ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿಯಿಂದ ಭಾರತ ಅಧೋಗತಿಯತ್ತ ಸಾಗುತ್ತಿದೆ: ಕಾಂಗ್ರೆಸ್ ಮುಖಂಡ ವಿನಯ್ ಗಾಂಧಿ

Last Updated 23 ಡಿಸೆಂಬರ್ 2019, 14:30 IST
ಅಕ್ಷರ ಗಾತ್ರ

ಹಾಸನ: ‘ಆರ್ಎಸ್‍ಎಸ್ ಅಣತಿಯಂತೆ ಕೆಲಸ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಭಾರತವನ್ನು ಅಧೋಗತಿಗೆ ತಳ್ಳುತ್ತಿದ್ದಾರೆ’ ಎಂದು ಕಾಂಗ್ರೆಸ್ ಮುಖಂಡ ವಿನಯ್ ಗಾಂಧಿ ವಾಗ್ದಾಳಿ ನಡೆಸಿದರು.

‘ಪೌರತ್ವ (ತಿದ್ದುಪಡಿ) ಕಾಯ್ದೆ ಹಾಗೂ ರಾಷ್ಟ್ರೀಯ ನಾಗರಿಕ ನೊಂದಣಿ ಮೂಲಕ ಮುಸ್ಲಿಂರನ್ನು ದೇಶದಿಂದ ಹೊರದೂಡುವ ಪ್ರಯತ್ನ ನಡೆಸುತ್ತಿದ್ದಾರೆ. ಪಾತಾಳಕ್ಕೆ ತಲುಪಿರುವ ಆರ್ಥಿಕ ವ್ಯವಸ್ಥೆಯನ್ನು ಸುಧಾರಿಸುವ ಬದಲು, ಜಾತಿ, ಧರ್ಮದ ಆಧಾರದಲ್ಲಿ ಪ್ರಜೆಗಳ ಯೋಚನೆಯನ್ನು ಬೇರೆಡೆಗೆ ಸೆಳೆಯುತ್ತಿದ್ದಾರೆ’ ಎಂದು ಸುದ್ದಿಗೋಷ್ಠಿಯಲ್ಲಿ ಸೋಮವಾರ ಆಕ್ರೋಶ ವ್ಯಕ್ತಪಡಿಸಿದರು.

‘ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಪ್ರತಿ ಭಾಷಣದಲ್ಲೂ ಕಾಂಗ್ರೆಸ್‍ನಿಂದ ದೇಶ ಹಾಳಾಯಿತು. ತಮ್ಮಿಂದ ಮಾತ್ರ ಭಾರತದ ರಕ್ಷಣೆ ಎಂಬಂತೆ ಮಾತನಾಡುತ್ತಾರೆ. ಇಂದಿರಾ ಗಾಂಧಿ ಪಾಕಿಸ್ತಾನದೊಂದಿಗೆ ಯುದ್ಧ ಮಾಡಿ ಅಲ್ಲಿನ 98 ಸಾವಿರ ಸೈನಿಕರನ್ನು ಬಂಧಿಸಿ ದಿಟ್ಟತನ ಮೆರೆದಿದ್ದನ್ನು ಮರೆತುಬಿಟ್ಟಿದ್ದಾರೆ. ಲೋಕಸಭೆಯಲ್ಲಿ ಬಹುಮತ ಇದೆ ಎಂಬ ಮಾತ್ರಕ್ಕೆ ಸಂವಿಧಾನ ವಿರೋಧಿ ಚಟುವಟಿಕೆ ನಡೆಸಲು ಬಿಡುವುದಿಲ್ಲ. ಕೇಂದ್ರದ ತಪ್ಪು ನಿರ್ಧಾರದ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿರುವವರ ಮೇಲೆ ದಬ್ಬಾಳಿಕೆ ನಡೆಸಲಾಗುತ್ತಿದೆ. ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದಾಗಿ ಮಂಗಳೂರಿನಲ್ಲಿ ಇಬ್ಬರು ಪ್ರಾಣ ಬಿಡಬೇಕಾಯಿತು’ ಎಂದು ಹೇಳಿದರು.

‘ಪೌರತ್ವ (ತಿದ್ದುಪಡಿ) ಕಾಯ್ದೆ ಮೂಲಕ ದೇಶವಾಸಿಗಳನ್ನು ಪರದೇಶಕ್ಕೆ ಕಳುಹಿಸುವುದಾದರೆ. ಅಲ್ಲಿರುವ ಭಾರತೀಯರನ್ನು ಅವರೂ ವಾಪಸ್ ಕಳುಹಿಸುತ್ತಾರೆ. ಪಾಕಿಸ್ತಾನದಲ್ಲಿ ಹಿಂದೂಗಳ ಸ್ಥಿತಿ ಶೋಚನೀಯವಾಗಿದೆ. ಅಮೆರಿಕ, ಆಸ್ಟ್ರೇಲಿಯಾ, ಜಪಾನ್ ಸೇರಿದಂತೆ ಹತ್ತಾರು ರಾಷ್ಟ್ರಗಳಲ್ಲಿ ಭಾರತೀಯರು ಜೀವನ ನಡೆಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಹುಚ್ಚಾಟದಿಂದ ಬೇಸತ್ತು ಆ ದೇಶದ ಸರ್ಕಾರ ಭಾರತೀಯರನ್ನು ಕಳುಹಿಸಿಕೊಟ್ಟರೆ ಬಂದವರಿಗೆಲ್ಲ ಉದ್ಯೋಗ ಕೊಡುತ್ತಾರೆಯೇ’ ಎಂದು ಪ್ರಶ್ನಿಸಿದರು.

‘ಜನರ ಮುಗ್ಧತೆಯನ್ನು ದುರುಪಯೋಗ ಮಾಡಿಕೊಂಡು ವೋಟು ಹಾಕಿಸಿಕೊಂಡ ಬಿಜೆಪಿ ದೇಶವನ್ನು ಅಧಃಪತನಕ್ಕೆ ತಳ್ಳಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಹಿಂದುಗಳು ದೇಶ ಬಿಟ್ಟು ಹೋಗಬೇಕಾಗುತ್ತದೆ. ಕೇಂದ್ರ ಸರ್ಕಾರದ ದಮನಕಾರಿ ನೀತಿಗಳ ವಿರುದ್ಧ ಪ್ರಬಲ ಹೋರಾಟ ರೂಪುಗೊಳ್ಳಬೇಕಿದೆ’ ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT