ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಸಿ ಕೇಂದ್ರಕ್ಕೆ ಕಳುಹಿಸಲು ಕೈಮುಗಿದ ಶಾಸಕ

ಅಧಿಕಾರಿಗಳನ್ನು ಸತಾಯಿಸಿದ ನಂಜಾಪುರ ಗ್ರಾಮದ ಕೊರೊನಾ ಸೋಂಕಿತರು
Last Updated 31 ಮೇ 2021, 2:32 IST
ಅಕ್ಷರ ಗಾತ್ರ

ಹಳೇಬೀಡು: ಸಮೀಪದ ನಂಜಾಪುರ ಗ್ರಾಮದಲ್ಲಿ 28 ಮಂದಿಗೆ ಒಂದೇ ದಿನ ಕೊರೊನಾ ಸೋಂಕು ದೃಢಪಟ್ಟಿದ್ದು, ಅವರು ಕೋವಿಡ್ ಆರೈಕೆ ಕೇಂದ್ರಕ್ಕೆ ಹೋಗಲು ಹಿಂದೇಟು ಹಾಕಿದ ಘಟನೆ ಶನಿವಾರ ನಡೆಯಿತು.

ಸಂಜೆ 6 ಗಂಟೆಗೆ ಶಾಸಕ ಕೆ.ಎಸ್. ಲಿಂಗೇಶ್ ಗ್ರಾಮಕ್ಕೆ ಬಂದು ಸೋಂಕಿತರ ಮನೆ ಮುಂದೆ ಕೈಮುಗಿದು ಮನೆಯಲ್ಲಿ ಇರಬೇಡಿ, ಕೋವಿಡ್ ಕೇರ್‌ ಸೆಂಟರ್‌ಗೆ ಬಂದು ಆರೋಗ್ಯ ಸುಧಾರಿಸಿಕೊಳ್ಳಿ. ಮನೆಯಲ್ಲಿ ಹಿರಿಯರು, ಮಕ್ಕಳು, ಅಕ್ಕ‍ಪಕ್ಕದವರ ಆರೋಗ್ಯವನ್ನೂ ಕಾಪಾಡಿ ಎಂದು ಹೇಳಿ, ಮನವೊಲಿಸಿದ ನಂತರ 12 ಮಂದಿ ಆರೈಕೆ ಕೇಂದ್ರಕ್ಕೆ ತೆರಳಿದರು.

ಮಧ್ಯಾಹ್ನ 2 ಗಂಟೆಯಿಂದ ಸಂಜೆಯವರೆಗೂ ತಾಲ್ಲೂಕು ಆಡಳಿತ, ಪೊಲೀಸ್, ಆರೋಗ್ಯ ಸಿಬ್ಬಂದಿ ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿಯವರು ಹೇಳಿದರೂ ರೋಗಿಗಳು ಆರೈಕೆ ಕೆಂದ್ರಕ್ಕೆ ತೆರಳಲಿಲ್ಲ. ತಹಶೀಲ್ದಾರ್ ಎನ್.ವಿ. ನಟೇಶ್, ಸರ್ಕಲ್ ಇನ್‌ಸ್ಪೆಕ್ಟರ್ ಶ್ರೀಕಾಂತ್, ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ವಿಜಯ್ ಕೋವಿಡ್ ರೋಗಿಗಳ ಮನೆಗಳ ಮುಂದೆ ನಿಂತು ಆರೈಕೆ ಕೆಂದ್ರದಲ್ಲಿ ಸೌಲಭ್ಯದ ಕೊರತೆ ಇಲ್ಲ. ನಿಮ್ಮ ಆರೋಗ್ಯ ಸುಧಾರಿಸುತ್ತದೆ. ಗ್ರಾಮದಲ್ಲಿ ಮತ್ತಷ್ಟು ಜನರಿಗೆ ರೋಗ ಹರಡುವುದು ತಪ್ಪುತ್ತದೆ ಎಂದು ವಿವರಿಸಿದರು.

ಆಗ ನಾಲ್ವರು ಸೋಂಕಿತರು ಬಂದು ವಾಹನದಲ್ಲಿ ಕುಳಿತರು. ಸಾಕಷ್ಟು ಸಮಯ ಕಳೆದರೂ ಉಳಿದವರು ಹೊರಡಲಿಲ್ಲ. ವಾಹನದಲ್ಲಿದ್ದವರು ಉಳಿದವರನ್ನು ಹೊರಡಿಸಿ ಎಂದು ಮನೆಗೆ ಹಿಂದಿರುಗಿದರು. ವಾಹನ ಏರುವುದು ಇಳಿಯುವುದು ಇದೇ ಪ್ರಕ್ರಿಯೆ ನಾಲ್ಕೈದು ಬಾರಿ ನಡೆಯಿತು.

ಅಧಿಕಾರಿಗಳು ಹಾಗೂ ಶಾಸಕರ ಶ್ರಮದ ಫಲವಾಗಿ ರಾತ್ರಿ 8 ಗಂಟೆಗೆ 12 ಮಂದಿ ಆರೈಕೆ ಕೇಂದ್ರಕ್ಕೆ ತೆರಳಿದರು. ರೋಗಿಗಳ ಮನವೊಲಿಸುವ ಕೆಲಸ ಭಾನುವಾರವೂ ಮುಂದುವರೆಯಿತು.

ವೈದ್ಯಾಧಿಕಾರಿ ಡಾ.ರಶ್ಮಿ, ಸಬ್ ಇನ್‌ಸ್ಪೆಕ್ಟರ್ ಗಿರಿಧರ್, ಉಪ ತಹಶೀಲ್ದಾರ್ ಮೋಹನ್ ಕುಮಾರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಭಿಲಾಷ್ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT