ಶನಿವಾರ, ನವೆಂಬರ್ 23, 2019
17 °C

ಗ್ರಾಮದಲ್ಲಿ ಒಂಟಿ ಸಲಗ ಸವಾರಿ: ಬೆಚ್ಚಿದ ಮಕ್ಕಳು

Published:
Updated:
Prajavani

ಹಾಸನ: ಮಲೆನಾಡು ಭಾಗದ ಸಕಲೇಶಪುರ ಮತ್ತು ಆಲೂರು ತಾಲ್ಲೂಕಿನಲ್ಲಿ ಕಾಡಾನೆಗಳ ಉಪಟಳಕ್ಕೆ ಜನರು ಭಯಭೀತರಾಗಿದ್ದಾರೆ. ಗುಂಪಿನಿಂದ ಬೇರ್ಪಟ್ಟಿರುವ ಆನೆ ಎರಡು ದಿನಗಳಿಂದ  ಬಾಳ್ಳುಪೇಟೆ, ಜಮ್ಮನಹಳ್ಳಿ, ನಿಡನೂರು, ಹಬ್ಬನ ಕೊಪ್ಪಲು ಸುತ್ತಲಿನ ಪ್ರದೇಶದಲ್ಲಿ ಸುತ್ತಾಡುತ್ತಿದೆ.

ಆಲೂರು ತಾಲ್ಲೂಕಿನ ಹೊಸಕೋಟೆ ಹೋಬಳಿಯ ಕಾರಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಜಳಿಗೆ ಹಾಗೂ ಕಲ್ಲಾರೆ ಗ್ರಾಮಗಳಲ್ಲಿ ಒಂಟಿ ಸಲಗವೊಂದು ಗ್ರಾಮದ ಮುಖ್ಯ ರಸ್ತೆಯಲ್ಲಿ ಸವಾರಿ ಮಾಡುವ ಮೂಲಕ ಜನರನ್ನು ಭಯಭೀತರನ್ನಾಗಿಸಿತು.

ಭರತ್ತೂರು–ಮಗ್ಗೆ ಮುಖ್ಯ ರಸ್ತೆಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ ಸುಮಾರು 1 ಕಿ.ಮೀ. ದೂರ ಗ್ರಾಮದೊಳಗೆ ಗಂಭೀರವಾಗಿ ಹೆಜ್ಜೆ ಹಾಕುತ್ತಾ ಸಾಗಿತು. ಅನೀರಿಕ್ಷಿತವಾಗಿ ಎದುರಾದ ಆನೆಯನ್ನು ಕಂಡ ಸ್ಥಳೀಯ ಜನರು ಭಯಭೀತರಾಗಿ ಕಿರುಚುತ್ತಾ ತಮ್ಮ ಮನೆಗಳಿಗೆ ಓಡಿ ಹೋಗಿ ಬಾಗಿಲು ಹಾಕಿಕೊಂಡರು. ಗ್ರಾಮಸ್ಥರ ಕೂಗಾಟಕ್ಕೆ ವಿಚಲಿತವಾಗದೆ ಗ್ರಾಮದೊಳಗೆ ಆನೆ ಹಾದು ಹೋಗಿದೆ.

ಸಕಲೇಶಪುರ ತಾಲ್ಲೂಕಿನ ಹೊಸಗದ್ದೆ ಗ್ರಾಮದಲ್ಲಿ ಒಂಟಿ ಸಲಗ ಕಾಣಿಸಿಕೊಂಡಿದ್ದು, ನಿವಾಸಿಗಳಲ್ಲಿ ಭೀತಿ ಹುಟ್ಟಿಸಿದೆ. ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಕಾಣಿಸಿಕೊಂಡ ಆನೆಯನ್ನು ಕಂಡು ಮಕ್ಕಳು ಬೆಚ್ಚಿ ಬಿದ್ದಿದ್ದಾರೆ. 

ಆನೆ ಪ್ರವೇಶದಿಂದ ಆತಂಕಗೊಂಡಿರುವ ಕಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿನಿ ವಿಸ್ಮಯ ಮಾಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

‘ಆಟವಾಡುತ್ತಿದ್ದ ಸಂದರ್ಭದಲ್ಲಿ ಆನೆ ಬಂದಿದ್ದು, ತುಂಬಾ ಹೆದರಿಕೆ ಆಯಿತು. ನಮ್ಮೂರಿನಲ್ಲಿ ಕರೆಂಟ್‌ ಇರಲ್ಲ. ರಾತ್ರಿ ಹೊತ್ತು ಹೊರಗಡೆ ಕೂತು ಬರೆಯುತ್ತೀವಿ.. ಅಂತಹ ಸಂದರ್ಭದಲ್ಲಿ ಆನೆ ಬಂದರೆ ಏನಾಗಬೇಕು. ಮುಖ್ಯಮಂತ್ರಿ ಯಡಿಯೂರಪ್ಪನವರೇ ದಯವಿಟ್ಟು ಪರಿಹಾರ ಕೊಡಿ, ನಾವು ಎಲ್ಲಿಯಾದರೂ ಹೋಗಿ ಬದುಕ್ತೀವಿ’ ಎಂದು ವಿದ್ಯಾರ್ಥಿ ಮನವಿ ಮಾಡಿದ್ದಾಳೆ.

ಪ್ರತಿಕ್ರಿಯಿಸಿ (+)