ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಈಜಲು ಹೋದ ಮಕ್ಕಳು ಸಾವು: ಮುತ್ತಿಗೆಪುರದಲ್ಲಿ ಆವರಿಸಿದ ಸ್ಮಶಾನ ಮೌನ

ಎಂ.ಪಿ. ಹರೀಶ್‌
Published 17 ಮೇ 2024, 7:11 IST
Last Updated 17 ಮೇ 2024, 7:11 IST
ಅಕ್ಷರ ಗಾತ್ರ

ಆಲೂರು: ಮನೆಯಿಂದ ಕೆರೆಯ ದಡಕ್ಕೆ ಬಂದಿದ್ದ ಮಕ್ಕಳು, ಈಜಾಡಲು ಕೆರೆಗೆ ಇಳಿಯುತ್ತಿರುವುದನ್ನು ಗಮನಿಸಿದ ಸ್ಥಳೀಯರು, ಕೆರೆಗೆ ಇಳಿಯಬೇಡಿ ಎಂದು ಬೆದರಿಸಿ ಕಳುಹಿಸಿದ್ದರು. ಕೆರೆಯಲ್ಲಿ ಹೂಳಿದೆ, ಈಜುವುದು ಬೇಡ ಎಂದು ಬೈಯ್ದು ಕಳುಹಿಸಿದ್ದರು. ಆದರೆ, ಅವರ ಕಣ್ತಪ್ಪಿಸಿ ಕೆರೆಗೆ ಇಳಿದ ನಾಲ್ವರು ಮಕ್ಕಳು, ಇದೀಗ ಕೆರೆಯ ಹೂಳಿಗೆ ಸಿಲುಕಿ ಮೃತಪಟ್ಟಿದ್ದಾರೆ.

ಪೃಥ್ವಿರಾಜ್ (14), ವಿಶ್ವಾಸ್ (13), ಜೀವನ್(13) ಮತ್ತು ಸಾತ್ವಿಕ್ (13), ಒಬ್ಬರ ಹಿಂದೆ ಒಬ್ಬರು ನೀರಿಗೆ ಧುಮುಕಿದ್ದಾರೆ. ಆದರೆ, ಮೇಲೇಳದೇ ಇದ್ದುದನ್ನು ಗಮನಿಸಿದ ಜೊತೆಯಲ್ಲಿದ್ದ ಚಿರಾಗ್, ನೀರಿಗೆ ಧುಮುಕದೇ ವಾಪಸ್ ಗ್ರಾಮಕ್ಕೆ ಹಿಂದಿರುಗಿ ವಿಷಯ ತಿಳಿಸಿದ್ದಾನೆ.

ಕೂಡಲೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಎರಡು ವಾಹನಗಳಲ್ಲಿ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಕೆರೆಯಲ್ಲಿದ್ದ ಮೃತ ಬಾಲಕರ ಶವಗಳನ್ನು ಹೊರತೆಗೆದರು. ಮೃತಪಟ್ಟವರ ಕುಟುಂಬಗಳ ಆಕ್ರಂದನ ಮುಗಿಲು ಮುಟ್ಟಿತ್ತು. ಗ್ರಾಮದ ಜನರೂ ಮಕ್ಕಳ ಮೃತದೇಹಗಳನ್ನು ನೋಡಿ, ದುಃಖದಲ್ಲಿ ಮುಳುಗಿದ್ದರು. ಇಡೀ ಮುತ್ತಿಗೆಪುರ ಗ್ರಾಮದಲ್ಲಿ ನೀರವ ಮೌನ ಆವರಿಸಿತ್ತು.

ಕೆರೆಯಲ್ಲಿ ಕೇವಲ ಒಂದು ಅಡಿ ನೀರಿದ್ದು, ಸುಮಾರು 10 ಅಡಿ ಆಳದಷ್ಟು ಹೂಳು ತುಂಬಿದೆ. ಮಕ್ಕಳು ಕೆರೆಗೆ ಇಳಿದ ತಕ್ಷಣ ಹೂಳಿಗೆ ಸಿಲುಕು ಮೃತಪಟ್ಟಿವೆ ಎಂದು ಸ್ಥಳೀಯರು ಹೇಳಿದ್ದಾರೆ. ಘಟನಾ ಸ್ಥಳದಲ್ಲಿ ಸಾವಿರಾರು ಜನ ಸೇರಿದ್ದು, ಶೋಕದ ಮಡಿಲಲ್ಲಿ ಮುಳುಗಿದ್ದರು.

ಸ್ಥಳಕ್ಕೆ ಶಾಸಕ ಸಿಮೆಂಟ್ ಮಂಜು, ಜಿಲ್ಲಾಧಿಕಾರಿ ಸಿ.ಸತ್ಯಭಾಮಾ, ಉಪ ವಿಭಾಗಾಧಿಕಾರಿ ಡಾ.ಶ್ರುತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ, ಡಿವೈಎಸ್ಪಿ ಪ್ರಮೋದ್ ಕುಮಾರ್, ಮಾಜಿ ಶಾಸಕ ಎಚ್.ಕೆ. ಕುಮಾರಸ್ವಾಮಿ, ತಹಶೀಲ್ದಾರ್ ನಂದಕುಮಾರ್, ಸಬ್ ಇನ್‌ಸ್ಪೆಕ್ಟರ್ ಜನಾಬಾಯಿ ಕಡಪಟ್ಟಿ ಭೇಟಿ ನೀಡಿದ್ದು, ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದರು. ಸರ್ಕಾರದಿಂದ ದೊರಕುವ ಪರಿಹಾರವನ್ನು ದೊರಕಿಸಿ ಕೊಡಲಾಗುವುದು ಎಂದು ತಿಳಿಸಿದರು.

ಮಾಜಿ ಶಾಸಕ ಎಚ್.ಕೆ. ಕುಮಾರಸ್ವಾಮಿ ಪ್ರತಿಕ್ರಿಯಿಸಿ, ‘ಇಂದು ಸಂಭವಿಸಿರುವ ಘಟನೆ ಅತ್ಯಂತ ಘೋರವಾದದ್ದು. ಮೃತಪಟ್ಟಿರುವ ಮಕ್ಕಳು ಪರಿಶಿಷ್ಟ ಜಾತಿಗೆ ಸೇರಿದ್ದು, ಶಾಲಾ ಮಕ್ಕಳಾಗಿದ್ದಾರೆ. ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ, ಕಂದಾಯ ಅಥವಾ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಗರಿಷ್ಠ ₹ 5 ಲಕ್ಷದವರೆಗೆ ಪರಿಹಾರ ಕೊಡಲು ಅವಕಾಶವಿದೆ. ಯಾವುದೇ ಹೇಳಿಕೆಗಳ ಅಗತ್ಯವಿಲ್ಲ. ಅಧಿಕಾರಿಗಳು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ಪರಿಹಾರ ಕೊಡಲು ಅವಕಾಶವಿದೆ. ಕೂಡಲೆ ಕಾರ್ಯತತ್ಪರರಾಗಿ ಮೃತರ ಕುಟುಂಬಗಳಿಗೆ ನೆರವಾಗಬೇಕು’ ಎಂದು ಒತ್ತಾಯಿಸಿದರು.

ಪೃಥ್ವಿರಾಜ್‌
ಪೃಥ್ವಿರಾಜ್‌
ಆಲೂರು ತಾಲ್ಲೂಕಿನ ಮುತ್ತಿಗೆಪುರ ಗ್ರಾಮದ ಕೆರೆಯ ಬಳಿ ಸೇರಿದ್ದ ಜನರು.
ಆಲೂರು ತಾಲ್ಲೂಕಿನ ಮುತ್ತಿಗೆಪುರ ಗ್ರಾಮದ ಕೆರೆಯ ಬಳಿ ಸೇರಿದ್ದ ಜನರು.

ಮಕ್ಕಳ ಬಗ್ಗೆ ನಿಗಾ ವಹಿಸಿ

‘ಶಾಲೆಯ ರಜಾ ದಿನಗಳಲ್ಲಿ ಮಕ್ಕಳು ಆಟೋಟಗಳಲ್ಲಿ ತೊಡಗಿಕೊಳ್ಳುತ್ತಾರೆ. ಪ್ರತಿಯೊಬ್ಬ ಪೋಷಕರು ಕೂಡ ತಮ್ಮ ಮಕ್ಕಳ ಸುರಕ್ಷತೆ ಬಗ್ಗೆ ಗಮನ ಹರಿಸಬೇಕು’ ಎಂದು ಶಾಸಕ ಸಿಮೆಂಟ್‌ ಮಂಜು ಮನವಿ ಮಾಡಿದ್ದಾರೆ. ‘ಮೃತಪಟ್ಟ ಮಕ್ಕಳೆಲ್ಲರೂ 5 ರಿಂದ 7 ನೇ ತರಗತಿವರೆಗೆ ವ್ಯಾಸಂಗ ಮಾಡುತ್ತಿದ್ದರು. ಬೇಸಿಗೆ ರಜೆ ಇರುವುದರಿಂದ ಈಜಲು ಹೋಗಿ ಇಂತಹ ಅನಾಹುತಕ್ಕೆ ಎಡೆ ಮಾಡಿಕೊಟ್ಟಿದ್ದಾರೆ. ಇಂತಹ ಘಟನೆ ನನಗೆ ಅತೀವವಾದ ನೋವು ತಂದಿದೆ’ ಎಂದು ತಿಳಿಸಿದ್ದಾರೆ.

‘ಕುಟುಂಬಸ್ಥರಿಗೆ ಯಾವ ರೀತಿ ಸಾಂತ್ವನ ಹೇಳುವುದು ಎಂದು ಗೊತ್ತಾಗುತ್ತಿಲ್ಲ. ಮುದ್ದು ಮಕ್ಕಳನ್ನು ಕಳೆದುಕೊಂಡ ಕುಟುಂಬಸ್ಥರಿಗೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ. ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸರ್ಕಾರದ ಜೊತೆ ಮಾತನಾಡಿ ಕುಟುಂಬಸ್ಥರಿಗೆ ಹೆಚ್ಚಿನ ಪರಿಹಾರ ನೀಡಲು ಮುಂದಾಗುತ್ತೇನೆ’ ಎಂದರು.

ಕುಸಿದು ಬಿದ್ದ ವಿಶ್ವಾಸ್‌ ತಂದೆ

ಹಾಸನ: ಬಾಲಕರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಇಲ್ಲಿನ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ತರಲಾಗಿದ್ದು ಮೃತರ ಕುಟುಂಬದವರು ದಿಕ್ಕು ತೋಚದಂತಾಗಿದ್ದರು.

ಆಸ್ಪತ್ರೆಗೆ ಬಂದ ಮೃತ ವಿಶ್ವಾಸ್ ತಂದೆ ಚಂದ್ರ ಆಸ್ಪತ್ರೆಯ ದ್ವಾರದ ಬಳಿಯೇ ಕುಸಿದು ಬಿದ್ದರು. ಮಗನ ಸಾವಿನ ಆಘಾತದಿಂದ ದಿಕ್ಕು ತೋಚದಂತಾಗಿದ್ದ ಚಂದ್ರ ಅವರನ್ನು ಸಂಬಂಧಿಕರು ಸಂತೈಸಲು ಯತ್ನಿಸಿದರೂ ಉಮ್ಮಳಿಸಿ ಬರುತ್ತಿದ್ದ ದುಃಖವನ್ನು ತಡೆಯಲು ಸಾಧ್ಯವಾಗಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT