ಸೋಮವಾರ, ಜನವರಿ 18, 2021
15 °C
113 ಅಂಗನವಾಡಿ ಕಾರ್ಯಕರ್ತೆಯರಿಗೆ ಕೊರೊನಾ ಸೋಂಕು: ವರಲಕ್ಷ್ಮೀ

ಮೃತ ನೌಕರ ಕುಟುಂಬಕ್ಕೆ ಪರಿಹಾರ ನೀಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಕೋವಿಡ್‌ ಸಂಕಷ್ಟದ ಸಂದರ್ಭದಲ್ಲಿ ಮೃತಪಟ್ಟ ಅಂಗನವಾಡಿ ನೌಕರರ ಕುಟುಂಬಕ್ಕೆ ಪಿಂಚಣಿ ಸೇರಿದಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸೂಕ್ತ ಪರಿಹಾರ ನೀಡಿಲ್ಲ ಎಂದು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ಅಧ್ಯಕ್ಷೆ ಎಸ್.ವರಲಕ್ಷ್ಮಿ ಆರೋಪಿಸಿದರು.

ರಾಜ್ಯದಲ್ಲಿ 113 ಅಂಗನವಾಡಿ ಕಾರ್ಯಕರ್ತೆಯರಿಗೆ ಕೊರೊನಾ ಸೋಂಕು ತಗುಲಿದೆ. ಈ ಪೈಕಿ 27 ಮಂದಿ ಮೃತಪಟ್ಟಿದ್ದಾರೆ. 35 ಜನರು ಕೆಲಸದ ಒತ್ತಡದಿಂದ ಮಾರ್ಚ್ 25ರ ನಂತರ ಮೃತಪಟ್ಟಿದ್ದಾರೆ. ಆದರೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪಿಂಚಣಿ ಗ್ಯಾರಂಟಿ ಮಾಡಿಲ್ಲ. ಕನಿಷ್ಠ ವೇತನ ಶಿಫಾರಸು ಜಾರಿ ಮಾಡಿಲ್ಲ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

45 ವರ್ಷ ಸೇವೆ ಸಲ್ಲಿಸಿ ನಿವೃತ್ತಿಯಾದ ನೌಕರರಿಗೆ ನಿವೃತ್ತಿ ವೇತನ ಸಿಕ್ಕಿಲ್ಲ. 2015 ರಿಂದ 2020ರ ವರೆಗೆ 2186 ಅಂಗನವಾಡಿ ಕಾರ್ಯಕರ್ತೆಯರು, 4980 ಸಹಾಯಕಿಯರು ನಿವೃತ್ತಿಯಾಗಿದ್ದಾರೆ. ಇವರಿಗೆ ₹30 ಸಾವಿರದಿಂದ ₹50 ಸಾವಿರ ವರೆಗೆ ನೀಡಬೇಕಿದ್ದ ಇಡಿಗಂಟು ನೀಡಿಲ್ಲ ಎಂದು ಟೀಕಿಸಿದರು.

ಫಲಾನುಭವಿಗಳಿಗೆ ನೀಡುವ ಕೋಳಿ ಮೊಟ್ಟೆಗೆ ಸರ್ಕಾರ ಮುಂಗಡವಾಗಿ ಹಣ ನೀಡುವುದಿಲ್ಲ. ಎರಡು, ಮೂರು ತಿಂಗಳು ಮೊಟ್ಟೆ ನೀಡಿದ ಬಳಿಕ 1 ಮೊಟ್ಟೆಗೆ ₹5 ನೀಡುತ್ತಾರೆ. ಆದರೆ ಮಾರುಕಟ್ಟೆಯಲ್ಲಿ ಮೊಟ್ಟೆ ದರ ₹5.50 ರಿಂದ ₹7 ವರೆಗೂ ಇದೆ. ಲಾಕ್‍ಡೌನ್ ಸಂದರ್ಭದಲ್ಲಿ ಮೊಟ್ಟೆ ಸರಬರಾಜು ಮಾಡಲು ಬಹಳ ಕಷ್ಟ ಅನುಭವಿಸಿದ್ದಾರೆ. ಹೀಗಾಗಿ ನೇರವಾಗಿ ಅಂಗನವಾಡಿ ಕೇಂದ್ರಗಳಿಗೆ ಇಲಾಖೆಯೇ ಮೊಟ್ಟೆ
ಸರಬರಾಜು ಮಾಡಬೇಕು ಎಂದು ಆಗ್ರಹಿಸಿದರು.

2015 ರಿಂದ ಆಯ್ಕೆಯಾದ ಅಂಗನವಾಡಿ ಕಾರ್ಯಕರ್ತೆಯರಿಗೆ ಯಾವುದೇ ಸವಲತ್ತು ಕೊಟ್ಟಿಲ್ಲ. ರಾಜ್ಯದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆ ಪ್ರಾರಂಭಿಸಿ 3 ವರ್ಷ ಮೇಲ್ಪಟ್ಟ ಮಕ್ಕಳಿಗೆ ಎಲ್‍ಕೆಜಿ, ಯುಕೆಜಿ ತರಗತಿಗಳನ್ನು ಆರಂಭಿಸಲಾಗಿದೆ. ಇದರಿಂದ ಸುಮಾರು 1500 ಅಂಗನವಾಡಿಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಅಂಗನವಾಡಿ ಕೇಂದ್ರಗಳನ್ನು ಪೂರ್ವ ಪ್ರಾಥಮಿಕ ಶಿಕ್ಷಣಕ್ಕೆ ಮತ್ತು ಐಸಿಡಿಎಸ್‍ನ ಉಳಿದ ಐದು ಅಂಶಗಳಿಗೆ ಮಾತ್ರ ಸೀಮಿತಗೊಳಿಸಿ ಮೇಲ್ದರ್ಜೆಗೇರಿಸಿ ಅಂಗನವಾಡಿ ಕಾರ್ಯಕರ್ತೆಯರಿಗೆ ವಿಶೇಷ ತರಬೇತಿ ನೀಡಿದರೆ ಎಲ್ಲಾ ವರ್ಗದ ಮಕ್ಕಳಿಗೂ ಉಚಿತ ಮತ್ತು ಕಡ್ಡಾಯ ಪೂರ್ವ ಪ್ರಾಥಮಿಕ ಶಿಕ್ಷಣ ನೀಡಬಹುದು. ಶೀಘ್ರವೇ ಬೇಡಿಕೆಗೆ ಸ್ಪಂದಿಸದಿದ್ದರೆ ಬಜೆಟ್ ಅಧಿವೇಶನ ವೇಳೆ ಮತ್ತೊಮ್ಮೆ ತೀವ್ರ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸಂಘಟನೆ ಜಿಲ್ಲಾಧ್ಯಕ್ಷೆ ಇಂದ್ರಮ್ಮ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಬಿ.ಪುಷ್ಪಾ, ಸದಸ್ಯರಾದ ಜಯಂತಿ, ಎಚ್.ಕೆ.ಗೀತಾ, ಎಸ್.ಎಸ್. ಪೂರ್ಣಿಮಾ, ಕೆ.ಆರ್.ಪ್ರತಿಭಾ, ಮಂಜುಳಾ ಇದ್ದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.