ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ ಲೋಕಸಭಾ ಕ್ಷೇತ್ರ | ಸಮಬಲರ ನಡುವೆ ಪೈಪೋಟಿ

ಯುವ ಅಭ್ಯರ್ಥಿಗಳು ಕಣದಲ್ಲಿ: ಕಾಂಗ್ರೆಸ್‌– ಎನ್‌ಡಿಎ ಮಧ್ಯೆ ನೇರ ಹಣಾಹಣಿ
Published 7 ಏಪ್ರಿಲ್ 2024, 6:56 IST
Last Updated 7 ಏಪ್ರಿಲ್ 2024, 6:56 IST
ಅಕ್ಷರ ಗಾತ್ರ

ಹಾಸನ: ಜಿಲ್ಲೆಯಲ್ಲಿ ಈ ಬಾರಿ ನಡೆಯುತ್ತಿರುವ ಲೋಕಸಭೆ ಚುನಾವಣೆ ಹಲವು ವಿಶೇಷಗಳನ್ನು ಹೊಂದಿದೆ. ಕಾಂಗ್ರೆಸ್ ಹಾಗೂ ಎನ್‌ಡಿಎ ಮಧ್ಯೆ ನೇರ ಹಣಾಹಣಿ ಇರುವ ಈ ಸ್ಪರ್ಧೆಯಲ್ಲಿ ಸಮಬಲದ ಎದುರಾಳಿಗಳು ಕಣದಲ್ಲಿ ಇರುವುದು ವಿಶೇಷವಾಗಿದೆ. ಇಬ್ಬರಿಗೂ ಅಜ್ಜಂದಿರ ರಾಜಕೀಯ ಹಿನ್ನೆಲೆ ಶ್ರೀರಕ್ಷೆಯಾಗಿರುವುದು ಮತ್ತೊಂದು ವಿಶೇಷ. ಅದರಲ್ಲಿಯೂ ಮೊದಲ ಬಾರಿಗೆ ಎರಡೂ ಪಕ್ಷಗಳಿಂದ ಯುವಕರಿಗೇ ಆದ್ಯತೆ ಕೊಡಲಾಗಿದೆ.

ಬಿಜೆಪಿ–ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಹಾಲಿ ಸಂಸದ ಪ್ರಜ್ವಲ್‌ ರೇವಣ್ಣ ಕಣದಲ್ಲಿದ್ದರೆ, ಕಾಂಗ್ರೆಸ್‌ ಅಭ್ಯರ್ಥಿಯಾಗಿ ಶ್ರೇಯಸ್‌ ಪಟೇಲ್‌ ಅಖಾಡಾಕ್ಕೆ ಇಳಿದಿದ್ದಾರೆ. ಪ್ರಜ್ವಲ್‌ ಒಂದು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರೆ, ಶ್ರೇಯಸ್‌ ಪಟೇಲ್‌ ಅವರಿಗೆ ಇನ್ನೂ ಗೆಲುವು ಸಿಕ್ಕಿಲ್ಲ. ಈ ಬಾರಿ ಯಾರೇ ಗೆದ್ದರೂ ಹೊಸ ಇತಿಹಾಸ ಸೃಷ್ಟಿಯಾಗಲಿದೆ.

ಹಾಸನ ಲೋಕಸಭಾ ಕ್ಷೇತ್ರದಲ್ಲಿ 9 ಬಾರಿ ಕಾಂಗ್ರೆಸ್ ಗೆದ್ದಿದ್ದರೆ, 7 ಬಾರಿ ಜೆಡಿಎಸ್ ಗೆದ್ದುಕೊಂಡಿದೆ. ಜನತಾ ಪಾರ್ಟಿ ಹಾಗೂ ಸ್ವತಂತ್ರ ಪಕ್ಷದ ಅಭ್ಯರ್ಥಿಗಳು ಒಂದೊಂದು ಬಾರಿ ಜಯಗಳಿಸಿದ್ದಾರೆ. 1991 ರ ನಂತರ ಕ್ಷೇತ್ರದಲ್ಲಿ ಎಚ್‌.ಡಿ. ದೇವೇಗೌಡರ ಪ್ರಾಬಲ್ಯ ಹೆಚ್ಚಾಗಿದೆ. ಎಚ್.ಡಿ.ದೇವೇಗೌಡರು ಪ್ರಧಾನಿಯಾದ ಬಳಿಕ 1999 ರಲ್ಲಿ ಜಿ. ಪುಟ್ಟಸ್ವಾಮಿಗೌಡರ ಎದುರು ಒಂದು ಬಾರಿ ಸೋಲು ಒಪ್ಪಿಕೊಂಡಿದ್ದನ್ನು ಹೊರತುಪಡಿಸಿದರೆ 1991 ರ ಈಚೆಗೆ ಉಳಿದೆಲ್ಲಾ ಅವಧಿಯಲ್ಲಿ ಜೆಡಿಎಸ್ ತನ್ನ ಪಾರುಪತ್ಯವನ್ನ ಮೆರೆದಿದೆ. 

ಜೆಡಿಎಸ್‌ನ 7 ಬಾರಿಯ ಗೆಲುವಿನಲ್ಲಿ ಐದು ಬಾರಿ ಎಚ್.ಡಿ.ದೇವೇಗೌಡರು ಗೆದ್ದರೆ, ಒಂದು ಬಾರಿ ರುದ್ರೇಶ್‌ಗೌಡರು ಹಾಗೂ ಒಂದು ಬಾರಿ ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಗೆದ್ದಿದ್ದಾರೆ. ಹಾಲಿ ಪ್ರಜ್ವಲ್ ರೇವಣ್ಣ ಅವರೇ ಸಂಸದರಾಗಿದ್ದಾರೆ.

3 ದಶಕಗಳ ಕಾಲ ಪ್ರಾಬಲ್ಯ ಸಾಧಿಸಿರುವ ದೇವೇಗೌಡರ ಕುಟುಂಬವನ್ನು ಈ ಬಾರಿ ಕಟ್ಟಿ ಹಾಕಲೇಬೇಕು ಎನ್ನುವ ಸಂಕಲ್ಪ ಮಾಡಿದಂತಿರುವ ಕಾಂಗ್ರೆಸ್‌, ಎಲ್ಲ ವೈಮನಸ್ಸನ್ನು ಶಮನಗೊಳಿಸಿ, ಒಗ್ಗಟ್ಟಿನ ಹೋರಾಟಕ್ಕೆ ಮುಂದಾಗಿದೆ. ಅದಕ್ಕಾಗಿ ಯುವಕರಾಗಿರುವ ಹಾಗೂ ಪ್ರಬಲ ರಾಜಕೀಯ ಹಿನ್ನೆಲೆ ಇರುವ ಶ್ರೇಯಸ್ ಪಟೇಲ್‌ ಅವರನ್ನು ಕಣಕ್ಕೆ ಇಳಿಸಲಾಗಿದೆ.

ವಯಸ್ಸು ಸಣ್ಣದಾಗಿದ್ದರೂ, ಎಲ್ಲರೊಂದಿಗೆ ಸಮನ್ವಯ ಸಾಧಿಸಿರುವುದು ಶ್ರೇಯಸ್‌ ಪಟೇಲ್‌ ಪಾಲಿಗೆ ಪ್ಲಸ್‌ ಪಾಯಿಂಟ್‌. ಶ್ರೇಯಸ್‌ ಸ್ಪರ್ಧೆಗೆ ಕಾಂಗ್ರೆಸ್‌ನಲ್ಲಿ ಯಾವುದೇ ಅಪಸ್ವರ ವ್ಯಕ್ತವಾಗಿಲ್ಲ. ಜೊತೆಗೆ ಈಗಾಗಲೇ ಲೋಕಸಭಾ ಕ್ಷೇತ್ರದ ಎಲ್ಲೆಡೆಯೂ ಭೇಟಿ ನೀಡುತ್ತಿರುವ ಶ್ರೇಯಸ್, ಸ್ಥಳೀಯ ಕಾಂಗ್ರೆಸ್‌ ಮುಖಂಡರ ಜೊತೆಗೆ ಮತಯಾಚನೆ ಮಾಡುತ್ತಿದ್ದಾರೆ.

ಜಿಲ್ಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್‌. ರಾಜಣ್ಣ, ಜಿಲ್ಲೆಯ ಏಕೈಕ ಕಾಂಗ್ರೆಸ್‌ ಶಾಸಕ ಕೆ.ಎಂ. ಶಿವಲಿಂಗೇಗೌಡರು, ಈ ಬಾರಿ ಚುನಾವಣೆಯ ಸಾರಥ್ಯವನ್ನು ವಹಿಸಿರುವುದು ಶ್ರೇಯಸ್‌ ಅವರ ಶ್ರಮವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿದೆ. ನಾಮಪತ್ರ ಸಲ್ಲಿಕೆಯ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಭಾಗಿಯಾಗಿರುವುದು, ರ‍್ಯಾಲಿಯ ವೇಳೆ ಶ್ರೇಯಸ್‌ ತಾಯಿ ಅನುಪಮಾ ಸೆರಗೊಡ್ಡಿ ಮತ ಕೇಳಿರುವುದು ಕಾಂಗ್ರೆಸ್ಸಿಗರಿಗೆ ಹೊಸ ಆಶಾಭಾವನೆಯನ್ನು ಮೂಡಿಸಿದೆ.

ಜೆಡಿಎಸ್‌ನಿಂದಲೂ ಪ್ರಬಲ ಪೈಪೋಟಿ: ಇನ್ನೊಂದೆಡೆ ಆರಂಭದಲ್ಲಿ ಮೈತ್ರಿ ಪಕ್ಷ ಬಿಜೆಪಿ ನಾಯಕರಿಂದ ವಿರೋಧ ಎದುರಿಸಿದ್ದ ಜೆಡಿಎಸ್‌, ಇದೀಗ ನಿರಾಳವಾಗಿದೆ. ಬಿಜೆಪಿ ರಾಜ್ಯ ಹಾಗೂ ರಾಷ್ಟ್ರ ನಾಯಕರಿಂದಲೇ ಸ್ಥಳೀಯ ನಾಯಕರಿಗೆ ಸೂಚನೆ ಬಂದಿದ್ದು, ಜೆಡಿಎಸ್‌ ಅಭ್ಯರ್ಥಿ ಪರ ಪ್ರಚಾರಕ್ಕೆ ಸಿದ್ಧರಾಗುತ್ತಿದ್ದಾರೆ.

ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭೆ ಕ್ಷೇತ್ರಗಳ ಪೈಕಿ, ನಾಲ್ಕರಲ್ಲಿ ಜೆಡಿಎಸ್‌ ಶಾಸಕರಿದ್ದರೆ, ಎರಡರಲ್ಲಿ ಬಿಜೆಪಿ ಹಾಗೂ ಎರಡರಲ್ಲಿ ಕಾಂಗ್ರೆಸ್‌ ಶಾಸಕರಿದ್ದಾರೆ. ಮೈತ್ರಿಕೂಟವನ್ನು ಪರಿಗಣಿಸಿದರೆ, 6 ಕ್ಷೇತ್ರಗಳಲ್ಲಿ ಪ್ರಾಬಲ್ಯ ಇದೆ. ಹೀಗಾಗಿ ಪ್ರಜ್ವಲ್‌ ರೇವಣ್ಣ, ಸುಲಭವಾಗಿ ಜಯಗಳಿಸಬಹುದು ಎನ್ನುವ ಲೆಕ್ಕಾಚಾರ ಜೆಡಿಎಸ್ ನಾಯಕರದ್ದಾಗಿದೆ.

ಸ್ವತಃ ಎಚ್‌.ಡಿ. ದೇವೇಗೌಡರೇ ಜಿಲ್ಲೆಯಲ್ಲಿ ಠಿಕಾಣಿ ಹೂಡಿದ್ದು, ಮೊಮ್ಮಗನ ಪರ ಪ್ರಚಾರ ನಡೆಸುತ್ತಿದ್ದಾರೆ. ಇನ್ನೊಂದೆಡೆ ಎಚ್‌.ಡಿ. ರೇವಣ್ಣ ಅವರು, ಇತರ ಪಕ್ಷಗಳ ಮುಖಂಡರನ್ನು ಜೆಡಿಎಸ್‌ಗೆ ಸೆಳೆಯುವ ಕಾರ್ಯ ಆರಂಭಿಸಿದ್ದಾರೆ. ಇದೆಲ್ಲವೂ ಜೆಡಿಎಸ್‌ ಅಭ್ಯರ್ಥಿಗೆ ಅನುಕೂಲರವಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್‌. ರಾಜಣ್ಣ ಜೊತೆಗೆ ಚರ್ಚೆಯಲ್ಲಿ ನಿರತರಾಗಿರುವ ಕಾಂಗ್ರೆಸ್‌ ಅಭ್ಯರ್ಥಿ ಶ್ರೇಯಸ್‌ ಪಟೇಲ್‌
ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್‌. ರಾಜಣ್ಣ ಜೊತೆಗೆ ಚರ್ಚೆಯಲ್ಲಿ ನಿರತರಾಗಿರುವ ಕಾಂಗ್ರೆಸ್‌ ಅಭ್ಯರ್ಥಿ ಶ್ರೇಯಸ್‌ ಪಟೇಲ್‌
ಜೆಡಿಎಸ್‌ ನಾಯಕರಿಗೆ ಎಲ್ಲ ರೀತಿಯ ಅಧಿಕಾರವನ್ನು ಜಿಲ್ಲೆಯ ಜನರು ಕೊಟ್ಟಿದ್ದಾರೆ. ಈಗ ನನಗೂ ಒಂದು ಬಾರಿ ಅವಕಾಶ ನೀಡುವಂತೆ ಕೇಳುತ್ತಿದ್ದೇನೆ. ಜಯಗಳಿಸಿದರೆ ಮನೆಯ ಮಗನಾಗಿ ಕೆಲಸ ಮಾಡುತ್ತೇನೆ.
ಶ್ರೇಯಸ್ ಪಟೇಲ್‌ ಕಾಂಗ್ರೆಸ್‌ ಅಭ್ಯರ್ಥಿ
ಈಗಿನ ಕಾಂಗ್ರೆಸ್ ಅಭ್ಯರ್ಥಿ ಎಷ್ಟು ಜನರ ಬಳಿ ಬಂದು ಮಾತನಾಡಿಸಿದ್ದಾರೆ? ಯಾರದ್ದಾದರೂ ಕಣ್ಣೀರು ಒರೆಸಿದ್ದಾರಾ? ಅವರದ್ದೇ ಸರ್ಕಾರ ಇದೆಯಲ್ಲ ಒಮ್ಮೆಯಾದರೂ ಜನರ ಬಳಿ ಬಂದು ಕಷ್ಟ ಕೇಳಿದ್ದಾರೆಯೇ?
ಪ್ರಜ್ವಲ್‌ ರೇವಣ್ಣ ಎನ್‌ಡಿಎ ಅಭ್ಯರ್ಥಿ

ಎನ್‌ಡಿಎ ಅಭ್ಯರ್ಥಿ ಪ್ರಜ್ವಲ್ ನಾಮಪತ್ರ ಇಂದು ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಯಾಗಿ ಪ್ರಜ್ವಲ್ ರೇವಣ್ಣ ಅಧಿಕೃತವಾಗಿ ಗುರುವಾರ (ಏ.4) ನಾಮಪತ್ರ ಸಲ್ಲಿಸಲಿದ್ದಾರೆ. ಮಾ.28 ರಂದು ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ್ದ ಪ್ರಜ್ವಲ್ ರೇವಣ್ಣ ಗುರುವಾರ ಬೆಳಿಗ್ಗೆ 11.15ಕ್ಕೆ ನಗರದ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಉಮೇದುವಾರಿಕೆ ಸಲ್ಲಿಸಲಿದ್ದಾರೆ. ಜೆಡಿಎಸ್‌ ವರಿಷ್ಠ ಎಚ್.ಡಿ.ದೇವೇಗೌಡ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಜರಿರುವರು. ನಂತರ ಸಾಲಗಾಮೆ ರಸ್ತೆಯ ಜಿಲ್ಲಾ ಕ್ರೀಡಾಂಗಣ ಮುಂಭಾಗದಿಂದ ರ‍್ಯಾಲಿ ಆರಂಭವಾಗಲಿದೆ. ಸಹ್ಯಾದ್ರಿ ಸರ್ಕಲ್ ಮಹಾವೀರ ಸರ್ಕಲ್ ಮೂಲಕ ಹೇಮಾವತಿ ಪ್ರತಿಮೆ ಮುಂಭಾಗಕ್ಕೆ ತಲುಪಿದ ನಂತರ ದೇವೇಗೌಡರು ವಿಜಯೇಂದ್ರ ಸೇರಿದಂತೆ ಪ್ರಮುಖ ನಾಯಕರು ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಜಿಲ್ಲೆಯ ಜೆಡಿಎಸ್ ಶಾಸಕರು ಬಿಜೆಪಿ ಶಾಸಕರು ಉಭಯ ಪಕ್ಷಗಳ ಮಾಜಿ ಶಾಸಕರು ಹಿರಿಯ ಮುಖಂಡರು ಜಿಲ್ಲಾ ಘಟಕದ ಅಧ್ಯಕ್ಷರು ಪ್ರಧಾನ ಕಾರ್ಯದರ್ಶಿಗಳು ಉಪಸ್ಥಿತರಿರುವರು. ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎರಡೂ ಪಕ್ಷಗಳ ಸ್ಥಳೀಯ ಸಂಸ್ಥೆಗಳ ಚುನಾಯಿತ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಮುಖಂಡರು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಜೆಡಿಎಸ್ ಜಿಲ್ಲಾ ವಕ್ತಾರ ರಘು ಹೊಂಗೆರೆ ಮನವಿ ಮಾಡಿದ್ದಾರೆ.

ಲೋಕಸಭೆ ಚುನಾವಣೆ ಅಭ್ಯರ್ಥಿಗಳ ವಿವರ ಹೆಸರು; ಪ್ರಜ್ವಲ್‌ ರೇವಣ್ಣ; ಶ್ರೇಯಸ್‌ ಪಟೇಲ್‌ ಪಕ್ಷ; ಜೆಡಿಎಸ್‌; ಕಾಂಗ್ರೆಸ್‌ ವಿದ್ಯಾರ್ಹತೆ; ಬಿಇ; ಬಿಬಿಎಂ ವಯಸ್ಸು; 34 ವರ್ಷ; 32 ವರ್ಷ ಒಟ್ಟು ಆಸ್ತಿ; ₹40.94 ಕೋಟಿ; ₹40.99 ಕೋಟಿ ರಾಜಕೀಯ ಹಿನ್ನೆಲೆ; ಎಚ್‌.ಡಿ. ದೇವೇಗೌಡರ ಮೊಮ್ಮಗ; ಪುಟ್ಟಸ್ವಾಮಿ ಗೌಡರ ಮೊಮ್ಮಗ ರಾಜಕೀಯ ಅನುಭವ: ಒಂದು ಬಾರಿ ಸಂಸದ; ವಿಧಾನಸಭೆ ಚುನಾವಣೆ ಸ್ಪರ್ಧೆ- ಸೋಲು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT