ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪೆನ್‌ಡ್ರೈವ್‌ ಪ್ರಕರಣ | ಹಾಸನ ಚಲೋ ಪ್ರತಿಭಟನೆ ಇಂದು

ರಾಜ್ಯದ ಹಲವೆಡೆಯಿಂದ ಸಂಘಟನೆಗಳ ಪ್ರತಿನಿಧಿಗಳು ಭಾಗಿ
Published 30 ಮೇ 2024, 0:02 IST
Last Updated 30 ಮೇ 2024, 0:02 IST
ಅಕ್ಷರ ಗಾತ್ರ

ಹಾಸನ: ‘ಲೈಂಗಿಕ ದೌರ್ಜನ್ಯ ನಡೆಸಿರುವ ಸಂಸದ ಪ್ರಜ್ವಲ್‌ ರೇವಣ್ಣ ಬಂಧನ ಆಗಬೇಕು. ಪೆನ್‌ಡ್ರೈವ್‌ ಹಂಚುವ ಮೂಲಕ ಮಹಿಳೆಯ ಮಾನ ಹರಾಜು ಮಾಡಿದ ಆರೋಪಿಗಳಿಗೆ ಶಿಕ್ಷೆ ಆಗಬೇಕು’ ಎಂದು ಆಗ್ರಹಿಸಿ ಕರ್ನಾಟಕ ಜನಪರ ಚಳವಳಿಗಳ ಒಕ್ಕೂಟದಿಂದ ಮೇ 30ರಂದು ನಗರದಲ್ಲಿ ಹಾಸನ ಚಲೋ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ.

ರಾಜ್ಯದ ಹಲವೆಡೆಗಳಿಂದ 113 ಸಂಘಟನೆಗಳ ಸುಮಾರು 10 ಸಾವಿರ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆ ಇದೆ. ಹಾಸನದ ಹೇಮಾವತಿ ಪ್ರತಿಮೆಯ ಬಳಿಯಿಂದ ಮೆರವಣಿಗೆ ಆರಂಭ ವಾಗಲಿದ್ದು, ಜಿಲ್ಲಾಧಿಕಾರಿ ಕಚೇರಿ ಬಳಿಯ ಹೊಸ ಬಸ್‌ನಿಲ್ದಾಣ ರಸ್ತೆಯಲ್ಲಿ ಬಹಿರಂಗ ಸಭೆ ನಡೆಯಲಿದೆ.

ಸಿಪಿಎಂ ನಾಯಕಿ ಸುಭಾಷಿಣಿ ಅಲಿ, ಜನವಾದಿ ಮಹಿಳಾ ಸಂಘಟನೆ ಅಧ್ಯಕ್ಷೆ ಮೀನಾಕ್ಷಿ ಬಾಳಿ, ಲೇಖಕಿಯರಾದ ಬಾನು ಮುಷ್ತಾಕ್‌, ರೂಪ ಹಾಸನ ಸೇರಿದಂತೆ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಭಾಗ ವಹಿಸಲಿದ್ದಾರೆ. ಹಲವು ಮುಖಂಡರು ಬುಧವಾರವೇ ನಗರಕ್ಕೆ ಬಂದರು. 

‘ಕೆಲವು ಸಂಘಟನೆಗಳು ಸಂಸದ ಪ್ರಜ್ವಲ್‌ ಬಂಧನಕ್ಕೆ ಆಗ್ರಹಿಸಲು ಮುಂದಾ ಗಿದ್ದು, ಅದಕ್ಕೆ ಆಕ್ಷೇಪ ವ್ಯಕ್ತವಾಗಿತ್ತು. ಪೆನ್‌ ಡ್ರೈವ್‌ ಹಂಚಿ ಮಹಿಳೆಯರ ಮಾನ ಹರಾಜು ಮಾಡಿದವರನ್ನೂ ಬಂಧಿಸು ವಂತೆ ಆಗ್ರಹಿಸಬೇಕು ಎನ್ನುವ ಚರ್ಚೆಯಾಗಿದ್ದರಿಂದ ಪ್ರಜ್ವಲ್‌ ಬಂಧನ ಹಾಗೂ ಪೆನ್‌ಡ್ರೈವ್‌ ಹಂಚಿದವರ ಮೇಲೆ ಕ್ರಮಕ್ಕೆ ಆಗ್ರಹಿಸಿ ಹಾಸನ ಚಲೋ ನಡೆಸಲು ನಿರ್ಧರಿಸಲಾಗಿದೆ’ ಎಂದು ಸಂಘಟನೆಗಳ ಪ್ರಮುಖರು ತಿಳಿಸಿದ್ದಾರೆ.

ಸಂಘಟನೆಗಳಿಗೆ ತಮ್ಮದೇ ಬ್ಯಾನರ್‌, ಬಾವುಟ ತರದಂತೆ ಸೂಚಿಸಲಾಗಿದೆ. ಒಕ್ಕೂಟವೇ ಬಾವುಟ, ಕರಪತ್ರ ಪತ್ರ ಸಿದ್ಧ ಪಡಿಸಿದೆ. ಸಾಮಾಜಿಕ ಮಾಧ್ಯಮಗಳಲ್ಲೂ ಪೋಸ್ಟರ್‌ ಅಭಿಯಾನವೂ ನಡೆದಿದೆ.

ಪ್ರಜ್ವಲ್ ಹಾಸಿಗೆ, ದಿಂಬು ಎಸ್ಐಟಿ ವಶಕ್ಕೆ

ಹಾಸನ: ಸಂಸದ ಪ್ರಜ್ವಲ್ ರೇವಣ್ಣ ಬೆಂಗಳೂರಿಗೆ ವಾಪಸಾಗುವ ದಿನ ಸಮೀಪಿಸುತ್ತಿದ್ದಂತೆ, ಎಸ್‌ಐಟಿ ತಂಡ ಸಾಕ್ಷ್ಯ ಸಂಗ್ರಹ ಕಾರ್ಯವನ್ನು ತೀವ್ರಗೊಳಿಸಿದೆ.

ನಗರದ ಆರ್.ಸಿ. ರಸ್ತೆಯಲ್ಲಿರುವ ಸಂಸದರ ಸರ್ಕಾರಿ ನಿವಾಸದಲ್ಲಿ ಪ್ರಜ್ವಲ್‌ ಮಲಗುತ್ತಿದ್ದ ಕೊಠಡಿಯಲ್ಲಿದ್ದ ಹಾಸಿಗೆ, ದಿಂಬು, ಹೊದಿಕೆ ಹಾಗೂ ಇತರೆ ವಸ್ತುಗಳನ್ನು ವಶಕ್ಕೆ ಪಡೆದಿದೆ. ನಿವಾಸದಲ್ಲಿ ಮಂಗಳವಾರ‌ ಮಧ್ಯಾಹ್ನ ಎಸ್‌ಐಟಿ ಹಾಗೂ ಎಫ್‌ಎಸ್‌ಎಲ್ ತಂಡ ಆರಂಭಿಸಿದ್ದ ಪರಿಶೀಲನೆ ಹಾಗೂ ಸಾಕ್ಷ್ಯ ಸಂಗ್ರಹ ಕಾರ್ಯ ಬುಧವಾರ ಬೆಳಗಿನ ಜಾವ 4 ಗಂಟೆಗೆ ಪೂರ್ಣಗೊಂಡಿತು. ಸತತ ಹತ್ತು ಗಂಟೆಗಳ ಕಾಲ ಪರಿಶೀಲನೆ ನಡೆಯಿತು.

ಸ್ಥಳ ಮಹಜರು: ಅಶ್ಲೀಲ ವಿಡಿಯೊ ಗಳ ಪೆನ್‌ಡ್ರೈವ್ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿ, ಬೆಂಗಳೂರಿನಲ್ಲಿ ಬಂಧಿಸಿರುವ ನವೀನ್‌ಗೌಡ ಹಾಗೂ ಚೇತನ್‌ ಗೌಡ ಅವರನ್ನು ನಗರಕ್ಕೆ ಕರೆತಂದ ಎಸ್‌ಐಟಿ ಅಧಿಕಾರಿಗಳು ಸ್ಥಳ ಮಹಜರು ನಡೆಸಿದರು.

ಹಿಮ್ಸ್ ಆಸ್ಪತ್ರೆಯಲ್ಲಿ ಇಬ್ಬರ ಆರೋಗ್ಯ ತಪಾಸಣೆ ನಡೆಸಲಾಯಿತು. ನಂತರ ಇಲ್ಲಿನ ಸೈಬರ್ ಅಪರಾಧ ಠಾಣೆಯಲ್ಲಿ ಎಎಸ್ಪಿ ಎಂ.ಕೆ. ತಮ್ಮಯ್ಯ, ಇನ್‌ಸ್ಪೆಕ್ಟರ್ ಜಗದೀಶ್‌ ನೇತೃತ್ವದಲ್ಲಿ ವಿಚಾರಣೆ ನಡೆಸಲಾಯಿತು. ಇಬ್ಬರನ್ನೂ ಅವರ ಮನೆಗಳಿಗೆ ಕರೆದೊಯ್ದು ಸ್ಥಳ ಮಹಜರು ನಡೆಸಲಾಯಿತು.

ನಂತರ ಇಲ್ಲಿನ 2 ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯಕ್ಕೆ ಆರೋಪಿಗಳನ್ನು ಹಾಜರುಪಡಿಸಿದ್ದು, ಜೂನ್ 1 ರ ಸಂಜೆಯವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.

ಭವಾನಿ ರೇವಣ್ಣ ಜಾಮೀನು: 31ಕ್ಕೆ ಆದೇಶ

ಬೆಂಗಳೂರು: ‘ಸಂಸದ ‍‍ಪ್ರಜ್ವಲ್‌ ರೇವಣ್ಣ ವಿರುದ್ಧದ ಅತ್ಯಾಚಾರ ಆರೋಪ ಪ್ರಕರಣದಲ್ಲಿ ಅವರ ತಾಯಿ ಭವಾನಿ ಅವರನ್ನು ವಿಚಾರಣೆ ನಡೆಸಲು ಮುಂದಾಗಿರುವ ಎಸ್‌ಐಟಿ ನಡೆಯಲ್ಲಿ ದುರುದ್ದೇಶವಿದ್ದು, ಪಾರದರ್ಶಕವಾಗಿ ತನಿಖೆ ನಡೆಸುತ್ತಿಲ್ಲ’ ಎಂದು ಭವಾನಿ ರೇವಣ್ಣ ಪರ ಹಿರಿಯ ವಕೀಲರು ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಪ್ರಕರಣದ ಸಂತ್ರಸ್ತೆಯೊಬ್ಬರ ಅಪಹರಣದ ಆರೋಪದಡಿ ಬಂಧನ ಭೀತಿಯಿಂದ ಭವಾನಿ ರೇವಣ್ಣ ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿಯನ್ನು, ‘ಶಾಸಕರು– ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ’ಯ ವಿಶೇಷ ನ್ಯಾಯಾಲಯದ (ಸಿಸಿಎಚ್‌–82) ನ್ಯಾಯಾಧೀಶ ಸಂತೋಷ ಗಜಾನನ ಭಟ್‌ ಬುಧವಾರ ವಿಚಾರಣೆ ನಡೆಸಿದರು.

ವಿಚಾರಣೆ ವೇಳೆ ಭವಾನಿ ರೇವಣ್ಣ ಪರ ಹೈಕೋರ್ಟ್‌ನ ಹಿರಿಯ ವಕೀಲ ಸಂದೇಶ್ ಜೆ.ಚೌಟ ವಾದ ಮಂಡಿಸಿ, ‘ಭವಾನಿ ವಿರುದ್ಧದ ಆರೋಪಗಳು ರಾಜಕೀಯ ಷಡ್ಯಂತ್ರದಿಂದ ಕೂಡಿವೆ. ಅವರ ವಿರುದ್ಧ ಯಾವುದೇ ಸಾಕ್ಷ್ಯಾಧಾರ ಇಲ್ಲ. ಆರೋಪಿಯು ತನಿಖೆಗೆ ಸಂಪೂರ್ಣ ಸಹಕಾರ ನೀಡಲಿದ್ದಾರೆ. ಆದ್ದರಿಂದ, ನಿರೀಕ್ಷಣಾ ಜಾಮೀನು ಮಂಜೂರು ಮಾಡಬೇಕು’ ಎಂದು ಕೋರಿದರು.

ಇದಕ್ಕೆ ಪ್ರತಿಯಾಗಿ ಪ್ರಾಸಿಕ್ಯೂಷನ್‌ ಪರ ಹಾಜರಿದ್ದ ವಿಶೇಷ ಪ್ರಾಸಿಕ್ಯೂಟರ್ ಬಿ.ಎನ್‌.ಜಗದೀಶ್‌, ‘ಪ್ರಕರಣದ ಅನೇಕ ಆರೋಪಿಗಳ ಜೊತೆ ಭವಾನಿ ಫೋನ್‌ ಸಂಭಾಷಣೆ ನಡೆಸಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ಈ ಸಂಭಾಷಣೆಯಲ್ಲಿ ಭವಾನಿಯವರ ಪಾತ್ರವನ್ನು ನಿರೂಪಿಸುವ ಹಲವು ಸ್ವಾರಸ್ಯಕರ ಅಂಶಗಳಿವೆ’ ಎಂದರು.

ಇದನ್ನು ಅಲ್ಲಗಳೆದ ಸಂದೇಶ್‌ ಚೌಟ ಅವರು, ‘ಅಪಹರಣಕ್ಕೆ ಒಳಗಾಗಿದ್ದಾರೆ ಎನ್ನಲಾದ ಮಹಿಳೆ ಭವಾನಿ ರೇವಣ್ಣ ಅವರ ಮನೆಯ ಹಳೆಯ ಕೆಲಸದಾಕೆ. ಆಕೆ ಮೂರು ವರ್ಷಗಳ ಹಿಂದೆ ಕೆಲಸ ಬಿಟ್ಟಿದ್ದರು. ಆಕೆಯನ್ನು ಪುನಃ ಮನೆಗೆ ಕರೆಸಿಕೊಳ್ಳಲಾಗಿತ್ತು ಮತ್ತು 26ರಂದು ವಾಪಸು ಕಳುಹಿಸಲಾಗಿದೆ. ಆಕೆ ಮನೆಯಿಂದ ಹೋಗುವಾಗ ಬೈಕ್ ಹತ್ತಿ ಹೋಗಿದ್ದಾರೆ. ಇಲ್ಲಿ ಯಾರ ಒತ್ತಡವಿಲ್ಲ, ಬಲವಂತವಿಲ್ಲ. ಹೀಗಿರುವಾಗ ಅಪಹರಣ ಆರೋಪ ಉದ್ಭವಿಸಲು ಹೇಗೆ ಸಾಧ್ಯ’ ಎಂದು ಪ್ರಶ್ನಿಸಿದರು.

ಸುದೀರ್ಘ ವಾದ–ಪ್ರತಿವಾದ ಆಲಿಸಿದ ನ್ಯಾಯಪೀಠ ಆದೇಶವನ್ನು ಇದೇ 31ರಂದು ಪ್ರಕಟಿಸುವುದಾಗಿ ತಿಳಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT