ದರೋಡೆಗೆ ಹೊಂಚು ಹಾಕಿದ್ದ ನಾಲ್ವರ ಬಂಧನ, ಬಂಧಿತರು ಬೆಂಗಳೂರಿನ ವಿದ್ಯಾರ್ಥಿಗಳು
ಕೊಣನೂರು: ರಾತ್ರಿ ವೇಳೆ ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನಗಳನ್ನು ತಡೆದು, ಹೆದರಿಸಿ ದರೋಡೆಗೆ ಯತ್ನಿಸುತ್ತಿದ್ದ ನಾಲ್ವರನ್ನು ಕೊಣನೂರು ಪೊಲೀಸರು ಬಂಧಿಸಿದ್ದಾರೆ.
ಮಂಗಳವಾರ ರಾತ್ರಿ ಸುಮಾರು 12 ಗಂಟೆಯ ಸಮಯದಲ್ಲಿ ಕೊಣನೂರು- ಕುಶಾಲನಗರ ರಾಜ್ಯ ಹೆದ್ದಾರಿಯ ಸಿದ್ದಾಪುರದ ಬಳಿ ಯುವಕರು ದಾರಿ ಹೋಕರನ್ನು ಅಡ್ಡಹಾಕಿ ಆಯುಧ ತೋರಿಸಿ ಹೆದರಿಸಿ ದರೋಡೆ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂಬ ಮಾಹಿತಿಯ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿ 4 ಜನರನ್ನು ವಶಕ್ಕೆ ಪಡೆದಿದ್ದಾರೆ.
ಗುಂಪಿನಲ್ಲಿದ್ದ ಒಬ್ಬ ಪೊಲೀಸ್ ಜೀಪನ್ನು ಕಂಡ ತಕ್ಷಣ ಪರಾರಿಯಾಗಿದ್ದು, ಬೆಂಗಳೂರಿನ ನ್ಯಾಷನಲ್ ಕಾಲೇಜಿನ ಬಿ.ಕಾಂ ವಿದ್ಯಾರ್ಥಿ ನಿತಿನ್ ಗೌಡ (19) ಬೆಂಗಳೂರಿನ ಎಂಇ ಎಸ್ ಕಾಲೇಜಿನ ವಿದ್ಯಾರ್ಥಿ ಹೃತಿಕ್ (19), ಯಲಹಂಕದ ಮಲ್ಲಿಕಾರ್ಜುನ (19) ಮತ್ತು ಬೆಂಗಳೂರು ಅಮರತಹಳ್ಳಿ ಹರ್ಷಿತ್ (22) ಎಂಬುವವರನ್ನು ಬಂಧಿಸಲಾಗಿದೆ. ಪರಾರಿಯಾಗಿರುವ ವ್ಯಕ್ತಿ ಬೆಂಗಳೂರಿನ ಅಮೃತಹಳ್ಳಿಯ ರಾಜವರ್ಧನ್ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬಂಧಿತರು ತಮ್ಮ ಬಳಿ ಇಟ್ಟುಕೊಂಡಿದ್ದ ಮಚ್ಚು, ಚಾಕು, ಖಾರದ ಪುಡಿ ಪಾಕೆಟ್, ಸೇವಿಂಗ್ ಬ್ಲೇಡ್, ದೊಣ್ಣೆ ಮತ್ತು ಮಾರುತಿ ಸುಜುಕಿ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಂಧಿತರು ಹಣಕ್ಕಾಗಿ ರಸ್ತೆಯಲ್ಲಿ ಬರುವ ವಾಹನಗಳನ್ನು ಅಡ್ಡಹಾಕಿ ಮಾರಕಾಸ್ತ್ರಗಳನ್ನು ತೋರಿಸಿ ದರೋಡೆ ಮಾಡಲು ಪ್ರಯತ್ನಿಸುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ.
ಕೊಣನೂರು ಠಾಣೆಯ ಪಿಎಸ್ಐ ಅಜಯ್ ಕುಮಾರ್ ನೇತೃತ್ವದಲ್ಲಿ ಸಿಬ್ಬಂದಿ ಪ್ರಕಾಶ್, ಶಿವಕುಮಾರ್, ನಂದೀಶ್, ನವೀನ್ ಕುಮಾರ್ ಕಾರ್ಯಾಚರಣೆ ನಡೆಸಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.