ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಹುಬೆಳೆ ಪ್ರಯೋಗ ಜಾರಿಗೊಳಿಸಿ

ಮಾದರಿ ಸಂಯೋಜಿತ ಬೇಸಾಯ ಯೋಜನೆ ಜಾರಿಗೆ ತರಲು ಸೂಚನೆ
Last Updated 25 ಜೂನ್ 2019, 15:20 IST
ಅಕ್ಷರ ಗಾತ್ರ

ಹಾಸನ: ಜಿಲ್ಲೆಯಲ್ಲಿ ಕೃಷಿ, ತೋಟಗಾರಿಕೆ, ರೇಷ್ಮೆ, ಪಶುಪಾಲನೆ ಮತ್ತು ಅರಣ್ಯ ಇಲಾಖೆಗಳು ಜಂಟಿಯಾಗಿ ಮಾದರಿ ಸಂಯೋಜಿತ ಬೇಸಾಯ ಯೋಜನೆ ಜಾರಿಗೆ ತರುವ ಮೂಲಕ ರೈತರ ಆರ್ಥಿಕ ಸಬಲೀಕರಣಕ್ಕೆ ಕ್ರಮಕೈಗೊಳ್ಳಬೇಕು ಎಂದು ಸಚಿವ ಎಚ್.ಡಿ .ರೇವಣ್ಣ ಹೇಳಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ವಿವಿಧ ಯೋಜನೆಗಳ ಅನುಷ್ಠಾನ ಕುರಿತಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಭೆ ನಡೆಸಿದ ಅವರು ಸರ್ಕಾರದ ಎಲ್ಲಾ ಯೋಜನೆಗಳನ್ನು ಸಕಾಲದಲ್ಲಿ ಅನುಷ್ಠಾನಗೊಳಿಸುವಂತೆ ನಿರ್ದೇಶನ ನೀಡಿದರು.

ಜಿಲ್ಲೆಯ ಕೃಷಿ ಕ್ಷೇತ್ರದಲ್ಲಿ ಹೊಸ ಸುಧಾರಣಾತ್ಮಕ ಕ್ರಮಗಳನ್ನು ಕೈಗೊಳ್ಳುವ ಮೂಲಕ ರೈತರಲ್ಲಿ ಅತ್ಮವಿಶ್ವಾಸ ತುಂಬಬೇಕು. ಉದ್ಯೋಗ ಖಾತರಿ ಯೋಜನೆಯನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಂಡು, ಅಂತರಿಕ ಬಹುಬೆಳೆ ಪ್ರಯೋಗ ಜಾರಿಗೆ ತರುವಂತೆ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.

ಲಾಭದಾಯಕ ಮಿಶ್ರ ಬೇಸಾಯ ಪದ್ಧತಿ ಜಾರಿ ಬಗ್ಗೆ ಹಲವು ದಿನಗಳಿಂದ ತಮ್ಮದೇ ಆದ ಚಿಂತನೆ ಹೊಂದಿದ್ದು, ಅದರ ಜಾರಿಯ ಮಾರ್ಗೋಪಾಯಗಳು ಹಾಗೂ ಅದರಿಂದಾಗುವ ಲಾಭದ ಕುರಿತು ಸಭೆಯಲ್ಲಿ ಸಚಿವರೇ ಅಧಿಕಾರಿಗಳಿಗೆ ವಿವರಿಸಿದರು.

ವಸತಿ ಯೋಜನೆಗಳ ಅನುಷ್ಠಾನ ಚುರುಕಾಗಬೇಕು, ಯಾವುದೇ ದಾಕ್ಷಿಣ್ಯಗಳಿಲ್ಲದೆ ಪಕ್ಷಾತೀತವಾಗಿ ಎಲ್ಲಾ ವಸತಿ ರಹಿತರಿಗೆ ಮನೆಗಳನ್ನು ಒದಗಿಸಬೇಕು. ಪಿಡಿಒಗಳು ಹೆಚ್ಚು ಸಮರ್ಥವಾಗಿ ಕೆಲಸ ಮಾಡಬೇಕು. ಯೋಜನೆಗಳ ಪರಿಣಾಮಕಾರಿ ಅನುಷ್ಠಾನದ ಜೊತೆಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸ್ವತ್ತುಗಳನ್ನು ಸುರಕ್ಷಿತಗೊಳಿಸಬೇಕು ಎಂದು ಅವರು ಹೇಳಿದರು.

ರೈತರ ಜಮೀನುಗಳ ಜೊತೆಗೆ ತೋಟಗಾರಿಕೆ ಇಲಾಖೆ ಫಾರಂಗಳಲ್ಲಿಯೂ ಮಾದರಿ ಬೇಸಾಯ ಜಾರಿಗೊಳ್ಳಬೇಕು. ಅದಕ್ಕೆ ಅಗತ್ಯವಿರುವ ಅನುದಾನ ಒದಗಿಸಲಾಗುವುದು. ಅದೇ ರೀತಿ ಸೋಮನಹಳ್ಳಿ ಕಾವಲ್‍ನಲ್ಲಿ ತೋಟಗಾರಿಕೆ ಕಾಲೇಜು ಪ್ರಾರಂಭಕ್ಕೂ ಅಗತ್ಯ ಸಿದ್ಧತೆ ಮಾಡಿಕೊಳ್ಳಿ ಎಂದು ಅವರು ತಿಳಿಸಿದರು.

ಜಿಲ್ಲೆಯಲ್ಲಿ ಆಲೂಗಡ್ಡೆ ಬೇಸಾಯ ಪ್ರದೇಶ ಕ್ಷೀಣಿಸುತ್ತಿದೆ, ಇದನ್ನು ತಪ್ಪಿಸಲು ಸೂಕ್ತ ಪ್ರೋತ್ಸಾಹ ಕ್ರಮಗಳನ್ನು ಜಾರಿಗೊಳಿಸಿ, ಸಬ್ಸಿಡಿ ಹಣವನ್ನು ತ್ವರಿತವಾಗಿ ರೈತರ ಖಾತೆಗಳಿಗೆ ವರ್ಗಾಯಿಸಿ ಎಂದು ಸಚಿವರು ಹೇಳಿದರು.

ಜಿಲ್ಲೆಯಲ್ಲಿ ಜಲಾಮೃತ, ಜಲ ಸಂವರ್ಧನೆ ಯೋಜನೆಗಳು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು. ದೇಶದ ನಾನಾ ಭಾಗಗಳಲ್ಲಾಗಿರುವ ಯಶೋಗಾಥೆಗಳನ್ನು ಪರಿಶೀಲಿಸಿ ಜಿಲ್ಲೆಯಲ್ಲೂ ಅದನ್ನು ಸಾಧ್ಯತೆ ಆಧಾರದ ಮೇಲೆ ಜಾರಿಗೊಳಿಸಿ ಎಂದರಲ್ಲದೆ, ಪಶು ಸಂಗೋಪನೆ ಪ್ರೋತ್ಸಾಹಿಸಿ ಎಂದು ಸಚಿವ ರೇವಣ್ಣ ಹೇಳಿದರು.

ಜಿಲ್ಲಾ ಮಟ್ಟದ ಅಧಿಕಾರಿಗಳು ತಾಲ್ಲೂಕು ಹಾಗೂ ಗ್ರಾಮ ಮಟ್ಟಕ್ಕೆ ತೆರಳಿ ಎಲ್ಲಾ ಕಾರ್ಯಕ್ರಮಗಳು ಸಮರ್ಪಕವಾಗಿ ಅನುಷ್ಠಾನವಾಗುವಂತೆ ನೋಡಿಕೊಳ್ಳಬೇಕು, ನಿರಂತರ ಮೇಲ್ವಿಚಾರಣೆ ಮಾಡಬೇಕು, ಯಾವುದೇ ಹಣ ಸದ್ಬಳಕೆಯಾಗದೆ ಉಳಿಯದಂತೆ ಎಚ್ಚರ ವಹಿಸಬೇಕು ಎಂದರು.

ಜಿಲ್ಲಾಧಿಕಾರಿ ಅಕ್ರಂ ಪಾಷಾ ಮಾತನಾಡಿ, ಪ್ರಧಾನ ಮಂತ್ರಿ ಕಿಸಾನ್ ಯೋಜನೆ ಅನುಷ್ಠಾನಕ್ಕೆ ದಾಖಲೆ ಗಣಕೀಕರಣದಲ್ಲಿ ಜಿಲ್ಲೆ ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ. ಜಿಲ್ಲೆಯಲ್ಲಿ ಇದರ ಲಾಭ ದೊರೆಯುವ 5 ಲಕ್ಷ ಫಲಾನುಭವಿಗಳ ಪೈಕಿ ಎರಡೂವರೆ ಲಕ್ಷ ರೈತರ ದಾಖಲೆ ಸಂಗ್ರಹಿಸಿದ್ದು, ಅವುಗಳೆಲ್ಲದರ ಗಣಕೀಕರಣ ತ್ವರಿತವಾಗಿ ಮುಗಿಯಬೇಕು. ಇದಕ್ಕೆ ಪಿಡಿಒಗಳ ಸಹಕಾರವೂ ಅಗತ್ಯ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ವೇತಾ ದೇವರಾಜ್, ಉಪಾಧ್ಯಕ್ಷ ಸ್ವರೂಪ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪುಟ್ಟಸ್ವಾಮಿ, ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಎಲ್ ವೈಶಾಲಿ, ಉಪ ವಿಭಾಗಾಧಿಕಾರಿಗಳಾದ ಎಚ್.ಎಲ್ ನಾಗರಾಜ್, ಕವಿತಾ ರಾಜಾರಾಂ ಹಾಗೂ ವಿವಿಧ ಇಲಾಖಾ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT