ಗೌಡರ ಕುಟುಂಬದ ಕಣ್ಣೀರ ಹೊಳೆ

ಮಂಗಳವಾರ, ಮಾರ್ಚ್ 26, 2019
22 °C
ಮೂಡಲಹಿಪ್ಪೆಯಲ್ಲಿ ಚುನಾವಣಾ ಪ್ರಚಾರಕ್ಕೆ ಚಾಲನೆ

ಗೌಡರ ಕುಟುಂಬದ ಕಣ್ಣೀರ ಹೊಳೆ

Published:
Updated:

ಹೊಳೆನರಸೀಪುರ: ಲೋಕಸಭೆ ಚುನಾವಣೆಯಲ್ಲಿ ಮೊಮ್ಮಗ ಪ್ರಜ್ವಲ್ ರೇವಣ್ಣ ಅಭ್ಯರ್ಥಿ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರು ಘೋಷಿಸುವ ಮೂಲಕ ಊಹಾಪೋಹಗಳಿಗೆ ತೆರೆ ಎಳೆದರು. ಇದೇ ರೀತಿ ಮಂಡ್ಯದಿಂದ ನಿಖಿಲ್ ಕುಮಾರಸ್ವಾಮಿ ಅಭ್ಯರ್ಥಿ ಎಂಬುದನ್ನು ಶೀಘ್ರವೇ ಘೋಷಣೆ ಮಾಡಲಾಗುವುದು ಎಂದರು.

ತಾಲ್ಲೂಕಿನ ಮೂಡಲಹಿಪ್ಪೆ ಗ್ರಾಮದಲ್ಲಿ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿ ಮಾತನಾಡಿದ ದೇವೇಗೌಡರು, ‘ಆರು ದಶಕಗಳಿಂದ ನನ್ನನ್ನು ಬೆಳೆಸಿದ್ದೀರಿ. ಕಷ್ಟ, ಸುಖಗಳಿಗೆ ಜೊತೆಯಾಗಿದ್ದೀರಿ. ಸೋಲು, ಗೆಲುವುಗಳಲ್ಲಿ ಹೆಗಲಾಗಿದ್ದೀರಿ. ಇದೀಗ ಪ್ರಜ್ವಲ್ ಕಣಕ್ಕಿಳಿಯುತ್ತಿದ್ದು ನನಗೆ ತೋರಿದ ಪ್ರೀತಿ, ಸಹಕಾರ ಮೊಮ್ಮಗನಿಗೂ ಇರಲಿ. ಅವನನ್ನು ಬೆಂಬಲಿಸಿ’ ಎಂದು ಮನವಿ ಮಾಡಿದರು.

ಈ ವೇಳೆ ತಾವು ನಡೆದು ಬಂದ ದಾರಿಯನ್ನು ನೆನಪು ಮಾಡಿಕೊಂಡ ಗೌಡರು, ‘ನನ್ನ ಸುದೀರ್ಘ ರಾಜಕೀಯ ಜೀವನದಲ್ಲಿ ಯಾವುದೇ ವ್ಯಕ್ತಿಗೂ, ಯಾವುದೇ ಸಮುದಾಯಕ್ಕೆ ಮೋಸ ಮಾಡಿಲ್ಲ. ಅಧಿಕಾರ ಸಿಕ್ಕಾಗಲೆಲ್ಲಾ, ಬೇರೆಯವರಿಗೂ ನೀಡಿದ್ದೇನೆ. ಆದರೂ ಕುಟುಂಬ ರಾಜಕೀಯ ಮಾಡುತ್ತಿದ್ದೇನೆ ಎಂದು ಮಾಧ್ಯಮಗಳು ನಿತ್ಯ ನಮ್ಮ ಕುಟುಂಬವನ್ನೇ ಟಾರ್ಗೆಟ್ ಮಾಡಿವೆ’ ಎಂದು ನೊಂದು ಗೌಡರು, ಕೆಲ ಕ್ಷಣ ಕಣ್ಣೀರಿಟ್ಟರು.

ತಾತ ಕಣ್ಣೀರಿಡುತ್ತಿದ್ದಂತೆ, ಅವರ ಪಕ್ಕದಲ್ಲೇ ನಿಂತಿದ್ದ ಪ್ರಜ್ವಲ್ ರೇವಣ್ಣ ಸಹ ಅಭಿಮಾನಿಯನ್ನು ತಬ್ಬಿಕೊಂಡು ಗಳಗಳನೆ ಅತ್ತರೆ, ವೇದಿಕೆ ಮೇಲೆ ಕುಳಿತಿದ್ದ ರೇವಣ್ಣ ಹಾಗೂ ಭವಾನಿ ರೇವಣ್ಣ ಅವರೂ ಕಣ್ಣೀರು ತುಂಬಿಕೊಂಡರು.

ಇದಕ್ಕೂ ಮುನ್ನ ದೇವೇಗೌಡರು ಹಾಗೂ ಅವರ ಕುಟುಂಬ ಸದಸ್ಯರು, ಮೂಡಲಹಿಪ್ಪೆಯ ಚನ್ನಕೇಶವ ದೇವಾಲಯದಲ್ಲಿ ಸಾಮೂಹಿಕ ಪೂಜೆ ಸಲ್ಲಿಸಿದರು. ಈ ವೇಳೆ ಬಿ.ಫಾರಂ ಇಟ್ಟು ವಿಶೇಷ ಪೂಜೆ ಸಲ್ಲಿಸಿ, ನಂತರ ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಿ, ಮತಯಾಚನೆ ಮಾಡಿದರು.

‘ನನ್ನ ತಾತ ದೇವೇಗೌಡರು ಮತ್ತು ರೇವಣ್ಣ ಅವರಿಗೆ ನೀಡಿದ ಸಹಕಾರವನ್ನು ನನಗೂ ನೀಡಿ. ನಿಮ್ಮ ಮನೆಯ ಮಗನಾಗಿ ದುಡಿಯುವೆ’ ಎಂದು ಪ್ರಜ್ವಲ್‌ ವಾಗ್ದಾನ ಮಾಡಿದರು. ಪುತ್ರನಿಗೆ ತಂದೆ ರೇವಣ್ಣ ಸಾಥ್ ನೀಡಿದರು.

ಅಷ್ಟೇ ಅಲ್ಲದೇ ಹೊಳೆನರಸೀಪುರದ ತಮ್ಮ ನಿವಾಸದಲ್ಲಿ ಭವಾನಿ ಅವರು ಮಗ ಪ್ರಜ್ವಲ್ ಗೆ ಬೆಳ್ಳಿ ಬಟ್ಟಲಲ್ಲಿ ಹಾಲು ಕುಡಿಸಿ ಹರಸಿದರೆ, ಅಣ್ಣ ಡಾ.ಸೂರಜ್ ಅಕ್ಷತೆ ನೀಡಿ ಶುಭ ಹಾರೈಸಿದರು. ಅಲ್ಲದೇ ಮಂಗಳ ಮುಖಿಯರೊಂದಿಗೆ ಆರತಿ ಎತ್ತಿಸಿ ದೃಷ್ಟಿ ತೆಗೆಸಿದರು.

ಗೌಡರ ಕಣ್ಣೀರು: ಕಾಲೆಳೆದ ಕಮಲ ಪಡೆ

ಬೆಂಗಳೂರು: ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರ ಕಣ್ಣೀರಿನ ಬಗ್ಗೆ ಬಿಜೆಪಿ ವ್ಯಂಗ್ಯವಾಡಿದೆ. ‘2019ರ ಚುನಾವಣೆಯ ಮೊದಲ ನಾಟಕ ಶುರುವಾಯಿತು’ ಎಂದು ಬಿಜೆಪಿ ವ್ಯಂಗ್ಯವಾಡಿದೆ.

‘ರೈತರು ಆತ್ಮಹತ್ಯೆ ಮಾಡಕೊಂಡಾಗ ಅಳಲಿಲ್ಲ. ಪುಲ್ವಾಮಾ ದಾಳಿಯಿಂದಾಗಿ ಯೋಧರು ಮಡಿದಾಗ ಅಳಲಿಲ್ಲ. ಚುನಾವಣೆ ಬಂದಾಗ ಮಾತ್ರ ಮನೆಮಂದಿಯೆಲ್ಲ ಕಣ್ಣೀರು. ರಾಜ್ಯದ ಜನರು ಈಗಲೂ ಮರುಳಾಗುವರೇ‘ ಎಂದು ಬಿಜೆಪಿ ಕರ್ನಾಟಕ ಸರಣಿ ಟ್ವೀಟ್‌ಗಳನ್ನು ಮಾಡಿದೆ.

‘ದೇವೇಗೌಡರು ಹಾಗೂ ಅವರ ಕುಟುಂಬಕ್ಕೆ ಅಳುವುದು ಒಂದು ಕಲೆ. ದಶಕಗಳಿಂದ ಅಳುವಿನ ಕಲೆ ಮೂಲಕ ಜನರನ್ನು ಮರುಳು ಮಾಡುತ್ತಾ ಬಂದಿದ್ದಾರೆ. ಚುನಾವಣೆಗೆ ಮೊದಲು ದೇವೇಗೌಡರು ಹಾಗೂ ಅವರ ಕುಟುಂಬದವರು ಅಳುತ್ತಾರೆ. ಚುನಾವಣೆ ಬಳಿಕ ಈ ಕುಟುಂಬಕ್ಕೆ ಮತ ನೀಡಿದ ಜನರು ಅಳುತ್ತಾರೆ’ ಎಂದು ಕಿಚಾಯಿಸಿದೆ.

 

 

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !