ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡುವ ಅಂಗಮಾರಿ ರೋಗ: ರೈತರಿಗೆ ಆಸರೆಯಾಗದ ಆಲೂಗೆಡ್ಡೆ

ಬೆಂಬಿಡದೇ ಸುರಿಯುತ್ತಿರುವ ಮಳೆ
Last Updated 20 ಜುಲೈ 2022, 19:03 IST
ಅಕ್ಷರ ಗಾತ್ರ

ಹಾಸನ: ‘ಹರಸಾಹಸ ಪಟ್ಟು ಬಿತ್ತನೆ ಬೀಜ ತರಬೇಕು. ದೇವರ ಮೇಲೆ ಭಾರ ಹಾಕಿ ಬಿತ್ತನೆ ಮಾಡಬೇಕು. ಮಳೆ ಬಂದರೆ ಮುಗಿದೇ ಹೋಯಿತು. ಜೊತೆಗೆ ಅಂಗಮಾರಿ, ಕರಿಕಡ್ಡಿ ರೋಗ ಬೇರೆ. ಹಾಕಿದ ಬಂಡವಾಳವೂ ವಾಪಸ್‌ ಬರಲಾರದು ಎಂಬ ಪರಿಸ್ಥಿತಿ. ಅದಕ್ಕೇ ಆಲೂಗೆಡ್ಡೆಯ ಸಹವಾಸವೇ ಬೇಡ ಎನ್ನುವಂತಾಗಿದೆ’

-ಆಲೂರು ತಾಲ್ಲೂಕು ಬಸವನಹಳ್ಳಿಯ ರೈತ ಸ್ವಾಮಿನಾಥ ಅವರ ಸಂಕಟದ ನುಡಿಗಳಿವು.

ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಆಲೂಗೆಡ್ಡೆಯಿಂದ ಮೂರೇ ತಿಂಗಳಲ್ಲಿ ರೈತರ ಜೇಬು ತುಂಬುತ್ತಿತ್ತು. ಮುಂಗಾರು ಮಳೆ ಭರ್ತಿಯಾಗಿ ಶುರುವಾಗುವ ಹೊತ್ತಿಗೆ ಲಾಭಾಂಶ ಕೈಸೇರುತ್ತಿತ್ತು. ಮತ್ತೆ ಕೃಷಿ ಚಟುವಟಿಕೆ ನಡೆಸಲು ಅನುಕೂಲವೂ ಆಗುತ್ತಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ರೈತರು, ‘ಆಲೂಗೆಡ್ಡೆ ಬೆಳೆಯುವುದೇ ಕೈಸುಟ್ಟುಕೊಳ್ಳುವ ಕೆಲಸ’ ಎನ್ನುತ್ತಿದ್ದಾರೆ.

ಜಿಲ್ಲೆಯ ಅರಕಲಗೂಡು, ಆಲೂರು, ಹಾಸನ ತಾಲ್ಲೂಕಿನಲ್ಲಿ ಹೆಚ್ಚಾಗಿ ಆಲೂಗೆಡ್ಡೆ ಬೆಳೆಯಲಾಗುತ್ತದೆ. 15 ವರ್ಷಗಳ ಹಿಂದೆ ಸುಮಾರು 50 ಸಾವಿರ ಹೆಕ್ಟೇರ್‌ನಲ್ಲಿ ಬೆಳೆಯುತ್ತಿದ್ದ ಆಲೂಗೆಡ್ಡೆ ಬೆಳೆ, ಈ ವರ್ಷ ಕೇವಲ 3,600 ಹೆಕ್ಟೇರ್‌ಗೆ ಇಳಿದಿದೆ. ಮಳೆ, ರೋಗದ ಬಾಧೆ ಕಾಡದಿದ್ದರೆ, ಒಳ್ಳೆಯ ಬೆಳೆ ಬರುತ್ತದೆ. ಆಗ ಮಾರುಕಟ್ಟೆಯ ಸಮಸ್ಯೆ ಎದುರಾಗುತ್ತದೆ. ಆದರೆ 3–4 ವರ್ಷದಿಂದ ಮಾರುಕಟ್ಟೆಯನ್ನು ನೋಡುವ ಪರಿಸ್ಥಿತಿಯೇ ಬರುತ್ತಿಲ್ಲ. ಆಲೂಗೆಡ್ಡೆ ಹೊಲದಲ್ಲಿಯೇ ಹಾಳಾಗಿ ಹೋಗುತ್ತಿದೆ’ ಎನ್ನುವ ನೋವು ರೈತರದ್ದು.

‘ಈ ವರ್ಷ 190 ಹೆಕ್ಟೇರ್‌ ಬೆಳೆ ಮಳೆಯಿಂದ ಹಾಳಾಗಿದೆ’ ಎನ್ನುವುದು ತೋಟಗಾರಿಕೆ ಇಲಾಖೆಯ ಮಾಹಿತಿ. ಆದರೆ, ‘ಶೇ 50 ರಷ್ಟು ಬೆಳೆ ನಷ್ಟವಾಗಿದೆ’ ಎನ್ನುವುದು ರೈತರ ವಾದ.

‘ಪ್ರತಿ ಎಕರೆ ಆಲೂಗೆಡ್ಡೆ ಬೆಳೆಯಲು ₹ 50 ಸಾವಿರ ಖರ್ಚಾಗುತ್ತದೆ. ಕಳಪೆ ಗುಣಮಟ್ಟದ ಬಿತ್ತನೆ ಬೀಜ, ಮಳೆ, ಅಂಗಮಾರಿ ರೋಗ ಸೇರಿದಂತೆ ಹಲವು ಸಂಕಷ್ಟಗಳನ್ನು ಎದುರಿಸಬೇಕು’ ಎಂದು ಹಾಸನ ತಾಲ್ಲೂಕಿನ ದುದ್ದ ಗ್ರಾಮದ ರೈತ ರಾಮಣ್ಣ ಹೇಳುತ್ತಾರೆ.

‘ಈ ಬಾರಿ ಅರಕಲಗೂಡು ತಾಲ್ಲೂಕಿನಲ್ಲಿ 780 ಹೆಕ್ಟೇರ್ ಪ್ರದೇಶದಲ್ಲಿ ಆಲೂಗೆಡ್ಡೆ ಬೆಳೆಯಲಾಗಿದ್ದು, ಹೆಚ್ಚಿನ ಮಳೆಗೆ ಬೆಳೆ ಹಾನಿಯಾಗಿದೆ. ಉಳಿದ ಬೆಳೆಯಲ್ಲೂ ಇಳುವರಿ ಕಡಿಮೆಯಾಗುವ ಸಾಧ್ಯತೆ ಇದೆ. 53 ರೈತರ ಬೆಳೆ ಹಾನಿಯಾಗಿದ್ದು, ₹4.68 ಲಕ್ಷ ಪರಿಹಾರಕ್ಕೆ ಶಿಫಾರಸು ಮಾಡಲಾಗಿದೆ’ ಎಂದು ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಡಿ. ರಾಜೇಶ್ ತಿಳಿಸಿದರು.

ಮೇ ತಿಂಗಳಲ್ಲೂ ಮಳೆ ಹೆಚ್ಚಾಗಿತ್ತು. ಕೆಲವೆಡೆ ಬಿತ್ತನೆ ಮಾಡಿದ ಬೀಜಗಳೂ ಮಳೆಯಿಂದಾಗಿ ಹಾಳಾಗಿದ್ದವು. ಈಗಲೂ ಧಾರಾಕಾರ ಮಳೆಯಿಂದ ಆಲೂಗಡ್ಡೆಗೆ ಹಾನಿಯಾಗಿದೆ.

–ಎಚ್.ಆರ್. ಯೋಗೇಶ್‌, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಹಾಸನ

***

2.10 ಎಕರೆ ಪ್ರದೇಶದಲ್ಲಿ ಆಲೂಗಡ್ಡೆ ಕೃಷಿ ಮಾಡಿದ್ದೆ. ಭಾರಿ ಮಳೆಗೆ ಜಮೀನಿನಲ್ಲಿ ನೀರು ತುಂಬಿದ ಕಾರಣ ಸಂಪೂರ್ಣ ಬೆಳೆ ಹಾಳಾಗಿದೆ. ಸರ್ಕಾರ ಸೂಕ್ತ ಪರಿಹಾರ ನೀಡಬೇಕು.

–ಜಗದೀಶ್, ಶ್ಯಾನುಭೋಗನಹಳ್ಳಿ ಆಲೂಗಡ್ಡೆ ಬೆಳೆಗಾರ

***

30 ವರ್ಷಗಳಿಂದ ಆಲೂಗಡ್ಡೆ ಬೆಳೆಯುತ್ತಿದ್ದೇನೆ. ಒಂದು ಎಕರೆಯಲ್ಲಿ ಬೆಳೆಯಬೇಕಾದರೆ ₹50 ಸಾವಿರ ಖರ್ಚಾಗುತ್ತದೆ. ಪ್ರತಿ ವರ್ಷ ಕರಿಕಡ್ಡಿ ರೋಗ, ಮಳೆಯಿಂದ ಸಂಪೂರ್ಣ ನಾಶವಾಗುತ್ತಿದೆ.

–ಸ್ವಾಮಿಗೌಡ, ಬಸವನಹಳ್ಳಿ ಗ್ರಾಮದ ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT