ಬುಧವಾರ, ಸೆಪ್ಟೆಂಬರ್ 18, 2019
28 °C
‘ಸೋನಿಯಾ ಗಾಂಧಿ ಒಪ್ಪಿದರೆ ಮುಂದಿನ ಮೈತ್ರಿಯ ಬಗ್ಗೆ ತೀರ್ಮಾನ‘

ಗೌಡನ ಮುಗಿಸಲು ಬಂದವರು ಮುಗಿದು ಹೋಗಿದ್ದಾರೆ: ಎಚ್‌.ಡಿ. ದೇವೇಗೌಡ

Published:
Updated:
Prajavani

ಹೊಳೇನರಸೀಪುರ (ಹಾಸನ): ‘ದೇವೇಗೌಡನನ್ನು ಮುಗಿಸಲು ಬಂದವರೆಲ್ಲಾ ಮುಗಿದು ಹೋಗಿದ್ದಾರೆ’ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಹೇಳಿದರು.

ಶನಿವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಯಾರು ಬಿಟ್ಟು ಹೋದರೂ ಪಕ್ಷ ಕಟ್ಟಿದ್ದೇನೆ, ಆ ಶಕ್ತಿ ಈಗಲೂ ಇದೆ. ನಾನು ದೇವರನ್ನು ನಂಬಿರುವುದರಿಂದಲೇ ಹೋರಾಟ ಮಾಡುತ್ತಿದ್ದೇನೆ’ಎಂದರು.

‘ಸಿದ್ದರಾಮಯ್ಯ ನನ್ನ ವಿರುದ್ಧ ಮಾಡಿರುವ ಆರೋಪಿಗಳಿಗೆ ಪ್ರತಿಕ್ರಿಯೆ ನೀಡುವುದಿಲ್ಲ. ಅವರ ಹೇಳಿಕೆಯನ್ನು ಜನರು ನಂಬಬೇಕಲ್ಲ? ಸಮಯ ಬಂದಾಗ ಎಲ್ಲವನ್ನೂ ಹೇಳುವೆ. ಇನ್ನೂ ನೆನಪಿನ ಶಕ್ತಿ ಇದೆ. ನೋಡೋಣ ಜನರ ಮುಂದೆ ಹೋಗೋಣ’ ಎಂದರು.

‘ಚುನಾವಣೆಯಲ್ಲಿ ನಿಖಿಲ್‌ ಹಾಗೂ ನಾನು ಸೋತಿದ್ದರೂ ಮನೆಯಲ್ಲಿ ಕುಳಿತಿಲ್ಲ. ಸೋಲಿಗೆ ನಾನು ಯಾರನ್ನೂ ಹೊಣೆ ಮಾಡುವುದಿಲ್ಲ. ನಾವು ಅಧಿಕಾರದ ಬೆನ್ನು ಬಿದ್ದು ಹೋಗಿಲ್ಲ. ಜನರ ಬಳಿಯೇ ಇದ್ದೇವೆ’ ಎಂದರು.

‘ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಎಲ್ಲ ಪ್ರಾದೇಶಿಕ ಪಕ್ಷಗಳನ್ನು ಒಗ್ಗೂಡಿಸುವ ಹೊಸ ಜವಾಬ್ದಾರಿ ತೆಗೆದುಕೊಂಡಿದ್ದಾರೆ. ಮುಂದಿನ ಚುನಾವಣೆಯಲ್ಲಿ ಸೋನಿಯಾ ಒಪ್ಪಿದರೆ ಮೈತ್ರಿ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಇನ್ನೂ ಮೂರು ವರ್ಷ ಅಧಿಕಾರ ನಡೆಸಲಿದೆ. ಒಳ್ಳೆಯ ಕೆಲಸ ಮಾಡಿದರೆ ಬೆಂಬಲ ನೀಡಲಾಗುವುದು. ಇಲ್ಲವಾದರೆ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

* ಅರುಣ್‌ ಜೇಟ್ಲಿ ಒಬ್ಬ ಮುತ್ಸದ್ದಿ ನಾಯಕ. ಕಾನೂನು, ಹಣಕಾಸು, ರಕ್ಷಣಾ ಸಚಿವರಾಗಿ ಜವಾಬ್ದಾರಿಯಿಂದ ಕೆಲಸ ಮಾಡಿದ್ದಾರೆ. ದೇಶದ ಭ್ರಷ್ಟ ವ್ಯವಸ್ಥೆ ಸರಿಪಡಿಸಲು ಹಾಗೂ ವಿದೇಶದಿಂದ ಕಪ್ಪು ಹಣ ತರಲು ಕಾನೂನು ಮಾರ್ಪಾಟು ಮಾಡಿದ್ದರು. ಅವರ ನಿಧನದಿಂದ ರಾಷ್ಟ್ರಕ್ಕೆ ತುಂಬಲಾರದ ನಷ್ಟವಾಗಿದೆ

-ಎಚ್.ಡಿ.ದೇವೇಗೌಡ, ಜೆಡಿಎಸ್‌ ವರಿಷ್ಠ

ಸರ್ಕಾರ ಪತನಕ್ಕೆ ಮೈತ್ರಿ ಪಕ್ಷಗಳ ಮುಖಂಡರೇ ಕಾರಣ: ಬಸವರಾಜ ಹೊರಟ್ಟಿ

ಕಾರವಾರ: ‘ಸಮ್ಮಿಶ್ರ ಸರ್ಕಾರ ಪತನವಾಗಲು ಕಾಂಗ್ರೆಸ್ ಮತ್ತು ಜೆಡಿಎಸ್ ‍ಪಕ್ಷಗಳ ನಾಯಕರೇ ಕಾರಣ. ಹಿರಿಯರಾದ ದೇವೇಗೌಡರು ಸರ್ಕಾರ ಸುಗಮವಾಗಿ ನಡೆಯಲು ಮಾರ್ಗದರ್ಶನ ಮಾಡಬೇಕಿತ್ತು. ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರೂ ಜೊತೆಯಾಗಿ ಮೊದಲೇ ಕುಳಿತು ಯಾಕೆ ಸಮಸ್ಯೆ ಬಗೆಹರಿಸಿಕೊಳ್ಳಲಿಲ್ಲ’ ಎಂದು ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಪ್ರಶ್ನಿಸಿದರು. 

ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಎರಡೂ ಪಕ್ಷಗಳ ಶಾಸಕರು ದಿನವೂ ಒಂದೊಂದು ಹೇಳಿಕೆ ಕೊಟ್ಟಾಗಲೂ ನಾಯಕರು ಸುಮ್ಮನಿದ್ದರು. ಅಶಿಸ್ತಿನ ವಿರುದ್ಧ ಕಠಿಣವಾದ ತೀರ್ಮಾನಗಳನ್ನು ತೆಗೆದುಕೊಳ್ಳುವ ಶಕ್ತಿ ಅವರಲ್ಲಿ ಇರಲಿಲ್ಲ’ ಎಂದರು.

‘ಬಿಜೆಪಿ ಅಧಿಕಾರಕ್ಕೆ ಬರಬಾರದು ಎಂದು ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗುವ ಮೊದಲೇ ಕಾಂಗ್ರೆಸ್‌ನವರು ದೇವೇಗೌಡರಿಗೆ ಶರಣಾದರು. ಕುಮಾರಸ್ವಾಮಿ ಮುಖ್ಯಮಂತ್ರಿ ಎಂದು ಅವರೇ ಪ್ರಕಟಿಸಿದರು. ಸರ್ಕಾರ ರಚನೆಯಾದ ಬಳಿಕ ಎರಡೂ ಪಕ್ಷಗಳ ಮುಖಂಡರ ಭಾವನೆಗಳು ಹೊಂದಿಕೊಳ್ಳಲಿಲ್ಲ. ಹೀಗಾಗಿ ಸರ್ಕಾರಕ್ಕೆ 14 ತಿಂಗಳು ಆದ ಮೇಲೆ ಆಪರೇಷನ್ ಕಮಲದ ಪರಿಸ್ಥಿತಿ ನಿರ್ಮಾಣವಾಯ್ತು’ ಎಂದು ಅವರು ಅಭಿಪ್ರಾಯಪಟ್ಟರು.

‘ಬಿಜೆಪಿಯಲ್ಲೂ ಅತೃಪ್ತರು ಜಾಸ್ತಿಯಾಗಿದ್ದಾರೆ. ಆದರೆ, ಆ ಪಕ್ಷದ ಹೈಕಮಾಂಡ್ ಸ್ವಲ್ಪ ಗಟ್ಟಿಯಾಗಿದೆ. ಇದೊಂದೇ ನಮಗೂ ಅವರಿಗೂ ಇರುವ ವ್ಯತ್ಯಾಸ. ಅತೃಪ್ತಿಯ ಎಲ್ಲ ಮನಸ್ಸುಗಳೂ ಕೂಡಿ ಇನ್ನೊಂದು ಸ್ವಲ್ಪ ದಿನ ಸರ್ಕಾರ ನಡೆಸುತ್ತವೆ ಎಂದು ನಾನು ನಂಬಿದ್ದೇನೆ’ ಎಂದರು.

‘ಕತ್ತಿ’ಗೆ ಗಾಳ ಹಾಕಿಲ್ಲ: ಶಾಸಕ ಉಮೇಶ ಕತ್ತಿ ಅವರನ್ನು ಸೆಳೆಯಲು ನೀವು ಪ್ರಯತ್ನಿಸಿದ್ದೀರಿ ಎನ್ನಲಾಗುತ್ತಿದೆ ಎಂದು ಸುದ್ದಿಗಾರರು ಕೇಳಿದಾಗ ಪ್ರತಿಕ್ರಿಯಿಸಿದ ಬಸವರಾಜ ಹೊರಟ್ಟಿ, ‘ಅವರಿಗೆ ರಾಜೀನಾಮೆ ಕೊಡಬೇಡಿ, ಕಾಲ ಬದಲಾಗ್ತದೆ, ನೋಡೋಣ ಎಂದು ‌ಹೇಳಿದ್ದೇನೆ’ ಎಂದು ಸ್ಪಷ್ಟನೆ ನೀಡಿದರು.

 

Post Comments (+)