದಲ್ಲಿ ಅರಸೀಕರೆ-ಮೂಡಿಗೆರೆ ಬಸ್‌ ಓಡಾಡುತ್ತಿತ್ತು. ಆಲೂರಿಗೆ ಸಂಜೆ 6 ಗಂಟೆಗೆ ಬರುತ್ತಿದ್ದ ಬಸ್‌ನಿಂದಾಗಿ, ಶಾಲಾ– ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಕಚೇರಿಗಳಲ್ಲಿ ಕೆಲಸ ಮುಗಿದ ನಂತರ ಓಡಾಡಲು ಅನುಕೂಲವಾಗಿತ್ತು. ಕೋವಿಡ್‌–19 ಮುಗಿದ ನಂತರ ಈ ಬಸ್‌ ಸಂಚಾರ ಆರಂಭವಾಗಿಲ್ಲ.

ಈಗ ಕಾಡಾನೆಗಳ ಉಪಟಳದಿಂದ ಜನರು ತಿರುಗಾಡಲು ಭಯಭೀತರಾಗಿದ್ದು, ಆಲೂರು ಬಸ್ ನಿಲ್ದಾಣದಿಂದ ಸಂಜೆ 6 ಗಂಟೆಗೆ ಬಿಕ್ಕೋಡು-ಬೇಲೂರು ಮಾರ್ಗವಾಗಿ ಬಸ್‌ ಓಡಿಸಲು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಬಿಕ್ಕೋಡು, ಬೇಲೂರು ಮತ್ತು ಸುತ್ತಲಿನ 50 ಕ್ಕೂ ಹೆಚ್ಚು ಹಳ್ಳಿಗಳಿಂದ ಪ್ರತಿದಿನ ಶಾಲಾ– ಕಾಲೇಜು ಮತ್ತು ಕಚೇರಿಗಳಿಗೆ ವಿದ್ಯಾರ್ಥಿಗಳು, ಸಾರ್ವಜನಿಕರು ಆಲೂರಿಗೆ ಬರುತ್ತಾರೆ. ಸಂಜೆ 5 ರ ನಂತರ ಬಸ್‌ ಇಲ್ಲದಿರುವುದರಿಂದ ಕಾಡಾನೆಗಳ ಉಪಟಳದಿಂದ ಓಡಾಡಲು ಭಯದ ವಾತಾವರಣ ನಿರ್ಮಾಣವಾಗಿದೆ ಎನ್ನುವುದು ಜನರು ಹೇಳುವ ಮಾತು.

ಸಂಜೆ 6 ಗಂಟೆಗೆ ಆಲೂರು ಬಸ್ ನಿಲ್ದಾಣದಿಂದ ಬಿಕ್ಕೋಡು-ಬೇಲೂರು ಮಾರ್ಗವಾಗಿ ಬಸ್ ಸಂಚಾರ ಆರಂಭಿಸಬೇಕು. ಸುರಕ್ಷಿತವಾಗಿ ಮನೆ ತಲುಪಲು ಅನುಕೂಲ ಮಾಡಿಕೊಡಬೇಕು
ಕೆ.ಎಸ್. ಮಂಜುನಾಥ್, ಕಾಲೇಜು ವಿದ್ಯಾರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT