ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಗೆ 500 ಹಾಸಿಗೆ ನೀಡಲು ಸಿದ್ಧ: ವಿಧಾನ ಪರಿಷತ್‌ ಸದಸ್ಯ ಎಂ.ಎ. ಗೋಪಾಲಸ್ವಾಮಿ

ಉಸ್ತುವಾರಿ ಸಚಿವರು ತುರ್ತು ಸಭೆ ಕರೆಯಲಿ: ಗೋಪಾಲಸ್ವಾಮಿ ಆಗ್ರಹ
Last Updated 20 ಜುಲೈ 2020, 13:41 IST
ಅಕ್ಷರ ಗಾತ್ರ

ಹಾಸನ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ರೋಗಿಗಳ ಚಿಕಿತ್ಸೆಗಾಗಿ ಕೆಪಿಸಿಸಿ ವತಿಯಿಂದ 500 ಹಾಸಿಗೆ ನೀಡಲು ಸಿದ್ಧ ಎಂದು ವಿಧಾನ ಪರಿಷತ್‌ ಸದಸ್ಯ ಎಂ.ಎ. ಗೋಪಾಲಸ್ವಾಮಿ ಹೇಳಿದರು.

ಬೆಂಗಳೂರು, ಮುಂಬೈ ಭಾಗದಿಂದ ನಿತ್ಯ ಜನರು ಜಿಲ್ಲೆಗೆ ಬರುತ್ತಿದ್ದಾರೆ. ಹಾಗಾಗಿ ಸೋಂಕಿತರ ಸಂಖ್ಯೆ ಏರಿಕೆ ಆಗುತ್ತಿದೆ. ತಿಂಗಳಾಂತ್ಯಕ್ಕೆ ಸೋಂಕಿತರ ಸಂಖ್ಯೆ ಸಾವಿರ ದಾಟಲಿದೆ ಎಂದು ತಜ್ಞರು ಹೇಳಿದ್ದಾರೆ. ಕೋವಿಡ್‌ ಆಸ್ಪತ್ರೆಯಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲು 400 ಹಾಸಿಗೆ ಇದೆ. ಆದ್ದರಿಂದ ತಾಲ್ಲೂಕು ಆಸ್ಪತ್ರೆಗಳಲ್ಲಿಯೇ ರೋಗ ಲಕ್ಷಣ ಇಲ್ಲದ ಸೋಂಕಿತರಿಗೆ ಚಿಕಿತ್ಸೆ ಸಿಗುವಂತಾಗಬೇಕು. ಅದಕ್ಕಾಗಿ ವೈದ್ಯರಿಗೆ ತರಬೇತಿ ನೀಡಿ, ಸಿದ್ಧತೆ ಕೈಗೊಳ್ಳಬೇಕು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ತಾಲ್ಲೂಕು ಆಸ್ಪತ್ರೆಗಳಲ್ಲಿ ವೆಂಟಿಲೇಟರ್‌ಗಳ ಕೊರತೆ ಇದೆ. ಆಸ್ಪತ್ರೆಗಳಿಗೆ ಸೌಕರ್ಯ ಕಲ್ಪಿಸುವುದು ಸರ್ಕಾರದ ಜವಾಬ್ದಾರಿ. ಸರ್ಕಾರದ ಬಳಿ ಹಣವಿಲ್ಲವೆಂದು ಹೇಳಿದರೆ ನಮ್ಮ ಕೈಲಾದ ಸಹಕಾರ ನೀಡಲು ಸಿದ್ಧ. ₹1,200ಕ್ಕೆ ಹಾಸಿಗೆ, ಮಂಚ ಸಿಗಲಿದೆ. ಆಕ್ಸಿಜನ್ ಕಿಟ್‌, ವೆಂಟಿಲೇಟರ್‌ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದರು.

ಕೋವಿಡ್‌ ಸಾಮಗ್ರಿ ಖರೀದಿಯಲ್ಲಿ ನಡೆದಿರುವ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹಾಗೂ ಶಾಸಕಾಂಗ ಪಕ್ಷದ ನಾಯಕ ಸಿದ್ಧರಾಮಯ್ಯ ಹೋರಾಟ ಮಾಡುತ್ತಿದ್ದಾರೆ. ಅವರ ಮಾರ್ಗದರ್ಶನದಂತೆ ಜಿಲ್ಲೆಯಲ್ಲಿಯೂ ಪ್ರತಿಭಟನೆ ಮಾಡಲಾಗುವುದು ಎಂದು ಹೇಳಿದರು.

ಚನ್ನರಾಯಪಟ್ಟಣದಲ್ಲಿ ವಾರದಲ್ಲಿ ಮೂರು ದಿನ ವಹಿವಾಟಿಗೆ ಅವಕಾಶ ನೀಡಿದ ಪರಿಣಾಮ ಸೋಂಕಿತರ ಸಂಖ್ಯೆಯಲ್ಲಿ ಕಡಿಮೆ ಆಗಿದೆ. ಮೊದಲ ಜನರ ಸಂಚಾರ ಕಡಿಮೆ ಮಾಡಬೇಕು. ಜಿಲ್ಲೆಯಲ್ಲಿ ಸಂಪೂರ್ಣ ಲಾಕ್‌ಡೌನ್‌ ಮಾಡಿದರೆ ಸೋಂಕು ಕಡಿಮೆ ಆಗಬಹುದು. ರಾಜಕೀಯ ಬಿಟ್ಟು ಒಂದು ತೀರ್ಮಾನಕ್ಕೆ ಬರಬೇಕು. ಆರ್ಥಿಕ ಸ್ಥಿತಿ ಕುಸಿಯಲಿದೆ ಅಂದುಕೊಂಡು ಹಾಗೆಯೇ ಬಿಟ್ಟರೆ ಪ್ರಕರಣಗಳ ಸಂಖ್ಯೆ ಹೆಚ್ಚಾಗಲಿದೆ ಎಂದು ಎಚ್ಚರಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಅವರು ಕೂಡಲೇ ಜನಪ್ರತಿನಿಧಿಗಳು, ಅಧಿಕಾರಿಗಳ ಸಭೆ ಕರೆದು ಚರ್ಚಿಸಬೇಕು. ಸಭೆ ನಡೆಸಲು ಕಷ್ಟವಾದಲ್ಲಿ ವಿಡಿಯೊ ಸಂವಾದ ನಡೆಸಿ, ಮುಂದಿನ ನಿರ್ಧಾರಗಳನ್ನು ಪ್ರಕಟಿಸಬೇಕು. ನಾಗರಿಕರ ಜೀವ ಉಳಿಸುವ ಕಡೆ ಗಮನ ಹರಿಸಬೇಕು ಎಂದರು.

ಹಾಲಿನ ಖರೀದಿ ದರವನ್ನು ಒಕ್ಕೂಟ ಕಡಿಮೆ ಮಾಡಿದೆ. ಸರ್ಕಾರ ನೀಡುವ ಪ್ರೋತ್ಸಾಹ ಧನ ಸಹ ಹಾಲು ಉತ್ಪಾದಕರಿಗೆ ತಲುಪಿಲ್ಲ. ಫ್ರೂಟ್‌ ಆ್ಯಪ್‌ನಲ್ಲಿ ನೋಂದಣಿ ಮಾಡಲು ಸಾಕಷ್ಟು ತೊಂದರೆ ಆಗುತ್ತಿದೆ. ಬೆಣ್ಣೆ, ಹಾಲಿ ಪುಡಿ ಉಳಿಯುತ್ತಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT