ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನಾಂಬ ದೇವಾಲಯ: ದರ್ಶನೋತ್ಸವದ ಸಿದ್ಧತೆ ಪರಿಶೀಲನೆ

ಹಾಸನಾಂಬ ದೇವಾಲಯಕ್ಕೆ ಡಿ.ಸಿ ಭೇಟಿ, ಅಧಿಕಾರಿಗಳೊಂದಿಗೆ ಚರ್ಚೆ
Last Updated 28 ಅಕ್ಟೋಬರ್ 2020, 14:38 IST
ಅಕ್ಷರ ಗಾತ್ರ

ಹಾಸನ: ಹಾಸನಾಂಬ ಹಾಗೂ ಸಿದ್ದೇಶ್ವರ ದೇವಾಲಯದ ಆವರಣಕ್ಕೆ ಜಿಲ್ಲಾಧಿಕಾರಿ ಆರ್‌.ಗಿರೀಶ್‌ ಬುಧವಾರ ಭೇಟಿ ನೀಡಿ ಈ ಬಾರಿಯ ದರ್ಶನೋತ್ಸವದ ಪೂರ್ವ ಸಿದ್ಧತೆಗಳ ಪರಿಶೀಲನೆ ನಡೆಸಿ, ಅಧಿಕಾರಿಗಳಿಗೆ ಹಲವು ಸಲಹೆ, ಸೂಚನೆ ನೀಡಿದರು.

ದರ್ಶನೋತ್ಸವದ ಸಂದರ್ಭದಲ್ಲಿ ಅನುಸರಿಸಬೇಕಾದ ಕ್ರಮಗಳು ಹಾಗೂ ವ್ಯವಸ್ಥೆಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದರು.

ಕೋವಿಡ್ ಪ್ರಕರಣ ಹೆಚ್ಚುತ್ತಿರುವುದರಿಂದ ಸಾರ್ವಜನಿಕರಿಗೆ ದೇವಸ್ಥಾನದ ಒಳಗೆ ದೇವಿಯ ದರ್ಶನ ಮಾಡಲು ಅನುಮತಿ ಇಲ್ಲದ ಕಾರಣ ಎಲ್‌ಇಡಿ ಪರದೆಗಳನ್ನು ದೇವಸ್ಥಾನದ ಆವರಣ ಹಾಗೂ ನಗರದ ಇತರೆ ಭಾಗಗಳಲ್ಲಿ ಅಳವಡಿಸಲಾಗುತ್ತಿದ್ದು, ಅದಕ್ಕೆ ಆಯ್ಕೆ ಮಾಡಿರುವ ಸ್ಥಳಗಳನ್ನು ಪರಿಶೀಲಿಸಿದರು.

ಸಾರ್ವಜನಿಕರು ದೇವಾಲಯದ ಹೊರ ಆವರಣಕ್ಕೆ ಬಂದರೆ ಜನಸಂದಣಿ ಆಗದಂತೆ ಬ್ಯಾರಿಕೇಡ್‍ಗಳನ್ನು ಕ್ರಮಬದ್ಧವಾಗಿ
ಅಳವಡಿಸಬೇಕು. ದೇವಸ್ಥಾನದ ಸುತ್ತಮುತ್ತ ಇರುವ ರಸ್ತೆಗಳಲ್ಲಿ ಕೆಲವನ್ನು ಏಕಮುಖ ಸಂಚಾರ ವ್ಯವಸ್ಥೆ ಮಾಡಬೇಕು. ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಯಾವುದೇ ರೀತಿಯ ತೊಂದರೆಗಳು ಉಂಟಾಗದಂತೆ ಎಲ್ಲವನ್ನು ಅಚ್ಚುಕಟ್ಟಾಗಿ ನೆರವೇರಿಸಬೇಕು. ಲೈಟ್ ಸ್ಕ್ರೀನಿಂಗ್ ಉತ್ತಮ ಗುಣಮಟ್ಟದಿಂದ ಕೂಡಿರಬೇಕು ಎಂದು ಅಧಿಕಾರಿಗಳಿಗೆ ಹೇಳಿದರು.

ಇದೇ ವೇಳೆ ದೇವಸ್ಥಾನದ ಸುತ್ತಲಿನ ರಸ್ತೆ ವ್ಯವಸ್ಥೆ ಹಾಗೂ ಸಂತೇಪೇಟೆ ವೃತ್ತದಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿ ವೀಕ್ಷಿಸಿ ನಗರಸಭೆ, ಲೋಕೋಪಯೋಗಿ ಹಾಗೂ ರಾಜ್ಯ ಹೆದ್ದಾರಿ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಕವಿತಾ ರಾಜಾರಾಂ, ನಗರಸಭೆ ಆಯುಕ್ತ ಕೃಷ್ಣಮೂರ್ತಿ, ಉಪವಿಭಾಗಾಧಿಕಾರಿ ಬಿ.ಎ. ಜಗದೀಶ್, ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಸಂಜಯ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಸಹಾಯಕ ಎಂಜಿನಿಯರ್‌ ಎನ್.ಟಿ. ಸುರೇಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT