ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೇಮೆ ಒಡಲು ತುಂಬದಿದ್ದರೂ ನದಿಗೆ ನೀರು

ಹೇಮಾವತಿ ಜಲಾಶಯಕ್ಕೆ ಒಳ ಹರಿವು ಕ್ಷೀಣ, ಮಳೆ ಬರದಿದ್ದರೆ ಕುಡಿವ ನೀರಿಗೆ ಹಾಹಾಕಾರ
Last Updated 5 ಆಗಸ್ಟ್ 2019, 20:00 IST
ಅಕ್ಷರ ಗಾತ್ರ

ಹಾಸನ: ಜಿಲ್ಲೆಯ ಜೀವನಾಡಿ ಹೇಮಾವತಿ ಜಲಾಶಯ ಈ ವರ್ಷ ಜುಲೈ ಮುಗಿದರೂ ಭರ್ತಿಯಾಗಿಲ್ಲ. ಆಗಸ್ಟ್‌ನಲ್ಲೂ ಮಳೆ ಅಭಾವ ಮುಂದುವರೆದಿದ್ದರೂ ಅಣೆಕಟ್ಟೆಯಿಂದ ನದಿಗೆ ಐದು ಸಾವಿರ ಕ್ಯುಸೆಕ್‌ ನೀರು ಹರಿಸಲಾಗುತ್ತಿದೆ.

37.10 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ ಪ್ರಸ್ತುತ 15.85 ಟಿಎಂಸಿ ಮಾತ್ರ ನೀರಿದೆ. ಬಳಕೆಗೆ ಲಭ್ಯ ನೀರು 11.48 ಟಿಎಂಸಿ. ಕಳೆದ ವರ್ಷ ಇದೇ ಅವಧಿಗೆ ಜಲಾಶಯ ಭರ್ತಿಯಾಗಿತ್ತು.

ಈ ವರ್ಷ ಶೇಕಡಾ ಇನ್ನೂ ಶೇಕಡಾ 50 ರಷ್ಟು ನೀರು ಸಂಗ್ರಹವಾಗಿಲ್ಲ. ಆದರೂ ನದಿಗೆ ನೀರು ಹರಿಸುತ್ತಿರುವುದು ಅಚ್ಚರಿ ಮೂಡಿಸಿದೆ.

ಕಾವೇರಿ ನಿರ್ವಹಣಾ ಪ್ರಾಧಿಕಾರದ ಸೂಚನೆಯಂತೆ ತಮಿಳುನಾಡಿಗೆ ನೀರು ಬಿಡುಗಡೆ ಮಾಡಲಾಗುತ್ತಿದೆ ಎನ್ನಲಾಗಿದೆ. ಆದರೆ, ಈ ಬಗ್ಗೆ ಜಲಾಶಯದ ಅಧಿಕಾರಿಗಳು ಮಾಹಿತಿ ನೀಡಲು ನಿರಾಕರಿಸಿದರು.

ಜುಲೈ 27 ರಿಂದ ನದಿ ಮೂಲಕ ನೀರು ಹರಿಸುವುದನ್ನು ಹೆಚ್ಚು ಮಾಡಲಾಗಿದೆ. ಜುಲೈ 26 ರಂದು ನದಿಗೆ ಹೊರ ಹರಿವು 200 ಕ್ಯುಸೆಕ್ ಇತ್ತು. 27 ರಂದು ಏಕಾಏಕಿ 1250 ಕ್ಯುಸೆಕ್ ಗೆ ಏರಿತು. ‌

ಜುಲೈ 28, 29 ರಂದು 2500 ಕ್ಯುಸೆಕ್, 30 ರಂದು 5449 ಕ್ಯುಸೆಕ್‌, 31 ಮತ್ತು ಆ. 1 ರಂದು 5 ಸಾವಿರ ಕ್ಯುಸೆಕ್ ಇದ್ದುದನ್ನು 2 ರಂದು 3800 ಕ್ಯುಸೆಕ್ ಗೆ ಇಳಿಸಲಾಗಿದೆ.

ಜಲಾನಯನ ಪ್ರದೇಶಗಳಾದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಮತ್ತು ಸಕಲೇಶಪುರದದಲ್ಲಿ ಮಳೆಯಾಗದ ಕಾರಣ
ನಿರೀಕ್ಷಿತ ಪ್ರಮಾಣದ ನೀರು ಹರಿದು ಬಂದಿಲ್ಲ. ಹಾಗಾಗಿ ಕೃಷಿಗೆ ಮಾತ್ರವಲ್ಲ ಕುಡಿಯುವ ನೀರಿಗೂ ಪರದಾಡಬೇಕಾದ ಪರಿಸ್ಥಿತಿ ನಿರ್ಮಾ ಣವಾಗುವ ಆತಂಕ ಎದುರಾಗಿದೆ.

ಹಾಸನ ನಗರಕ್ಕೆ ನಿತ್ಯ 13 ಎಂ.ಎಲ್‌.ಡಿ ನೀರಿನ ಅವಶ್ಯಕತೆಯಿದ್ದು, ಈಗ 8.5 ಎಂ.ಎಲ್‌.ಡಿ ಮಾತ್ರ ಲಭ್ಯವಾಗುತ್ತಿದೆ. ಸದ್ಯ ಪ್ರತಿದಿನ ನೀರು ಸರಬರಾಜು ಮಾಡಲಾಗುತ್ತಿದೆ. ಆದರೆ, ಹದಿನೈದು ದಿನಗಳಲ್ಲಿ ಉತ್ತಮ ಮಳೆಯಾಗದಿದ್ದರೆ ನೀರಿಗೆ ಪರದಾಡಬೇಕಾಗುತ್ತದೆ.

ಡ್ಯಾಂ ಭರ್ತಿಯಾದ ಪರಿಣಾಮ 2018ರ ಜುಲೈ 14ರಂದು ಕಾಲುವೆಗೆ ನೀರು ಬಿಡಲಾಗಿತ್ತು. ಕಳೆದ ವರ್ಷ ಶೇಕಡಾ 96ರಷ್ಟು ಅಧಿಕ ಮಳೆಯಾದರೆ, ಈ ಬಾರಿ ಶೇಕಡಾ 30ರಷ್ಟು ಕೊರತೆ ಉಂಟಾಗಿದೆ. ಜೋಳ, ರಾಗಿ, ಆಲೂಗಡ್ಡೆ ಹಾಗೂ ವಿವಿಧ ಧಾನ್ಯಗಳ ಬಿತ್ತನೆ ಮಾಡಿರುವ ರೈತರು ಕಂಗಾಲಾಗಿದ್ದಾರೆ.

ನಾಲೆಯಲ್ಲಿ ಹರಿವಿಲ್ಲ
ಕಳೆದ ವರ್ಷ ಹೇಮೆ ಅಚ್ಚುಕಟ್ಟು ಭಾಗದ ಎಲ್ಲಾ ನಾಲೆಗಳಲ್ಲಿ ನೀರು ಹರಿಸಲಾಗುತ್ತಿತ್ತು. ಎಡದಂಡೆ ನಾಲೆಗೆ 2300 ಕ್ಯುಸೆಕ್‌, ಬಲದಂಡೆ ನಾಲೆಗೆ 250 ಕ್ಯುಸೆಕ್‌, ಬಲ ಮೇಲ್ಡಂಡೆ ನಾಲೆಗೆ 650 ಕ್ಯುಸೆಕ್‌ ನೀರು ಬಿಡಲಾಗಿತ್ತು. ಆದರೆ, ಈ ವರ್ಷ ಯಾವುದೇ ನಾಲೆಗೂ ಇನ್ನೂ ನೀರು ಬಿಟ್ಟಿಲ್ಲ.
2018ರಲ್ಲಿ ಈ ಅವಧಿಗೆ ಭರಪೂರ ನೀರು ಹರಿಯುತ್ತಿದ್ದುದರಿಂದ ಭತ್ತದ ನಾಟಿ ಕಾರ್ಯವೂ ಆರಂಭವಾಗಿತ್ತು. ಪ್ರಸಕ್ತ ವರ್ಷ ಭತ್ತ ಬೆಳೆಯುವ ಗದ್ದೆಗಳನ್ನು ಉಳುಮೆ ಮಾಡುವುದಾಗಲಿ, ಪೈರು ಬೆಳೆಸುವುದಾಗಲೀ ಮಾಡಿಲ್ಲ.

ಹಲವು ತಾಲ್ಲೂಕುಳಿಗೆ ಹೇಮಾವತಿ ಆಸರೆ
ತುಮಕೂರು, ಹಾಸನ, ಮಂಡ್ಯ, ಮೈಸೂರು ಜಿಲ್ಲೆಯ 7 ಲಕ್ಷ ಎಕರೆ ಅಚ್ಚುಕಟ್ಟು ಪ್ರದೇಶದ ಬೆಳೆಗಳಿಗೆ ಹಾಗೂ ಕುಡಿಯುವ ನೀರನ್ನು ಹೇಮಾವತಿ ಜಲಾಶಯದಿಂದ ಪೂರೈಸಲಾಗುತ್ತದೆ.ಈ ಪೈಕಿ ತುಮಕೂರು ಮತ್ತು ಮಂಡ್ಯ ಅತಿ ಹೆಚ್ಚು ಅಚ್ಚುಕಟ್ಟು ಪ್ರದೇಶ ಹೊಂದಿದೆ. ಅರಕಲಗೂಡು, ಚನ್ನರಾಯಪಟ್ಟಣ, ಹೊಳೆನರಸೀಪುರ ತಾಲ್ಲೂಕುಗಳಿಗೆ ಹೇಮಾವತಿಯೇ ಆಸರೆಯಾಗಿದೆ.

*
ಜಲಾಶಯ ಭರ್ತಿಯಾಗುವ ಮುನ್ನವೇ ನದಿಗೆ ನೀರು ಬಿಡುತ್ತಿರುವುದು ಸರಿಯಲ್ಲ. ಮಳೆಯಾ ಗದಿದ್ದರೆ ಜನ, ಜಾನುವಾರುಗಳು ಪರದಾಡಬೇಕಾಗುತ್ತದೆ.
-ಕೊಟ್ಟೂರು ಶ್ರೀನಿವಾಸ್, ರೈತ ಸಂಘದ ಜಿಲ್ಲಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT