ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಅರಕಲಗೂಡು | ಮರೆಯಾಗುತ್ತಿರುವ ಆಲೂಗಡ್ಡೆ ಕೃಷಿ

10 ಸಾವಿರ ಹೆಕ್ಟೇರ್‌ನಿಂದ 700 ಹೆಕ್ಟೇರ್‌ಗೆ ಕುಸಿದ ಚಟುವಟಿಕೆ
Published 3 ಜೂನ್ 2024, 9:10 IST
Last Updated 3 ಜೂನ್ 2024, 9:10 IST
ಅಕ್ಷರ ಗಾತ್ರ

ಅರಕಲಗೂಡು: ತಾಲ್ಲೂಕಿನಲ್ಲಿ ಪ್ರಮುಖ ವಾಣಿಜ್ಯ ಬೆಳೆ ಆಲೂಗಡ್ಡೆ ಕೃಷಿ ದಿನೇ, ದಿನೇ ಕ್ಷೀಣಿಸುತ್ತಿದ್ದು, ತಾಲ್ಲೂಕಿನಿಂದಲೇ ಮರೆಯಾಗುವ ಹಂತ ಎದುರಾಗಿದೆ.

1980-90 ರ ದಶಕದಲ್ಲಿ ತಾಲ್ಲೂಕಿನ ಕಸಬಾ, ದೊಡ್ಡಮಗ್ಗೆ ಹಾಗೂ ಮಲ್ಲಿಪಟ್ಟಣ ಹೋಬಳಿಯ ಕೆಲ ಭಾಗದಲ್ಲಿ ಮುಂಗಾರು ಹಂಗಾಮಿನಲ್ಲಿ ಆಲೂಗಡ್ಡೆಯದ್ದೇ ಮೇಲಾಟ. ಬಂದರೆ ಅತ್ಯಧಿಕ ಲಾಭ, ಇಲ್ಲದಿದ್ದರೆ ಹಾಕಿದ ಬಂಡವಾಳವೂ ದೊರೆಯದೇ ರಸ್ತೆಯಲ್ಲಿ ಆಲೂಗಡ್ಡೆ ಚೆಲ್ಲಿ ಬರುವ ಸ್ಥಿತಿ.

ರೈತರ ಬಾಯಲ್ಲಿ ‘ಜೂಜಿನ ಬೆಳೆ’ ಎಂದು ಹೆಸರಾಗಿದ್ದ ಆಲೂಗಡ್ಡೆಯನ್ನು ಬೆಳೆಯುವುದೇ ಪ್ರತಿಷ್ಠೆ ಎನಿಸಿತ್ತು. ಇಂತಿಷ್ಟು ಎಕರೆಯಲ್ಲಿ ಆಲೂಗಡ್ಡೆ ಬೆಳೆ ಮಾಡಿದ್ದೇನೆ ಎಂದು ರೈತರು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದ ಕಾಲವಿತ್ತು.

ತಾಲ್ಲೂಕಿನ ಮೂರು ಹೋಬಳಿಗಳ ವ್ಯಾಪ್ತಿಯಲ್ಲಿ 10 ಸಾವಿರ ಹೆಕ್ಟೇರ್‌ಗೂ ಹೆಚ್ಚಿನ ಪ್ರದೇಶದಲ್ಲಿ ಬೆಳೆಯುತ್ತಿದ್ದು, ಇಂದು 600 ರಿಂದ 700 ಹೆಕ್ಟೇರ್‌ಗೆ ಕುಸಿದಿದೆ. ಈ ಬೆಳೆ ಕುರಿತು ರೈತರಲ್ಲಿ ಯಾವುದೇ ಆಸಕ್ತಿ ಉಳಿದಿಲ್ಲ. ಆಲೂಗಡ್ಡೆ ಬಗ್ಗೆ ಭಾವನಾತ್ಮಕ ನಂಟು ಹೊಂದಿರುವ ಕೆಲವೇ ರೈತರು ಮಾತ್ರ ಈ ಕೃಷಿಯನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ.

ಒಂದೊಮ್ಮೆ ರೈತರ ಆರ್ಥಿಕ ಶಕ್ತಿ ವೃದ್ಧಿಸಲು ನೆರವಾಗಿದ್ದ ಈ ಬೆಳೆ ಗುಣಮಟ್ಟದ ಬಿತ್ತನೆ ಬೀಜದ ಕೊರತೆ, ರೋಗ ಬಾಧೆ, ಹೆಚ್ಚಿದ ಕೃಷಿ ವೆಚ್ಚ, ಬೆಳೆದ ಬೆಳೆಗೆ ದೊರಕದ ದರ, ಮಾರುಕಟ್ಟೆ ಸೌಲಭ್ಯ ಇಲ್ಲದಿರುವುದು, ಸರ್ಕಾರ ನೀಡುತ್ತಿದ್ದ ಪ್ರೋತ್ಸಾಹದ ನಿಲುಗಡೆ, ಹವಾಮಾನದ ಬದಲಾವಣೆ, ಕುಂಠಿತಗೊಂಡ ಇಳುವರಿ ಹೀಗೆ ಹತ್ತು ಹಲವು ಕಾರಣಗಳು ರೈತರು ಈ ಕೃಷಿಯಿಂದ ವಿಮುಖರಾಗಲು ಕಾರಣವಾಗಿದೆ.

ಆಲೂಗಡ್ಡೆ ಕೃಷಿಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಸರ್ಕಾರ ವಿಶೇಷ ಪ್ಯಾಕೇಜ್ ಯೋಜನೆಯೊಂದನ್ನು ರೂಪಿಸಿ ಪ್ರೋತ್ಸಾಹ ನೀಡಿತ್ತು. ಆದರೆ ಬದಲಾದ ರಾಜಕೀಯ ಸನ್ನಿವೇಶಗಳು, ಸರ್ಕಾರಗಳ ನಿರಾಸಕ್ತಿಯಿಂದ ಇದು ರದ್ದುಗೊಂಡಿರುವುದು, ಕಡಿಮೆ ಕೃಷಿ ವೆಚ್ಚದ ಮುಸುಕಿನ ಜೋಳದ ಕೃಷಿ ರೈತರನ್ನು ಆಕರ್ಷಿಸಿರುವುದೂ ಆಲೂಗಡ್ಡೆ ಕೃಷಿಯಿಂದ ಹಿಂದೆ ಸರಿಯಲು ಕಾರಣವಾಗಿದೆ.

ಅಂಗಾಂಶ ಕೃಷಿ ಮೂಲಕ ಆಲೂಗಡ್ಡೆ ಕೃಷಿಯನ್ನು ಪ್ರೋತ್ಸಾಹಿಸುವ ಯೋಜನೆಯೂ ರೈತರನ್ನು ಆಕರ್ಷಿಸುವಲ್ಲಿ ವಿಫಲವಾಗಿದೆ. ಹೀಗಾಗಿ ತಾಲ್ಲೂಕಿನಲ್ಲಿ ಮುಂದಿನ ದಿನಗಳಲ್ಲಿ ಆಲೂಗಡ್ಡೆ ಕೃಷಿ ಕಣ್ಮರೆಯಾದರೂ ಅಚ್ಚರಿಯೇನಿಲ್ಲ ಎಂದು ರೈತರು ಹೇಳುತ್ತಿದ್ದಾರೆ.

ಬಿತ್ತನೆಗೆ ಸಿದ್ಧಗೊಳಿಸಿರುವ ಆಲೂಗಡ್ಡೆ
ಬಿತ್ತನೆಗೆ ಸಿದ್ಧಗೊಳಿಸಿರುವ ಆಲೂಗಡ್ಡೆ
ಅರಕಲಗೂಡು ತಾಲ್ಲೂಕಿನ ದೊಡ್ಡಮಗ್ಗೆಯಲ್ಲಿ ರೈತರೊಬ್ಬರು ಆಲೂಗಡ್ಡೆ ಬಿತ್ತನೆ ಕಾರ್ಯ ನಡೆಸಿರುವುದು
ಅರಕಲಗೂಡು ತಾಲ್ಲೂಕಿನ ದೊಡ್ಡಮಗ್ಗೆಯಲ್ಲಿ ರೈತರೊಬ್ಬರು ಆಲೂಗಡ್ಡೆ ಬಿತ್ತನೆ ಕಾರ್ಯ ನಡೆಸಿರುವುದು
ಡಿ. ರಾಜೇಶ್
ಡಿ. ರಾಜೇಶ್
ಸಿ.ಕಿಟ್ಟೇಗೌಡ
ಸಿ.ಕಿಟ್ಟೇಗೌಡ

ಭಾವನಾತ್ಮಕ ನಂಟು ಹೊಂದಿರುವ ಕೆಲವೇ ರೈತರಿಂದ ಆಲೂಗಡ್ಡೆ ಕೃಷಿ ಸ್ಥಗಿತಗೊಂಡ ಸರ್ಕಾರ ವಿಶೇಷ ಪ್ಯಾಕೇಜ್: ಆಕರ್ಷಿಸದ ಅಂಗಾಂಶ ಕೃಷಿ ಒಂದು ಕಾಲದಲ್ಲಿ ತಾಲ್ಲೂಕಿನ ಪ್ರತಿಷ್ಠೆಯ ಬೆಳೆಯಾಗಿದ್ದ ಆಲೂಗಡ್ಡೆ

ಆಲೂಗಡ್ಡೆ ಬೆಳೆಯನ್ನು ತಾಲ್ಲೂಕಿನ ರೈತರು ಪಾರಂಪರಿಕವಾಗಿ ಬೆಳೆಯುತ್ತಿದ್ದು ಬದಲಾದ ಹವಮಾನ ಪರಿಸ್ಥಿತಿಗಳಿಂದಾಗಿ ಬೆಳೆ ವಿಸ್ತೀರ್ಣವು ಕ್ಷೀಣಿಸುತ್ತಿದೆ.

-ಡಿ. ರಾಜೇಶ್ ಹಿರಿಯ ಸಹಾಯಕ ತೋಟಗಾರಿಕೆ ಅಧಿಕಾರಿ

ರೋಗ ಬಾಧೆ ಬೆಲೆ ಕುಸಿತ ಸರಿಯಾದ ಮಾರುಕಟ್ಟೆ ವ್ಯವಸ್ಥೆ ಇಲ್ಲದಿರುವುದು ಬದಲಾದ ಹವಾಮಾನ ಆಲೂಗಡ್ಡೆ ಬೆಳೆ ಬಗ್ಗೆ ರೈತರ ನಿರಾಸಕ್ತಿಗೆ ಕಾರಣವಾಗಿದೆ.

-ಸಿ.ಕಿಟ್ಠೇಗೌಡ ಚಿಕ್ಕಗಾವನಹಳ್ಳಿ ಗ್ರಾಮದ ಕೃಷಿಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT