ಮಂಗಳವಾರ, ನವೆಂಬರ್ 30, 2021
21 °C
ಕೋವಿಡ್‌ ಉಪಕರಣ ಖರೀದಿಯಲ್ಲಿ ಅವ್ಯವಹಾರ

ಹಾಲಿ ನ್ಯಾಯಾಧೀಶರಿಂದ ತನಿಖೆಯಾಗಲಿ: : ಸಂಸದ ಸುರೇಶ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಸರ್ಕಾರ ಒದಗಿಸಿರುವ ಉಪಕರಣ ಖರೀದಿಯಲ್ಲಿ ಸಾವಿರಾರು ಕೋಟಿ ರೂಪಾಯಿ ಅವ್ಯವಹಾರ ನಡೆದಿದ್ದು, ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು ಎಂದು ಸಂಸದ ಡಿ.ಕೆ.ಸುರೇಶ್ ಆಗ್ರಹಿಸಿದರು.

‘ಕೊರೊನಾ ಸಂಕಷ್ಟದಲ್ಲಿ ಜನರ ಜೀವದ ಹಿತದೃಷ್ಟಿಯಿಂದ ಎಲ್ಲ ಪಕ್ಷಗಳು ಸರ್ಕಾರಕ್ಕೆ ಸಹಕಾರ ನೀಡಿವೆ. ಆದರೆ, ಕೋವಿಡ್‌ನಿಂದ ನಿತ್ಯ ಜನರು ಸಾಯುತ್ತಿದ್ದಾರೆ. ಸ್ಯಾನಿಟೈಸರ್, ಮಾಸ್ಕ್, ಪಿಪಿಇ‌ ಕಿಟ್ ಖರೀದಿಯಲ್ಲಿ ದೊಡ್ಡ ಹಗರಣ ನಡೆದಿದೆ. ಒಬ್ಬೊಬ್ಬ ಸಚಿವರು ಒಂದೊಂದು ಹೇಳಿಕೆ ನೀಡುತ್ತಿದ್ದಾರೆ. ವೆಂಟಿಲೇಟರ್‌ಗಳ ಖರೀದಿಯಲ್ಲಿ ಒಂದೊಂದು ರೀತಿಯ ವ್ಯಾಪಾರ ನಡೆದಿದೆ. ಕೋವಿಡ್ ಹೆಸರಿನಲ್ಲಿ ಹಣ ಲೂಟಿ ಮಾಡಿದ್ದಾರೆ. ನಾಡಿನ ಜನರಿಗೆ ಲೆಕ್ಕ ಕೊಡಬೇಕು’ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಕೊರೊನಾ ತೊಲಗಿಸುವ ವಿಷಯದಲ್ಲಿ ಪ್ರಧಾನಿ ಅವರು ‘ನಿಮ್ಮ ಜೀವ ನಿಮ್ಮ ಕೈಯ್ಯಲ್ಲಿದೆ’ ಎಂದರೆ, ಮಂತ್ರಿಗಳು ’ದೇವರೇ ಕಾಪಾಡಬೇಕು’ಅಂತಿದ್ದಾರೆ. ಕೊರೊನಾ ನಿಯಂತ್ರಣದಲ್ಲಿ ಕೇಂದ್ರ, ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಆರಂಭದಿಂದ ಕೊರೊನಾ ಹೋಗಲಾಡಿಸಲು ಸಿದ್ಧತೆ ಮಾಡಿಕೊಳ್ಳಲಿಲ್ಲ. 90 ದಿನಗಳಿಂದ ಸಚಿವರು ಏನು ಮಾಡುತ್ತಿದ್ದರು ಎಂದು ಪ್ರಶ್ನಿಸಿದರು.

ವಲಸೆ ಕಾರ್ಮಿಕರ ಅನ್ನದಲ್ಲಿ ಭ್ರಷ್ಟಾಚಾರ ಮಾಡಲಾಗಿದೆ. 75 ಲಕ್ಷ ಆಹಾರ ಕಿಟ್‌ ಯಾರಿಗೆ ಕೊಟ್ಟಿದ್ದಾರೆ? ಆಡಳಿತ ಯಂತ್ರ ಸಂಪೂರ್ಣ ಕುಸಿದಿದೆ. ಸಚಿವರಲ್ಲಿ ಹೊಂದಾಣಿಕೆ ಇಲ್ಲ. ಕೊರೊನಾ ವಾರಿಯರ್‌ಗಳೆಂದು ಆಶಾ ಕಾರ್ಯಕರ್ತೆಯರಿಗೆ ಹೂವು ಸುರಿಸಿದರು. ಆದರೆ ಅವರ ಬೇಡಿಕೆ‌ ಈಡೇರಿಸಲು ವಿಫಲವಾಗಿದೆ ಎಂದು ಟೀಕಿಸಿದರು.

‘ಕೋವಿಡ್‌ ಹೆಸರಿನಲ್ಲಿ ಹಣ ಲೂಟಿ ಮಾಡುತ್ತಿದ್ದರೂ ಆರ್‌ಎಸ್‌ಎಸ್‌, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಮೌನ ವಹಿಸಿದ್ದಾರೆ. ಅವರೂ ಪಾಲುದಾರರಾಗಿರಬೇಕು’ ಎಂದು ಆರೋಪಿಸಿದ ಅವರು, ಯಾವುದೇ ಅವ್ಯವಹಾರ ನಡೆದಿಲ್ಲವೆಂದು ಸಾಬೀತು ಪಡಿಸಲು ನ್ಯಾಯಾಂಗ ತನಿಖೆ ನಡೆಸಬೇಕು. ಶ್ವೇತ ಪತ್ರ ಹೊರಡಿಸಬೇಕು’ ಎಂದು ಆಗ್ರಹಿಸಿದರು.

ಕಾಂಗ್ರೆಸ್ ನ 15 ಶಾಸಕರು ಸಂಪರ್ಕದಲ್ಲಿದ್ದಾರೆ ಎಂಬ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ್‌ ಕುಮಾರ್‌ ಹೇಳಿಕೆಗೆ ಪ್ರತಿಕ್ರಿಯಿಸಿದ ಸಂಸದರು, ‘ಆಪರೇಷನ್ ಕಮಲಕ್ಕೆ ಬಿಜೆಪಿ ಫೇಮಸ್. ಸರ್ಕಾರ ಅಲುಗಾಡುವ ಭೀತಿ ಕಾಡುತ್ತಿರಬೇಕು. ಆ ಕಾರಣಕ್ಕೆ ನಳೀನ್ ಹೇಳಿಕೆ ನೀಡಿದ್ದಾರೆ’ಎಂದು ವ್ಯಂಗ್ಯವಾಡಿದರು.

ಗೋಷ್ಠಿಯಲ್ಲಿ ವಿಧಾನ ಪರಿಷತ್‌ ಸದಸ್ಯ ಎಂ.ಎ.ಗೋಪಾಲಸ್ವಾಮಿ, ಜಿಲ್ಲಾ ಘಟಕದ ಅಧ್ಯಕ್ಷ ಜಾವಗಲ್ ಮಂಜುನಾಥ್‌, ಮುಖಂಡರಾದ ಬಿ.ಶಿವರಾಂ, ಎಚ್.ಕೆ.ಮಹೇಶ್‌, ಜವರೇಗೌಡ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು